ಕ್ವಾರಂಟೈನ್‌ನಲ್ಲಿ ಮುಖ್ಯಮಂತ್ರಿ ಬಿಎಸ್‌ವೈ ಕೈಹಿಡಿದ ‘ಯಯಾತಿ’

CM-yayathi
Published on

ಬೆಂಗಳೂರು: ಮುಖ್ಯಮಂತ್ರಿ ಗೃಹ ಕಚೇರಿ ಹಾಗೂ ಸರ್ಕಾರಿ ನಿವಾಸದ ಸಿಬ್ಬಂದಿಗೆ ಕರೊನಾ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ನವರು ಕೆಲವು ದಿನಗಳ ಕಾಲ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕ್ವಾರಂಟೈನ್‌ ಸಮಯದಲ್ಲಿ ಭೇಟಿಯಾಗುವವರು, ಮೀಟಿಂಗ್‌ ಇತ್ಯಾದಿಗಳ ಬಿರುಸಿನ ಚಟುವಟಿಕೆ ಇರದ ಹಿನ್ನೆಲೆಯಲ್ಲಿ ಸಮಯ ಕಳೆಯುವ ಸಲುವಾಗಿ ಮುಖ್ಯಮಂತ್ರಿಗಳು ‘ಯಯಾತಿ’ ಪುಸ್ತಕವನ್ನು ಕೈಗೆತ್ತಿಕೊಂಡಿದ್ದಾರೆ.

ಇಂದು ಬೆಳಗ್ಗೆ ಕರೊನಾ ಸಂಬಂಧಿಸಿದ ಸಭೆ ಮುಗಿದ ಬಳಿಕ ಮರಾಠಿ ಲೇಖಕ ವಿ.ಎಸ್ ಖಾಂಡೇಕರ್ ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಯಯಾತಿ ಕನ್ನಡಾನುವಾದ ಪುಸ್ತಕ ಓದಲು ಶುರುಮಾಡಿದ್ದಾರೆ. ಈ ಪುಸ್ತಕವನ್ನು ವಿ.ಎಂ.ಇನಾಂದಾರ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಪುಸ್ತಕ ಓದುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ, ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ಇಂದಿನ ಭಾನುವಾರದ ಲಾಕ್ ಡೌನ್ ಮತ್ತು ಸ್ವ-ಕ್ವಾರಂಟೈನ್ ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆಗೆ ಕಳೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಹಾಗೂ ಸರ್ಕಾರಿ ನಿವಾಸ ಕಾವೇರಿಯ ಒಟ್ಟು 10 ಮಂದಿ ಸಿಬ್ಬಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಸ್ವಯಂ ನಿರ್ಬಂಧಕ್ಕೆ ಯಡಿಯೂರಪ್ಪ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net