ಸಿಎಂ ಬೊಮ್ಮಾಯಿ-ಆರೆಸ್ಸೆಸ್ ಪ್ರಮುಖ ಮುಕುಂದ್ ಚರ್ಚೆ: ಬಿಟ್ ಕಾಯಿನ್ ಕೇಸ್ ಸಮಾಲೋಚನೆಯ ಊಹಾಪೋಹ

RSS BJP
Published on

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅವರು ಭಾನುವಾರ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂನಲ್ಲಿ ಈ ಸಮಾಗಮವಾಗಿದೆ. ಉಪಾಹಾರ ಸೇವನೆಯ ಮಧ್ಯೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆದಿದೆ. ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿ ಕೆಲವು ದಿನಳಾಗಿವೆ. ಸಿಎಂ ತವರು ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಸೋತಿದ್ದು, ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಘ ಪರಿವಾರದ ಮುಖಂಡರನ್ನು ಚಿಂತೆಗೀಡು ಮಾಡಿದೆ ಎಂಬ ವಿಶ್ಲೇಷಣೆ, ವ್ಯಾಖ್ಯಾನದ ಕಾವು ತಣ್ಣಗಾಗುವ ಮುನ್ನ ಮುಕುಂದ್ ಭೇಟಿ ಚರ್ಚೆಗೆ ಗ್ರಾಸವಾಗಿದೆ.

ಧಾರವಾಡದಲ್ಲಿ 3 ದಿನಗಳ ಕಾಲ ಆರ್​ಎಸ್​ಎಸ್ ರಾಷ್ಟ್ರೀಯ ಕಾರ್ಯಕಾರಿ ಬೈಠಕ್ ನಡೆದ ಒಂದು ವಾರದ ಬಳಿಕ ಬೊಮ್ಮಾಯಿಗೆ ಸಂಘದ ಪ್ರಮುಖ ಭೇಟಿ ಮಾಡಿದ್ದು, ರಾಜಕೀಯ ಸೇರಿ ವಿವಿಧ ಕಾರಣಗಳಿಗಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪ್ರಸ್ತುತ ವಿದ್ಯಮಾನಗಳು, ಸರ್ಕಾರದ ನೀತಿ-ನಿರ್ಧಾರ ಸೇರಿ ಸಂಘಟನೆ ಹಾಗೂ ರಾಜಕೀಯ ಮಹತ್ವದ ವಿಚಾರಗಳು ಪ್ರಸ್ತಾಪವಾಗಿವೆ ಎಂದು ಮೂಲಗಳು ತಿಳಿಸಿವೆ.

ಗಮನಾರ್ಹ ಸಂಗತಿ: ಬೈಠಕ್ ವೇಳೆ ಆರ್​ಎಸ್​ಎಸ್ ವರಿಷ್ಠರೆಲ್ಲ ಧಾರವಾಡದಲ್ಲಿದ್ದರು. ಸಿಎಂ ಆದಿಯಾಗಿ ಯಾರೊಬ್ಬರ ಭೇಟಿಗೂ ಅವಕಾಶ ನೀಡಿದ್ದಿಲ್ಲ. ಯಶಸ್ವಿ ಬೈಠಕ್ ನಂತರ ಸಂಘದ ವರಿಷ್ಠರ ಸಂದೇಶವನ್ನು ಸಿಎಂಗೆ ತಲುಪಿಸಲೆಂದು ಮುಕುಂದ್ ಭೇಟಿ ಮಾಡಿರುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಅಲ್ಲದೆ, ಬಿಟ್ ಕಾಯಿನ್ ಪ್ರಕರಣದ ಸುತ್ತಲೂ ರಾಜ್ಯದ ರಾಜಕೀಯ ಗಿರಕಿ ಹೊಡೆಯುತ್ತಿದ್ದು, ಪ್ರಕರಣದ ವಿವರ ಸಂಗ್ರಹಿಸಲೆಂದು ಮುಕುಂದ್ ಸಿಎಂ ಅವರನ್ನು ಖುದ್ದು ಭೇಟಿ ಮಾಡಿದ್ದಾರೆ ಎಂಬ ಊಹಾಪೋಹಗಳು ಹರಡಿವೆ.

ಪಕ್ಷದ ವರಿಷ್ಠರು ಮತ್ತು ಸಂಘ ಪರಿವಾರದ ಪ್ರಮುಖರ ಮಹತ್ವದ ಸಂದೇಶ ತಲುಪಿಸುವ ಅಗತ್ಯ ಬಿದ್ದಾಗ ಸಿಎಂಗೆ ಸಂಘದ ಪ್ರಮುಖರು ಭೇಟಿಯಾಗುತ್ತಾರೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮುಕುಂದ್ ಭೇಟಿಯಾಗಿ ಮಾತುಕತೆ ನಡೆಸಿದ್ದನ್ನು ಮೂಲಗಳು ನೆನಪಿಸಿವೆ.

ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಾಳೆ

ರಾಜ್ಯದ ಆಡಳಿತಾರೂಢ ಬಿಜೆಪಿಯ ಎರಡು ಮಹತ್ವದ ಸಭೆಗಳು ಮಂಗಳವಾರ (ನ.9) ನಡೆಯಲಿದ್ದು, ಇದಕ್ಕಾಗಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೋಮವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಲಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ನ.9ರ ಬೆಳಗ್ಗೆ 11ಕ್ಕೆ ರಾಜ್ಯ ಸಮಿತಿ ಪದಾಧಿಕಾರಿಗಳು ಹಾಗೂ ಸಂಜೆ 7ಕ್ಕೆ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಪ್ರತಿನಿಧಿಸುತ್ತಿರುವ 25 ಸದಸ್ಯರ ಅವಧಿ 2022ರ ಜನವರಿ 5ಕ್ಕೆ ಮುಗಿಯಲಿದ್ದು, ಅದಕ್ಕೂ ಮುಂಚೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಆಯಾ ಜಿಲ್ಲಾ ಸಮಿತಿಗಳು ನೀಡಿರುವ ವರದಿ ವಿಶ್ಲೇಷಣೆ, ಕ್ಷೇತ್ರಾವಾರು ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷದ ಸಂಘಟನೆ ಮತ್ತು ವಿಧಾನ ಪರಿಷತ್ ಚುನಾವಣೆ ತಯಾರಿ ಉದ್ದೇಶದಿಂದ ನವೆಂಬರ್​ನಲ್ಲಿ ನಡೆಯಲಿರುವ ‘ಜನ ಸ್ವರಾಜ್ ಯಾತ್ರೆ’ಯ ರೂಪು-ರೇಷೆ, ನಾಲ್ಕು ತಂಡಗಳ ಜಿಲ್ಲಾ ಪ್ರವಾಸದ ಪಟ್ಟಿ ಪರಾಮರ್ಶೆಯಾಗಲಿದೆ. ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಆತ್ಮಾವಲೋಕನ, ಸಂಘಟನೆ ಬಲವರ್ಧನೆ ಚಟುವಟಿಕೆ ಕುರಿತು ಚರ್ಚೆಯಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪೂರ್ವಭಾವಿ ತಾಲೀಮು: ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆ ತಯಾರಿ, ಅಭ್ಯರ್ಥಿಗಳ ಪಟ್ಟಿ ಕುರಿತು ಚರ್ಚೆ ನಡೆಯಲಿರುವ ಕಾರಣ ಪೂರ್ವಭಾವಿ ತಾಲೀಮು ಭಾನುವಾರ ನಡೆಯಿತು. ಪಕ್ಷದ ರಾಜ್ಯ ಕಚೇರಿಯಲ್ಲಿ ದೀರ್ಘಾವಧಿ ಸಭೆ ನಡೆದಿದ್ದು, ಪ್ರತಿ ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಕೋರ್ ಕಮಿಟಿ ಸಭೆ ಮುಂದಿಡಲು ನಿರ್ಧರಿಸಿದೆ.

ಅಲ್ಲದೆ, ಚುನಾವಣೆ ನಡೆಯಲಿರುವ ಪಟ್ಟಿಯಲ್ಲಿ ಕೆಲವು ದ್ವಿಸದಸ್ಯ ಕ್ಷೇತ್ರಗಳು ಸೇರಿದ್ದು, ಎರಡೂ ಕ್ಷೇತ್ರಗಳಿಗೆ ಸ್ಪರ್ಧಿಸಬೇಕೆ ? ಅಥವಾ ಒಂದಕ್ಕೆ ಮಾತ್ರ ಸ್ಪರ್ಧಿಸಬೇಕೆ? ಇಲ್ಲವೇ ಎರಡನ್ನೂ ಕೈ ಬಿಡಬೇಕೆ? ಎಂಬ ಬಗ್ಗೆ ಕೋರ್ ಕಮಿಟಿ ಅಂತಿಮ ವಿವೇಚನೆಗೆ ಬಿಡಲು ಪೂರ್ವಭಾವಿ ಸಭೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.

ಹಾಲಿ ಜೆಡಿಎಸ್ ಸದಸ್ಯರಾಗಿರುವ ಮೈಸೂರಿನ ಸಂದೇಶ ನಾಗರಾಜ್ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್​ಗೆ ಅರ್ಜಿ ಹಾಕಿದ್ದಾರೆ. ಅಲ್ಲದೆ, ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಅದೇ ರೀತಿ ಮತ್ತೋರ್ವ ಸದಸ್ಯ ಸಿ.ಆರ್.ಮನೋಹರ್ ಕೂಡ ಪಕ್ಷಕ್ಕೆ ಬರುವ ಸಾಧ್ಯತೆ ಇದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ.| ಎನ್.ರವಿಕುಮಾರ್ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net