

ನಮ್ಮ ನಡುವೆ ಹೋರಾಟದ ಮೂಲಕವೇ ಜನನಾಯಕರಾಗಿ ಕಾಣಿಸಿಕೊಳ್ಳುವ ಮತ್ತು ರಾಜ್ಯದ ಉದ್ದಗಲಕ್ಕೆ ನಾಯಕತ್ವ ಒಪ್ಪಿಕೊಳ್ಳುವ ಹೆಸರುಗಳು ಕೆಲವೇ ಕೆಲವು, ಒಂದೆರಡು ಅಷ್ಟೇ. ಅದರಲ್ಲಿ ಬಿ.ಎಸ್.ಯಡಿಯೂರಪ್ಪ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಬಿಜೆಪಿ ಉತ್ತರ ಭಾರತದ ಪಕ್ಷ, ದಕ್ಷಿಣದಲ್ಲಿ ನೆಲೆಯೂರಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವಿದ್ದ ಕಾಲದಲ್ಲಿ ಸೈಕಲ್ ತುಳಿದು ಹಳ್ಳಿ ಹಳ್ಳಿ ತಿರುಗಿ, ಪಾದಯಾತ್ರೆಗಳನ್ನು ಮಾಡಿ, ಅಹೋರಾತ್ರಿ ಧರಣಿ ನಡೆಸಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಬಿಎಸ್ವೈ.
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಬೆಳೆದುಬಂದ ಹಾದಿಯನ್ನೊಮ್ಮೆ ಇಣುಕಿದರೆ ಎಂತಹವರೂ ಹುಬ್ಬೇರಿಸುವುದು ದಿಟ. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಒಬ್ಬ ಸಾಮಾನ್ಯ ವ್ಯಕ್ತಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ತೆರಳಿ ಹಂತಹಂತವಾಗಿ ಬೆಳೆದು ರಾಜ್ಯದ ಮುಖ್ಯಮಂತ್ರಿಯಾದ ಸಾಧನೆ ರಣರೋಚಕ. ಪದೇಪದೆ ಎದುರಾಗುವ ಸಂಕಷ್ಟಗಳು, ಸಂಕಷ್ಟ ಬಂದಷ್ಟು ಇನ್ನಷ್ಟು ಮತ್ತಷ್ಟು ಗಟ್ಟಿಗೊಳ್ಳುವ ವ್ಯಕ್ತಿತ್ವ ಅವರದ್ದೆಂಬುದಕ್ಕೆ ಉದಾಹರಣೆಗಳು ಸಾಕಷ್ಟು.
ಸೈಕಲ್ನಲ್ಲಿ ಲಿಂಬೆಹಣ್ಣು ಮಾರಾಟ ಮಾಡಿದ್ದು, ರೈಸ್ವಿುಲ್ ರೈಟರ್ ಕೆಲಸ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಕಾರ್ಯ ಹೀಗೆ ತೀರಾ ತಳಮಟ್ಟದಿಂದ ಬೆಳೆದುಬಂದು ಶಾಸಕನಾಗಿ, ಪ್ರತಿಪಕ್ಷ ನಾಯಕನಾಗಿ, ರಾಜ್ಯದ ಮುಖ್ಯಮಂತ್ರಿ ಹಂತದವರೆಗೆ ಒಂದೊಂದೇ ಮೆಟ್ಟಿಲು ಹತ್ತಿಬಂದವರು ಬಿಎಸ್ವೈ. ಅಜ್ಜಿ, ಅಪ್ಪ ಅಥವಾ ಕುಟುಂಬ ಹಾಕಿದ ಆಲದ ಮರಕ್ಕೆ ಜೋತುಕೊಂಡು ರಾತ್ರೋರಾತ್ರಿ ಸಿಎಂ ಕುರ್ಚಿಯಲ್ಲಿ ಕುಳಿತ ಉದ್ಭವ ಮೂರ್ತಿಯಲ್ಲ ಎಂಬುದು ರಾಜ್ಯದ ಜನರಿಗೂ ಸ್ಪಷ್ಟ ಅರಿವಿದೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ಅವರ ಕೈ ಹಿಡಿದು ಮುನ್ನೆಡೆಸಿದ್ದಾರೆ. ಚುನಾವಣೆ ಫಲಿತಾಂಶಗಳಲ್ಲಿ ಬಿಎಸ್ವೈ ಮೇಲೆ ಜನರಿಗಿರುವ ಪ್ರೀತಿ ಫಲಿತವಾಗುತ್ತಿವೆ.
ಬಿಎಸ್ವೈ ಸಾಗಿಬಂದ ಹಾದಿಯನ್ನೊಮ್ಮೆ ಕಣ್ಣುಮುಂದೆ ತಂದುಕೊಳ್ಳುವುದಾದರೆ, ಬೂಕನಕೆರೆಯಲ್ಲಿ 1943ರಲ್ಲಿ ಜನಿಸಿ, 1965ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಲ್ಲಿ ಶಿಕಾರಿಪುರಕ್ಕೆ ಆಗಮಸಿದ್ದು ಅವರ ಪಾಲಿನ ಮಹತ್ವದ ಟರ್ನಿಂಗ್ ಪಾಯಿಂಟ್. 1967ರಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ, 1970 ಆರ್ಎಸ್ಎಸ್ನ ಶಿಕಾರಿಪುರ ತಾಲೂಕು ಕಾರ್ಯವಾಹರೂ ಆಗಿ ಜವಾಬ್ದಾರಿ ತೆಗೆದುಕೊಂಡರು. ಬಳಿಕ ಅಧಿಕೃತವಾಗಿ ರಾಜಕೀಯ ಪ್ರವೇಶ ನೀಡಿದರು. 1972 ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕ್ಷರಾಗಿ ನೇಮಕ. 1975ರಲ್ಲಿ ಶಿಕಾರಿಪುರ ಪುರಸಭಾ ಸದಸ್ಯರಾಗಿ ಆಯ್ಕೆಯಾದರು. ಅದೇ ವರ್ಷ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ 45 ದಿನಗಳ ಜೈಲುವಾಸವನ್ನೂ ಅನುಭವಿಸಿದರು.
ಅಲ್ಲಿಂದ ಮತ್ತೊಂದು ಹೆಜ್ಜೆ ಮುಂದೆ ಹೋಗಿ 1977ರಲ್ಲಿ ಶಿಕಾರಿಪುರ ಪುರಸಭಾ ಅಧ್ಯಕ್ಷಗಾದಿ ಅಲಂಕರಿಸಿದರು. 1980ರಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾಗಿ, 1981 ಜೀತದಾಳು ವಿಮುಕ್ತಿ ಹೋರಾಟದ ನಾಯಕತ್ವ ತೆಗೆದುಕೊಂಡು ಪಾದಯಾತ್ರೆ ನಡೆಸಿ ರಾಜ್ಯದ ಗಮನ ಸೆಳೆದರು. ಈ ಪರಿಣಾಮ 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಮಾಡಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡರು. 1985ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ, 1988ರಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ನೊಗ ಹೊತ್ತರು. 1992ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆಗೊಂಡರು. 1994ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಗೊಂಡು ಅಂದಿನ ಸರ್ಕಾರಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದು ಇಂದಿಗೂ ರಾಜಕೀಯ ವಲಯದಲ್ಲಿ ಜನಜನಿತ.
ಯಡಿಯೂರಪ್ಪ ರಾಜಕೀಯ ಹಾದಿಯಲ್ಲಿ ಹಿನ್ನೆಡೆಗಳೂ ಸಾಕಷ್ಟು. 1999ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರು. ಆ ಮೂಲಕ ಅವರ ರಾಜಕೀಯ ಭವಿಷ್ಯ ಇಲ್ಲಿಗೆ ಮುಗಿಯಿತು ಎಂದು ಆಡಿಕೊಂಡವರೂ ಇದ್ದರು. ಆದರೆ 2000ದಲ್ಲಿ ವಿಧಾನಪರಿಷತ್ಗೆ
ಆಯ್ಕೆಯಾದರು. 2003ರಲ್ಲಿ ಬಗರ್ಹುಕುಂ ರೈತರ ಜಮೀನು ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಸಂಚಲನ ಸೃಷ್ಟಿಸಿದರು. ಈ ಹೋರಾಟ 5ನೇ ಬಾರಿಗೆ ವಿಧಾನಸಭೆ ಪ್ರವೇಶ ಆಗುವಂತೆ ಮಾಡಿತಲ್ಲದೆ, ಪ್ರತಿಪಕ್ಷದ ನಾಯಕನಾಗಲು ಮತ್ತೆ ಅವಕಾಶ ಒದಗಿಸಿತು.
ಅಧಿಕಾರ ಹಿಡಿಯುವ ಕಾಲವೂ ಒದಗಿಬಂತು. 2006ರಲ್ಲಿ ಉಪ ಮುಖ್ಯಮಂತ್ರಿಯಾದರು, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಿಸಿದರು. 2007ರ ನವೆಂಬರ್ನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಆದರೆ ಜೆಡಿಎಸ್ ವಿಶ್ವಾಸದ್ರೋಹದಿಂದ ರಾಜೀನಾಮೆ ಕೊಡಬೇಕಾಗಿ ಬಂತು. ಈ ವಿಶ್ವಾಸ ದ್ರೋಹವೇ 2008ರಲ್ಲಿ ಪುನಃ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಂತೆ ಮಾಡಿತು. 2011ರಲ್ಲಿ ಸಂಕಟ ಎದುರಾಗಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತಾಯಿತು. ಪಕ್ಷ ಬಿಡುವಂತೆಯೂ ಆಯಿತು. ಮತ್ತೆ ಸವಾಲು ಜಯಿಸಿ 2014ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ ಮಾಡಿದರು. ಪಕ್ಷ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಿತು. ಪುನಃ ರಾಜ್ಯ ರಾಜಕೀಯದತ್ತ ದೃಷ್ಟಿ ನೆಟ್ಟ ಅವರಿಗೆ ಪಕ್ಷ 2016ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಿತು. ಮತ್ತದೇ ಹೋರಾಟ, ಛಲ, ರಾಜ್ಯ ಸುತ್ತಾಟ ನಡೆಸಿ ಪಕ್ಷವನ್ನು ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡಿದರು. ಮತ್ತೆ ಬಿಜೆಪಿ ಗದ್ದುಗೆ ಹಿಡಿಯುವಂತೆ ಅವರ ಪರಿಶ್ರಮ ಹಾಕಿದರು. ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಇನ್ನೇನು ಮುಚ್ಚೇ ಹೋಯಿತು ಎಂಬ ಅಭಿಪ್ರಾಯ ಬರುತ್ತಿದ್ದಾಗಲೇ ಮತ್ತೆ ಪಕ್ಷ ಪುಟಿದೇಳುವಂತೆ ಮಾಡಿದವರು ಯಡಿಯೂರಪ್ಪ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ರಾಜ್ಯದಲ್ಲಿ ಪುಡಿಗಟ್ಟಿದ್ದು ಇದೇ ಬಿಎಸ್ವೈ.