

ಹಾವೇರಿ/ ಬಾಡ: ಯಾವ ಜನ್ಮದ ಪುಣ್ಯವೋ ಏನೋ.. ಈ ಕ್ಷೇತ್ರದ ಮಗನಾಗಿದ್ದೇನೆ. ನಾನು ಮೊದಲ ಚುನಾವಣೆಯಲ್ಲಿ ಘೋಷಿಸಿದ್ದೆ. ನಾನು ಸತ್ತ ಮೇಲೆ ಇದೇ ಕ್ಷೇತ್ರದಲ್ಲಿ ನನ್ನನ್ನು ಹೂಳಿ ಎಂದು. ಈಗಲೂ ಹೇಳುತ್ತೇನೆ ನಾನು ಸತ್ತರೆ ಇಲ್ಲೇ ಹೂಳಬೇಕು... ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಣ್ಣೀರು ಸುರಿಸಿದರು.
ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಆಯೋಜಿಸಿದ್ದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮಳೆಗೆ ಮನೆ ಬಿದ್ದಿರುವ ಶಿಗ್ಗಾಂವಿ ಕ್ಷೇತ್ರದ ಕೆಲವರಿಗೆ ಮನೆ ಪರಿಹಾರ ಸಿಕ್ಕಿಲ್ಲ ಎಂಬುದು ನನಗೆ ಗೊತ್ತಾಗಿದೆ ಎಂದರು.
ಮನೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಹತ್ತು ದಿನಗಳಲ್ಲಿ ಪರಿಹಾರ ನೀಡುವ ಕೆಲಸ ಮಾಡುತ್ತೇನೆ. ಡಿ.31ರೊಳಗೆ ನಾನೇ ಬಂದು ಪರಿಹಾರ ನೀಡುತ್ತೇನೆ ಎಂದರು.
ಹತ್ತು ಸಾವಿರ ಜನರಿಗೆ ಉದ್ಯೋಗ ಕೊಡಿಸುವ ಟೆಕ್ಸ್ಟೈಲ್ ಪಾರ್ಕ್ ಶಿಗ್ಗಾಂವಿಯಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಮುಂದೆ ಶಿಗ್ಗಾಂವಿ ತಾಲೂಕಿನ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.