

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಮಾಡಿದರೂ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಯಾವುದೇ ಚರ್ಚೆ ನಡೆಯಲಿಲ್ಲ. ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದಾರೆ ಎನ್ನಲಾಗಿರುವ ಮುಖ್ಯಮಂತ್ರಿ, ಸಿಎಎ ಜನಜಾಗೃತಿ ಸಮಾವೇಶ ಮುಗಿದ ಮೇಲೆ ಸಂಜೆಯೇ ವಿಮಾನ ಹತ್ತಿ ಬೆಂಗಳೂರಿಗೆ ವಾಪಸ್ಸಾದರು. ಷಾ ಭೇಟಿಗೆಂದು ಡೆನಿಸನ್ಸ್ ಹೋಟೆಲ್ಗೆ ಬಂದಿದ್ದ ನೂತನ ಬಿಜೆಪಿ ಶಾಸಕರು ಮುಖ ಗಂಟಿಕ್ಕಿಕೊಂಡೇ ಹೊರಟುಹೋದರು.
ಸಿಎಎ ಜನಜಾಗೃತಿ ಸಮಾವೇಶದಲ್ಲಿ ಸುಮಾರು ಒಂದು ತಾಸು ಪಕ್ಕದಲ್ಲೇ ಕುಳಿತಿದ್ದ ಬಿಎಸ್ವೈ ಅವರೊಂದಿಗೆ ಅಮಿತ್ ಷಾ ಹೆಚ್ಚೇನೂ ಮಾತನಾಡಲಿಲ್ಲ. ಸಿಎಂ ಮುಖದಲ್ಲಿ ಅಂಥ ಗೆಲುವು ಕಂಡುಬರಲಿಲ್ಲ. ಷಾ ಜತೆಗೆ ಸೌಹಾರ್ದಯುತ ಚರ್ಚೆ ಸಾಧ್ಯ ವಾಗುವುದಿಲ್ಲವೆಂದು ತಿಳಿದಿದ್ದರಿಂದಲೇ ಬಿಎಸ್ವೈ, ಷಾ ವಾಸ್ತವ್ಯ ಹೂಡಿದ್ದ ಹೋಟೆಲ್ಗೂ ಬಾರದೇ ಬೆಂಗಳೂರಿಗೆ ಮರಳಿದರು.
ಭೇಟಿಯಾಗಿಲ್ಲ ಅಂತಾನೇ ಬರ್ಕೆಳಿ: ಕಾಂಗ್ರೆಸ್ನಿಂದ ಬಿಜೆಪಿಗೆ ಬಂದು ಶಾಸಕರಾಗಿರುವ ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್, ಬಿ.ಸಿ.ಪಾಟೀಲ್, ಮಹೇಶ್ ಕಮಟಳ್ಳಿ ಮೊದಲಾದವರು ಡೆನಿಸನ್ಸ್ ಹೋಟೆಲ್ನಲ್ಲಿ ಅಮಿತ್ ಷಾ ಭೇಟಿಗಾಗಿ ಕಾದಿದ್ದರು. ರಾತ್ರಿ 8 ಗಂಟೆ ನಂತರ ಹೋಟೆಲ್ನಿಂದ ಹೊರಟ ರಮೇಶ್ ಜಾರಕಿಹೊಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಷಾ ಅವರನ್ನು ಭೇಟಿಯಾಗಲಿಲ್ಲ ಅಂತಾನೇ ಬರೆದುಕೊಳ್ಳಿ ಎಂದು ಅಸಮಾಧಾನದಿಂದಲೇ ಹೇಳಿದರು. ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವುದಾಗಿ ಸಿಎಂ ಬಿಎಸ್ವೈ ಹೇಳಿದ್ದಾರೆ. ನಮಗೆ ಯಾವುದೇ ಆತುರವಿಲ್ಲ. ಷಾ ಭೇಟಿಯಾಗಿ ಬಂದಿದ್ದೇವೆ ಅಷ್ಟೇ ಎಂದು ಶ್ರೀಮಂತ ಪಾಟೀಲ್ ಪ್ರತಿಕ್ರಿಯಿಸಿದರು.
ಸದ್ಯಕ್ಕೆ ಮುಂದೂಡಿಕೆಯಾಗಿದೆ...
ಸಿಎಂ ವಿದೇಶ ಪ್ರವಾಸ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ರಮೇಶ್ ಜಾರಕಿಹೊಳಿ ಇತರರು ಅಮಿತ್ ಷಾ ಭೇಟಿಯಾಗಿ ಬಂದಿದ್ದಾರೆ ಎಂದರು. ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಶೀಘ್ರವೇ ವಿಸ್ತರಣೆಯಾಗಲಿದೆ. ನೂತನ ಶಾಸಕರಲ್ಲಿ ಅಸಮಾಧಾನವಿಲ್ಲ ಎಂದರು.
ಷಾ, ಸಿಎಂ ಆಪ್ತ ಕುಶಲೋಪರಿ
ಬೆಂಗಳೂರು: ಸದಾ ಗಂಭೀರ ವದನದವರಾದ ಅಮಿತ್ ಷಾ ಹಾಗೂ ಯಡಿಯೂರಪ್ಪ ಮೊಗದಲ್ಲಿ ಶನಿವಾರ ಬೆಳಗ್ಗೆ ಉಲ್ಲಾಸವಿತ್ತು. ಅರಮನೆ ಮೈದಾನದ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರೂ ಆಪ್ತ ಕುಶಲೋಪರಿ ನಡೆಸಿದರು. ಈ ಔಪಚಾರಿಕ ವಿಚಾರ ವಿನಿಮಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಂಪುಟ ವಿಸ್ತರಣೆ ಸುತ್ತಲೇ ಗಿರಕಿ ಹೊಡೆಯಿತು. ಆದರೆ, ಹುಬ್ಬಳ್ಳಿಯಲ್ಲಿ ಸಮಾವೇಶ ಮುಗಿದ ಬಳಿಕ ಬಿಎಸ್ವೈ ಮುಖದಲ್ಲಿ ಬೀಗುಮಾನಕ್ಕಿಂತ ದುಮ್ಮಾನವೇ ಹೆಚ್ಚಿತ್ತು.