

ಬೆಂಗಳೂರು: ಮಾತಿಗೆ ತಪ್ಪದ ರಾಜಕಾರಣಿ ಎಂದು ರಾಜಕೀಯದಲ್ಲಿ ಅಪರೂಪವಾದ ಹೊಗಳಿಕೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮನ್ನು ನಂಬಿ ಬಂದ 10 ಅರ್ಹ ಶಾಸಕರಿಗೂ ಸಚಿವ ಸ್ಥಾನ ಕಲ್ಪಿಸುವ ಮೂಲಕ ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡಿದ್ದಾರೆ. ಈ ಬೆಳವಣಿಗೆ ಅವರ ಸಿಎಂ ಸ್ಥಾನ ಭದ್ರಪಡಿಸುವ ಜತೆಗೆ ವೈಯಕ್ತಿಕ ವರ್ಚಸ್ಸನ್ನೂ ಇಮ್ಮಡಿಗೊಳಿಸಿದೆ.
ರಾಜ್ಯ ರಾಜಕೀಯದಲ್ಲಿ ಕೊಟ್ಟ ಮಾತಿಗೆ ಬದ್ಧರಾಗಿರುವ ಕೆಲವೇ ರಾಜಕಾರಣಿಗಳಲ್ಲಿ ಯಡಿಯೂರಪ್ಪ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಈಗ ತಮ್ಮನ್ನು ನಂಬಿ ಬಂದ ವರಿಗೆ ಮಂತ್ರಿ ಸ್ಥಾನ ಕಲ್ಪಿಸಿದ್ದಾರೆ. ಆ ಮೂಲಕ ತಮಗೆ ಅಧಿಕಾರ ಕೊಟ್ಟ ವರಿಗೆ ತಾವು ಅಧಿಕಾರ ಕೊಟ್ಟು ತಮ್ಮ ವರ್ಚಸ್ಸನ್ನು ವರ್ಧಿಸಿ ಕೊಂಡಿದ್ದಾರೆ.
ಅಷ್ಟು ಸುಲಭವಲ್ಲ: ಹೈಕಮಾಂಡ್ ಮುಂದಿದ್ದ ಒತ್ತಡಗಳಿಂದಾಗಿ ಉಪ ಚುನಾವಣೆ ಫಲಿತಾಂಶ ಬಂದ 24 ಗಂಟೆಗಳಲ್ಲಿ ಅರ್ಹರನ್ನು ಮಂತ್ರಿಗಳನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಹಾಗೆಯೇ ಎಲ್ಲರಿಗೂ ಅವಕಾಶ ನೀಡುವುದಕ್ಕೂ ಆಗಿಲ್ಲ. ಆದರೂ ಮೂಲ ಬಿಜೆಪಿಗರನ್ನು ಬಿಟ್ಟು ಹತ್ತು ಮಂದಿ ವಲಸಿಗರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ವರಿಷ್ಠರನ್ನು ಒಪ್ಪಿಸುವುದು ಸಣ್ಣ ವಿಷಯವೇನಲ್ಲ. ಆ ನಿಟ್ಟಿನಲ್ಲಿ ತಡವಾದರೂ ಬಿಎಸ್ವೈ ಯಶಸ್ಸುಗಳಿಸಿದ್ದಾರೆ.
ತಂತ್ರಗಾರ: ಕಾಂಗ್ರೆಸ್ ಹಾಗೂ ಜೆಡಿಎಸ್ನ ಅತೃಪ್ತರು ರಾಜೀನಾಮೆ ನೀಡಿದಾಗ ಅವರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವುದೋ ಇಲ್ಲವೋ ಎಂಬ ವಾತಾವರಣ ಮೂಡಿತ್ತು. ಆ ಸಂದರ್ಭದಲ್ಲೂ ವರಿಷ್ಠರ ಮನವೊಲಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದರು. ಪ್ರತಿ ಕ್ಷೇತ್ರದಲ್ಲೂ ಸ್ವತಃ ತಾವೇ ಕೂತು 12 ಜನರನ್ನು ಗೆಲ್ಲಿಸಿಕೊಂಡು ಬಂದರು. ಆದ್ದರಿಂದಲೇ ಹೈಕಮಾಂಡ್ ಮಟ್ಟದಲ್ಲಿ ಕೆಲವರು ಅಡಿಗಡಿಗೂ ಅಡ್ಡಿ ಮಾಡಿದರೂ ಅದೆಲ್ಲವನ್ನು ಮೀರಿ ಯಶಸ್ಸು ಪಡೆಯುತ್ತಿರುವುದು ಅವರ ತಂತ್ರಗಾರಿಕೆಯೂ ಹೌದು.
ವಿರೋಧಿಗಳಿಗೆ ಉತ್ತರ: ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಬಿಜೆಪಿಯ ಒಂದು ಗುಂಪು ಯೋಗೇಶ್ವರ್ ಹೆಸರು ತೇಲಿ ಬಿಟ್ಟಿತು. ಸಂಪುಟದಲ್ಲಿ ಯಡಿಯೂರಪ್ಪ ವಿರೋಧಿ ಪಾಳಯ ಗಟ್ಟಿಯಾಗಿರಬೇಕು ಎಂಬುದು ಆ ಗುಂಪಿನ ಉದ್ದೇಶವಾಗಿತ್ತು. ಆದರೆ ಅದಕ್ಕೆ ಮೂಲ ಬಿಜೆಪಿಗರಲ್ಲಿಯೇ ವಿರೋಧ ಬರುತ್ತಿದ್ದಂತೆ ಸಂಪುಟ ವಿಸ್ತರಣೆ ಆಗುವುದೋ ಇಲ್ಲವೋ ಎಂಬ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ತಮ್ಮ ಬೆಂಬಲಿಗರನ್ನು ಸುಮ್ಮನಾಗಿಸಿ ತಮ್ಮನ್ನು ನಂಬಿ ಬಂದವರಿಗೆ ಸಂಪುಟದಲ್ಲಿ ಅವಕಾಶ ಕೊಡಿಸಿದರು. ಅಲ್ಲಿಗೆ ಎರಡನೇ ಬಾರಿ ಅವರು ಹೈಕಮಾಂಡ್ ಮಟ್ಟದಲ್ಲಿರುವ ತಮ್ಮ ವಿರೋಧಿಗಳಿಗೆ ಉತ್ತರ ರವಾನಿಸಿದ್ದರು. ಕೆಲವರು ಪುತ್ರ ವಿಜಯೇಂದ್ರ ವಿರುದ್ಧ ಆರೋಪ ಮಾಡುತ್ತಿದ್ದರೂ ಅವರನ್ನೇ ಅಮಿತ್ ಷಾ ಬಳಿಗೆ ಕರೆದೊಯ್ದು ವಿಸ್ತರಣೆಗೆ ಒಪ್ಪಿಗೆ ಪಡೆದಿದ್ದರು. ಇದೆಲ್ಲವೂ ವಿರೋಧಿಗಳನ್ನು ಸದ್ದಿಲ್ಲದೇ ಬಗ್ಗುಬಡಿಯುವ ಪ್ರಯತ್ನ ಎಂದೇ ವಿಶ್ಲೇಷಿಸಲಾಗುತ್ತಿದೆ.
ಯಾರಿಗೆ ಬೆಂಗ್ಳೂರು ಗಾದಿ?
ಏಳು ಸಚಿವರನ್ನೊಳಗೊಂಡ ಬೆಂಗಳೂರು ನಗರದ ಅಭಿವೃದ್ಧಿ ಖಾತೆಗೆ ಭಾರಿ ಬೇಡಿಕೆ ಇದೆ. ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಒಂದು ಹೆಜ್ಜೆ ಮುಂದೆ ಹೋಗಿ ‘ಸಿಎಂ ಬಳಿ ಬೆಂಗಳೂರು ನಗರಾಭಿವೃದ್ಧಿ ಕೇಳಬೇಕೆಂದಿದ್ದೇನೆ’ ಎಂದು ನೇರವಾಗಿ ಹೇಳಿದ್ದಾರೆ. ಭೈರತಿ ಬಸವರಾಜು ಕೂಡ ಆಕಾಂಕ್ಷಿ. ಉಳಿದಂತೆ ಬಿಜೆಪಿಯ ಹಾಲಿ ಸಚಿವರೂ ಬೆಂಗಳೂರಿನ ಮೇಲೆ ಕಣ್ಣಿರುವುದರಿಂದ ಈ ಖಾತೆ ಯಾರಿಗೆ ಒಲಿಯುತ್ತದೆ ಎಂಬ ಕುತೂಹಲವಿದೆ.
ಸಂಪೂರ್ಣ ಮೇಲುಗೈ
ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪ ಸ್ಪಷ್ಟವಾಗಿ ಮೇಲುಗೈ ಸಾಧಿಸಿದ್ದಾರೆ. ಈ ಹತ್ತು ಜನ ಬಿಎಸ್ವೈ ಹಾಗೂ ವಿಜಯೇಂದ್ರರನ್ನು ನಂಬಿ ಬಂದವರೇ. ಮೂಲ ಬಿಜೆಪಿಗರಲ್ಲಿಯೂ ಸದ್ಯಕ್ಕೆ ಭಿನ್ನಮತ ಕಾಣದಂತೆ ಎಚ್ಚರ ವಹಿಸಿದ್ದಾರೆ.
10 ಜನರಿಗೆ ಶನಿವಾರದ ಒಳಗಾಗಿ ಖಾತೆ ಹಂಚಿಕೆ ಮಾಡುತ್ತೇನೆ. ಸಾಧ್ಯವಾದರೆ ಈ ವಿಚಾರವಾಗಿ ಇನ್ನೊಮ್ಮೆ ದೆಹಲಿಗೆ ಹೋಗುತ್ತೇನೆ. | ಬಿ.ಎಸ್.ಯಡಿಯೂರಪ್ಪ ಸಿಎಂ
| ರುದ್ರಣ್ಣ ಹರ್ತಿಕೋಟೆ