

ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೂಡಾ ಹಗರಣದ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಲಾಯಿತು.
ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧಿಕ್ಕಾರ,ಮೂಡ ಸೈಟ್‌ಗಳನ್ನು ಕೊಳ್ಳೆ ಹೊಡೆದ ಭ್ರಷ್ಟ ಸಿಎಂಗೆ ಧಿಕ್ಕಾರ, ಸಿದ್ದರಾಮಯ್ಯ ಅವರೇ ಕೊಡಲೇಬೇಕು ಕೊಡಲೇಬೇಕು- ರಾಜೀನಾಮೆ ಕೊಡಲೇಬೇಕು ಎಂದು ೋಷಣೆಗಳನ್ನು ಕೂಗಿದರು. ಇದೇ ಸಂದರ್ಭದಲ್ಲಿ ಭಾರತ್ ಮಾತಾ ಕೀ ಜೈ ಘೋಷಣೆಯನ್ನೂ ಮೊಳಗಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಪ್ರಮುಖರು, ಮೂಡಾ ಹಗರಣದಲ್ಲಿ ತಮ್ಮ ಕುಟುಂಬಕ್ಕೆ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ 14 ಸೈಟ್ ಪಡೆದಿರುವುದು ಅಕ್ಷಮ್ಯ ಅಪರಾದ. ತಪ್ಪು ಮಾಡಿರುವುದನ್ನು ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದನ್ನು ನ್ಯಾಯಾಲಯದ ತೀರ್ಪಿನಲ್ಲಿ ಅವಲೋಕನ ಮಾಡಲಾಗಿದೆ. ಎರಡೂ ಕೋರ್ಟ್‌ನಲ್ಲಿ ಸಿಎಂ ವಿರುದ್ದವೇ ತೀರ್ಪು ಬಂದಿದ್ದರೂ, ಬಂಡತನದಿಂದ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಇದು. ಮೂಡಾ ಹಗರಣವನ್ನು ಕೂಡಲೇ ಸಿಬಿಐಗೆ ವಹಿಸಿ, ಹಗರಣಗಳ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಲಾಯಿತು.
ವಿಧಾನಸೌಧಕ್ಕೆ ನುಗ್ಗಲು ಯತ್ನ-ಬಂಧನ
ಧರಣಿ ನಡೆಸುತ್ತಿದ್ದ ಸ್ಥಳದಿಂದ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಹೊರಟ ಪ್ರತಿಭಟನಾಕಾರರು, ವಿಧಾನಸೌಧಕ್ಕೆ ನುಗ್ಗಿ ಹೊರ ಬಾಗಿಲಿಗೆ ಬೀಗ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು. ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.
ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಸಿ.ಟಿ.ರವಿ ಸೇರಿದಂತೆ ಮುಖಂಡರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಹಾಜರಿದ್ದರು.
ವಿಜಯೇಂದ್ರ ಗೈರು:
ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಗೈರಾಗಿದ್ದರು. ಅವರ ಕರೆಯ ಮೇರೆಗೆ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು.