

ಬೆಂಗಳೂರು: ಪರ್ಸಂಟೇಜ್ ಗದ್ದಲದ ಮುಜುಗರ, ಕರೊನಾ ಹೊಸ ರೂಪಾಂತರಿ ಒಮಿಕ್ರಾನ್ ಕರಿಛಾಯೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೊರಟಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಅಧಿಕೃತ ಮಾಹಿತಿ ಪ್ರಕಾರ ಸಿಎಂ ಗುರುವಾರ ಬೆಳಗ್ಗೆ 9.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸುವರು. ಕೇಂದ್ರ ಸಚಿವರ ಭೇಟಿ, ಸಂಜೆ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಬೊಮ್ಮಾಯಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರದ ಕಾರ್ಯಕ್ರಮ ಪಟ್ಟಿ ಹಾಗೂ ರಾಜ್ಯಕ್ಕೆ ಹಿಂತಿರುಗುವುದನ್ನು ಮುಕ್ತವಾಗಿಡಲಾಗಿದೆ. ಕಳೆದ ಬಾರಿ ದೆಹಲಿ ಪ್ರವಾಸಕ್ಕೆ ಮುನ್ನ ಬಿಟ್ಕಾಯಿನ್ ಹಗರಣದ ಆರೋಪ-ಪ್ರತ್ಯಾರೋಪ, ಆಂತರಿಕವಾಗಿ ತೀವ್ರ ಚರ್ಚೆ, ಸಂಶಯದ ಬಿಸಿಗಾಳಿ ಯಿತ್ತು. ಈ ಬಾರಿ ಶೇ.40 ಪರ್ಸಂಟೇಜ್, ಲಂಚದ ಮೂರುಪಟ್ಟು ಹೆಚ್ಚಳದ ದೂರು ಸಿಎಂ ಬೊಮ್ಮಾಯಿಗೆ ಫಜೀತಿ ತಂದೊಡ್ಡಿದೆ.
ಆರೋಪ ಅಡ್ಡಗಾಲು: ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆಂದು ಹೊಸ ಕಾರ್ಯಕ್ರಮ ಪ್ರಕಟಿಸಿ, ಆಡಳಿತಕ್ಕೆ ಚುರುಕು ಮತ್ತು ಅಭಿವೃದ್ಧಿಗೆ ವೇಗ ನೀಡಬೇಕೆಂಬ ಬೊಮ್ಮಾಯಿ ಹುಮ್ಮಸ್ಸಿಗೆ ಒಂದಿಲ್ಲೊಂದು ಆರೋಪ ಗಳು ಅಡ್ಡಗಾಲು ಹಾಕುತ್ತಿವೆ. ನಾಯಕತ್ವ ಬದಲಾಯಿಸಿದ ವರಿಷ್ಠರ ನಿರೀಕ್ಷೆಯಂತೆ ಹೊಣೆಗಾರಿಕೆಯನ್ನು ಸಮರ್ಥ ವಾಗಿ ನಿಭಾಯಿಸುವ ಉತ್ಸಾಹವನ್ನು ಕಟ್ಟಿಹಾಕುವ ಪ್ರಸಂಗಗಳು ಎದುರಾಗುತ್ತಿದ್ದು, ಅಪಸ್ವರ, ಆರೋಪಗಳ ಹೊರೆ ಹೊತ್ತುಕೊಂಡು ಪ್ರತಿಬಾರಿ ವರಿಷ್ಠರನ್ನು ಭೇಟಿಯಾಗಬೇಕಾದ ಸಂದಿಗ್ಧಕ್ಕೆ ಸಿಲುಕಿದ್ದಾರೆ.
ಮೇಲ್ನೋಟದ ಕಾರ್ಯಸೂಚಿ: ಕರೊನಾ ನಿರೋಧಕ ಲಸಿಕೆಯ ಬೂಸ್ಟರ್ ಡೋಸ್ ವಿತರಣೆಗೆ ಕೇಂದ್ರಕ್ಕೆ ಅನುಮತಿ ಕೋರಿದ್ದು, ಕೇಂದ್ರ ಆರೋಗ್ಯ ಸಚಿವರೊಂದಿಗೆ ಈ ವಿಷಯದ ಚರ್ಚೆಯೇ ದೆಹಲಿ ಪ್ರವಾಸದ ಮುಖ್ಯ ಕಾರ್ಯಸೂಚಿ ಎಂದು ಮೇಲ್ನೋಟಕ್ಕೆ ಬಿಂಬಿಸಲಾಗಿದೆ.
ಪ್ರಸ್ತಾಪ ಸಂಭವ: ಕೇಂದ್ರ ಸಚಿವರ ಜತೆಗೆ ವರಿಷ್ಠರ ಭೇಟಿಗೆ ಸಿಎಂ ಬೊಮ್ಮಾಯಿ ಬಯಸಿದ್ದಾರೆ. ಈ ಕಾರಣಕ್ಕಾಗಿ ಗುರುವಾರ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಹಿರಿಯ ನಾಯಕರ ಭೇಟಿಗೆ ಕಾಲಾವಕಾಶ ಸಿಕ್ಕರೆ ಪರ್ಸಂಟೇಜ್ ಪ್ರಹಸನ, ಲಂಚದ ಹಾವಳಿ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಹೊಂದಾಣಿಕೆ ಕುರಿತು ಪ್ರಸ್ತಾಪವಾಗುವ ಸಂಭವವಿದೆ. ನೇರ ಭೇಟಿ ಸಾಧ್ಯವಾಗದಿದ್ದರೆ ತೃತೀಯ ವ್ಯಕ್ತಿಗಳ ಮೂಲಕ ಗಂಭೀರ ಸ್ವರೂಪದ ಆರೋಪದ ಬಗ್ಗೆ ಬೊಮ್ಮಾಯಿಯಿಂದ ಸ್ಪಷ್ಟನೆ ಪಡೆದು, ಖಡಕ್ ಸಂದೇಶವನ್ನು ವರಿಷ್ಠರು ರವಾನಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.
ಶೇಖಾವತ್ ಭೇಟಿ ಫಿಕ್ಸ್: ಸಿಎಂ ದೆಹಲಿಗೆ ಪ್ರವಾಸದ ವೇಳಾಪಟ್ಟಿ ಅಂತಿಮವಾಗಿದ್ದರೂ ಈವರೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಭೇಟಿ ಮಾತ್ರ ಫಿಕ್ಸ್ ಆಗಿದೆ. ಕೇಂದ್ರ ಆರೋಗ್ಯ ಸಚಿವರು ಸೇರಿದಂತೆ ಬೊಮ್ಮಾಯಿ ಭೇಟಿ ಬಯಸಿದ ಸಚಿವರು ಮತ್ತು ವರಿಷ್ಠರು ಇನ್ನೂ ಕಾಲಾವಕಾಶ ನೀಡಿಲ್ಲವೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.