

ಪ್ರವಾಸೋದ್ಯಮ ಉತ್ತೇಜನಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕು? ಯೋಜನೆ ಹೇಗಿರಬೇಕು? ಅನುಷ್ಠಾನ ಹೇಗಾಗಬೇಕು? ಎಂಬಿತ್ಯಾದಿ ಕುರಿತು ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಆಯೋಜಿಸಿದ್ದ ಕ್ಲಬ್ಹೌಸ್ನಲ್ಲಿ ಕೇಳುಗರಿಂದ ಬಂದ ಪ್ರಶ್ನೆಗಳಿಗೆ ವಿಶ್ರಾಂತ ಸಹ ಪ್ರಾಧ್ಯಾಪಕ ಡಾ.ಕೆ. ಸಿದ್ದಪ್ಪ, ಪ್ರವಾಸೋದ್ಯಮ ಸೊಸೈಟಿ ಕಾರ್ಯದರ್ಶಿ ಮಹಾಲಿಂಗಯ್ಯ, ಪ್ರವಾಸೋದ್ಯಮ ತಜ್ಞ ಡಾ.ಕೆ.ಎಸ್.ನಾಗಪತಿ, ಮೈಸೂರು ಹೆರಿಟೇಜ್ ತಜ್ಞ ಸಮಿತಿ ಸದಸ್ಯ ಪ್ರೊ. ಎನ್. ಎಸ್. ರಂಗರಾಜು ಅವರು ನೀಡಿದ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.
* ನಮ್ಮಲ್ಲೇ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದರೆ, ಇವುಗಳನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಸರ್ಕಾರ ಕೂಡ ಗಮನ ಹರಿಸುತ್ತಿಲ್ಲ ಇದಕ್ಕೆ ಏನು ಮಾಡಬೇಕು?
- ಪತ್ರಿ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿಯ ಜವಾಬ್ದಾರಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗಿರುತ್ತದೆ. ನಮ್ಮ ಪರಾತತ್ವ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಉತ್ಖನನ ಬಹಳ ಕಷ್ಟದ ಕೆಲಸವಾಗಿದೆ. ನೀವು ಪ್ರವಾಸಿ ತಾಣಗಳ ಫೋಟೋ ತೆಗೆದು ಕಳುಹಿಸಿ ಸಾಧ್ಯವಾದರೆ, ನಾನು ಅದನ್ನು ಪುರಾತತ್ವ ಇಲಾಖೆಗೆ ಕಳುಹಿಸುತ್ತೇನೆ.
* ಆಧುನಿಕ ಜೀವನ ಶೈಲಿಯಲ್ಲಿ ಪ್ರವಾಸಿ ತಾಣಗಳ ಪರಿಕಲ್ಪನೆ ಬದಲಾಗುತ್ತಿದೆ. ವಾರಾಂತ್ಯದ ತಾಣಗಳಾಗುತ್ತಿವೆ. ಇಲ್ಲಿ ಕುಡಿದು ಮೋಜು ಮಾಡುವುದೇ ಒಂದು ಪ್ರವಾಸ ಎಂಬ ಭಾವನೆ ಇದೆ. ಇದಕ್ಕೆ ತಡೆ ಯಾವಾಗ?
- ನಮ್ಮ ರಾಜ್ಯದವರಿಗಿಂತ ಹೊರ ರಾಜ್ಯದಿಂದ ಬರುವ ಪ್ರವಾಸಿಗಳೇ ಈ ರೀತಿ ಪ್ರವಾಸಿ ತಾಣಗಳನ್ನು ಹಾಳು ಮಾಡುತ್ತಾರೆ. ಇವರಿಗೆ ಅಲ್ಲಿನ ಸ್ಥಳೀಯರೇ ಬುದ್ಧಿ ಕಲಿಸಬೇಕಾಗಿರುತ್ತದೆ. ಪ್ರವಾಸ ಎಂದಾಕ್ಷಣ ಸೆಲ್ಪಿ ತೆಗೆದುಕೊಳ್ಳುವುದಕ್ಕೆ ಹೋಗಿ ಜಾರಿ ಬೀಳುವುದು. ಕುಡಿದು ಅಲ್ಲಿನ ಸ್ಥಳವನ್ನು ಹಾಳು ಮಾಡುವುದೇ ಹೆಚ್ಚು. ಈ ಬಗ್ಗೆ ಪೊಲೀಸರು ಸಹ ಗಮನವಹಿಸಬೇಕು.
* ಮಹಾರಾಷ್ಟ್ರದಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ದೊರೆಯುವ ಪ್ರಾಮುಖ್ಯತೆ ನಮ್ಮಲ್ಲಿ ಸಿಗುತ್ತಿಲ್ಲ. ಇದಕ್ಕೆ ಏನು ಮಾಡಬೇಕು?
- ಪ್ರಕೃತಿ ಮತ್ತು ಪ್ರವಾಸೋದ್ಯಮ ಎರಡೂ ಸಹ ಒಟ್ಟಿಗೆ ಹೋಗಬೇಕಿದೆ. ಕೆಲವು ಜಿಲ್ಲೆಗಳಲ್ಲಿ ಇಕೋ ಟೂರಿಸಂ, ಅಗ್ರಿ ಟೂರಿಸಂ ಚೆನ್ನಾಗಿಯೇ ನಡೆಯುತ್ತಿದೆ. ಇದಕ್ಕೆ ಹೆಚ್ಚಿನ ಬಂಡವಾಳ ಕೂಡ ಬೇಕಾಗಿಲ್ಲ. ಈ ರೀತಿಯ ಟೂರಿಸಂ ಅನ್ನು ಬ್ರಾಂಡ್ ಮಾಡಬೇಕು.
* ಜಗಲ್ ರೆಸಾರ್ಟ್ಗಳು ಅರಣ್ಯ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರಿದೆ. ಏನು ಕ್ರವಹಿಸಲಾಗಿದೆ?
- ನಮ್ಮ ರಾಜ್ಯದಲ್ಲಿ ಅರಣ್ಯ ಮತ್ತು ಪ್ರವಾಸೋದ್ಯಮ ಎರಡು ಇಲಾಖೆ ಸಮನ್ವತೆ ಸಾಧಿಸಿ ರೂಪಿಸಿರುವ ರೆಸಾರ್ಟ್ ಇದಾಗಿದೆ. ಇಲ್ಲಿ ಎಲ್ಲಿಯೂ ನಿಯಮಗಳನ್ನು ಉಲ್ಲಂಘಿಸಿಲ್ಲ. ಸ್ವಲ್ಪ ದುಬಾರಿ ವೆಚ್ಚ ಎಂಬುದನ್ನು ಹೊರತು ಪಡಿಸಿದರೆ, ಉಳಿದಂತೆ ಎಲ್ಲವೂ ಅದ್ಭುತವಾಗಿದೆ.
* ಕರಾವಳಿಯಲ್ಲಿ ಪ್ರವಾಸೋದ್ಯಮ ಇಲಾಖೆ ಗುರುತಿಸದ ಸಾಕಷ್ಟು ತಾಣಗಳಿವೆ. ಇವುಗಳ ಬಗ್ಗೆ ಸರ್ಕಾರ ಏಕೆ ನಿರ್ಲಕ್ಷ್ಯ ತಾಳುತ್ತಿದೆ?
- ಈ ರೀತಿ ಹೇಳುವುದು ತಪು್ಪ. ಇಲ್ಲಿನ ಜಿಲ್ಲಾಧಿಕಾರಿಗಳು ಹೆಚ್ಚಿನ ಆಸಕ್ತಿವಹಿಸಿ ಇಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ, ಅವರ ಬಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚು ಯೋಜನೆಗಳು ಸಹ ಇವೆ.
* ವಿದೇಶದಲ್ಲಿ ಅಭಿವೃದ್ಧಿ ಪಡಿಸುವಂತೆ ಇಲ್ಲಿನ ಪ್ರಾಣಿ ಸಂಗ್ರಹಾಲಯಗಳು ಅಭಿವೃದ್ಧಿಯಾಗುತ್ತಿಲ್ಲ. ಪ್ರಾಣಿ ಸಂಗ್ರಹಾಲಯ ಕೂಡ ಒಂದು ಪ್ರವಾಸಿ ತಾಣವಲ್ಲವೇ?
- ಪ್ರಾಣಿಕೂಡ ಸಂಗ್ರಹಾಲಯ ಕೂಡ ಒಂದು ಪ್ರವಾಸಿ ತಾಣ ಎಂಬುದರಲ್ಲಿ ಅನುಮಾನ ಇಲ್ಲ. ಇತ್ತೀಚಿನ ದಿನಗಳಲ್ಲಿ ಸಂಗ್ರಹಾಲಯಗಳು ಸಹ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಮೈಸೂರಿನ ಪ್ರಾಣಿ ಸಂಗ್ರಹಾಲಯ ಮೊದಲಿಗಿಂತ ಹೆಚ್ಚು ಅಭಿವೃದ್ಧಿಯಾಗಿದೆ. ಇದರ ವಿಸ್ತರಣೆ ಬಗ್ಗೆಯೂ ಆಲೋಚಿಸಬೇಕಿದೆ.
* ಬಹುತೇಕ ಜಿಲ್ಲೆಗಳಲ್ಲಿರುವ ಪ್ರವಾಸಿ ತಾಣಗಳಿಗೆ ಮಾರ್ಗಗಳನ್ನು ಸೂಚಿಸುವ ನಾಮಫಲಕಗಳಿಲ್ಲ. ಇದರಿಂದ ಮ್ಯಾಪ್ ನೋಡಿಕೊಂಡೇ ಜನರು ಬರಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇದನ್ನು ತಪ್ಪಿಸಬೇಕು.
- ಹೌದು. ನೀವು ಹೇಳುವುದು ನಿಜ. ಪ್ರವಾಸಿ ತಾಣಗಳ ಬಗ್ಗೆ ಇಲಾಖೆಯು ಹೆಚ್ಚಿನ ಆಸಕ್ತಿ ವಹಿಸಿ, ಮಾರ್ಗಗಳನ್ನು ಸೂಚಿಸುವ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕಿದೆ. ಇಲ್ಲವಾದರೆ, ಪ್ರವಾಸಿ ತಾಣಗಳು ಜನರಿಗೆ ತಿಳಿಯುವುದಿಲ್ಲ. ಈ ಬಗ್ಗೆ ಇಲಾಖೆ ಗಮನವಹಿಸಬೇಕಿದೆ.
* ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ನಡುವೆ ಸಮನ್ವತೆಯ ಕೊರತೆ ಇದೆ. ಇದರ ಪರಿಣಾಮ ನಮ್ಮ ರಾಜ್ಯದಲ್ಲಿರುವ ಪುರಾತನ ಕಾಲದ ತಾಣಗಳು ಹಾಳಾಗುತ್ತಿವೆ. ಏಕೆ ಇಲಾಖೆ ಕ್ರಮವಹಿಸುತ್ತಿಲ್ಲ?
ರಾಜ್ಯದಲ್ಲಿ 876 ಪ್ರವಾಸಿ ತಾಣಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿವೆ. ಅದೇ ರೀತಿ ರಾಜ್ಯದಲ್ಲಿ 868 ಪ್ರವಾಸಿ ತಾಣಗಳು ಪುರಾತನ ಇಲಾಖೆ ವ್ಯಾಪ್ತಿಯಲ್ಲಿವೆ. ಪುರಾತತ್ವ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇದರಿಂದಾಗಿ ಎಲ್ಲ ತಾಣಗಳನ್ನು ಅಭಿವೃದ್ಧಿ ಪಡಿಸುವುದು ಕಷ್ಟದ ಕೆಲಸ. ಇನ್ನೂ ಇಲಾಖೆಯ ಬಳಿಯೂ ಹೆಚ್ಚಿನ ಅನುದಾನ ಇಲ್ಲದೆ, ಇರುವುದು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕುಂಠಿತವಾಗಿದೆ. ತಕ್ಷಣ ಅಭಿವೃದ್ಧಿ ಕಡೆ ಗಮನಹರಿಸಬೇಕು.
* ತುಮಕೂರಿನಲ್ಲಿ ಹೆಚ್ಚು ದೇವಸ್ಥಾನಗಳಿಗೆ. ಪ್ರವಾಸಿ ತಾಣಗಳಿವೆ. ಏಕೆ ಯಾರೂ ಅಭಿವೃದ್ಧಿಗೆ ಮುಂದಾಗುತ್ತಿಲ್ಲ?
- ಬೆಂಗಳೂರಿಗೆ ಹತ್ತಿರ ಇರುವ ಹಾಗೂ ಒಂದು ದಿನದಲ್ಲಿ ಪ್ರವಾಸಿ ಕೈಗೊಳ್ಳುವಂತಹ ತಾಣಗಳು ತುಮಕೂರಿನಲ್ಲಿದೆ. ಆದರೆ, ಇಲ್ಲಿ ತಾಣಗಳ ಅಭಿವೃದ್ಧಿಗೆ ಇಲಾಖೆ ಮುಂದಾಗದೇ ಇರುವುದು ದುರಂತ. ಇನ್ನಾದರೂ ಅಭಿವೃದ್ಧಿ ಪಡಿಸಬೇಕು.
* ಯಾದಗಿರಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಇದನ್ನು ಸರ್ಕಾರ ಅಭಿವೃದ್ಧಿ ಮಾಡಬೇಕು.
- ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದರೆ, ಅವುಗಳು ಜನರಿಗೆ ತಿಳಿದಲ್ಲ. ಇದರಿಂದ ನೋಡಿರುವ ತಾಣಗಳನ್ನೇ ಮತ್ತೆ ಮತ್ತೆ ಜನರು ನೋಡವಂತಹ ಪರಿಸ್ಥಿತಿ ಇದೆ. ಪ್ರವಾಸೋದ್ಯಮ ಇಲಾಖೆಯು ಈ ಬಗ್ಗೆ ಗಮನಹರಿಸಬೇಕು.