

ಪದ-ಪದಾರ್ಥಗಳ ಸಂಬಂಧ: ವಾಕ್ ಮತ್ತು ಅರ್ಥಗಳಿಗೆ ಅನನ್ಯವಾದ ಸಂಬಂಧ ಉಂಟು ಎಂಬುದು ಭಾರತೀಯ ಪರಂಪರೆಯಲ್ಲಿ ಬಂದಿರುವ ಮಾತು. ಯಾವುದೇ ಒಂದು ಪದ ಮತ್ತು ಆ ಪದದಿಂದ ಸೂಚಿಸಲ್ಪಡುವ ಪದಾರ್ಥದ ನಡುವೆ ಅನನ್ಯವಾದ ಸಂಬಂಧವನ್ನು ಅರಿಯುವುದು ಹೇಗೆ? ಖ್ಯಾತ ಮಿದುಳು ವಿಜ್ಞಾನಿ ವಿಲಯನೂರ್ ರಾಮಚಂದ್ರರು ವಿವರಿಸುವಂಥ ಕೆಲವು ಪ್ರಯೋಗಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅವರು ಪ್ರಯೋಗದಲ್ಲಿ ಜನರ ಮುಂದೆ ಎರಡು ಪದಾರ್ಥಗಳನ್ನು ಇಟ್ಟರು- ಒಂದು ದುಂಡಗಿರುವಂಥ ಪದಾರ್ಥ, ಮತ್ತೊಂದು ಚೂಪಾದ ಸೂಜಿ. ಎರಡು ಕಪೋಲಕಲ್ಪಿತವಾದ ಹೆಸರುಗಳನ್ನು ಜನರಿಗೆ ಕೊಟ್ಟರು, ಬೊಬೋ ಮತ್ತು ಕಿಕಿ. ಯಾವ ಪದಾರ್ಥಕ್ಕೆ ಯಾವ ಹೆಸರು ಹೊಂದುತ್ತದೆ? ಹೇಗೆ ನಾಮಕರಣ ಮಾಡುತ್ತೀರಿ? ಎಂದು ಸಭೆಯನ್ನು ಕೇಳಿದರು. ಹೆಚ್ಚು ಜನ ದುಂಡಗಿರುವ ವಸ್ತುವಿಗೆ ಬೋಬೋ ಎಂದು ಹೆಸರಿಟ್ಟರು, ಸೂಜಿಗೆ ಕಿಕಿ ಎಂದಿಟ್ಟರು. ನಾನಾ ದೇಶ, ಭಾಷೆಗಳ ಮಾತನಾಡುವವರ ಸಮಕ್ಷದಲ್ಲಿ ಈ ಪ್ರಯೋಗವನ್ನು ನಡೆಸಿದಾಗಲೂ ಫಲಿತಾಂಶ ಒಂದೇ ಆಗಿತ್ತು. ದುಂಡಗಿರುವ ಪದಾರ್ಥಕ್ಕೆ ಬೋಬೋ ಎಂಬ ಹೆಸರು ಹೊಂದುತ್ತದೆ, ಕಿಕಿ ಎಂಬ ಹೆಸರು ಚೂಪಾಗಿರುವಂತಹ ಪದಾರ್ಥಕ್ಕೆ ಹೊಂದುತ್ತದೆ ಎಂಬುದು ಸಿದ್ಧವಾಯಿತು. ಪ್ರತಿಯೊಂದು ಪದವಾಗಲಿ, ಪದಾರ್ಥವಾಗಲಿ ನಮ್ಮ ಮೇಲೆ ಒಂದು ಸೂಕ್ಷ್ಮವಾದ ಪರಿಣಾಮ ಬೀರುತ್ತದೆ. ಅವೆರಡೂ ನಮ್ಮಲ್ಲಿ ಒಂದೇ ರೀತಿಯ ಭಾವತರಂಗಗಳನ್ನು ಎಬ್ಬಿಸಿದಾಗ, ಆ ಪದ-ಪದಾರ್ಥಗಳ ಜೋಡಿ ತುಂಬ ಹೊಂದುತ್ತೆ. ಪದಾರ್ಥದ ಅರಿವು ಅನುಭವ ನಮಗೆ ಚೆನ್ನಾಗಿ ಇದ್ದಾಗ ಅಲ್ಲಿಗೆ ಹೊಂದುವ ಪದಪುಂಜಗಳನ್ನು ಹುಡುಕಿ ಪದಾರ್ಥಕ್ಕೆ ಹೆಸರಿಸುವಂಥ ಕಾರ್ಯ ಸಾಧ್ಯ. ಇಂಥ ಅನೇಕ ಪದ-ಪದಾರ್ಥಗಳ ಜೋಡಿಗಳು ಸಂಸ್ಕೃತವನ್ನು ತಾಯಿಬೇರಾಗಿ ಇಟ್ಟುಕೊಂಡು ಬಂದಿರುವ ಭಾರತೀಯ ಭಾಷೆಗಳಲ್ಲಿ ಲಭ್ಯವಿವೆ.
ಯೋಗಾನುಭವ...: ಜ್ಞಾನಿಗಳ ಹೃದಯದಲ್ಲಿ ರಮಿಸುವುದರಿಂದ ಅವನು ರಾಮ. ಈ ರಾಮ ಐತಿಹಾಸಿಕವಾದ ವ್ಯಕ್ತಿ ಮಾತ್ರವಲ್ಲ. ಶ್ರೀರಂಗ ಮಹಾಗುರುಗಳು ಹೇಳಿರುವಂತೆ- ‘ರಾಮನು ಸ್ಥೂಲದೃಷ್ಟಿಗೆ ಮನುಷ್ಯ, ಸೂಕ್ಷ್ಮದೃಷ್ಟಿಗೆ ದೇವತೆ, ಪರಾದೃಷ್ಟಿಗೆ ಪರಂಜ್ಯೋತಿ’. ಅವನು ಒಂದು ವ್ಯಕ್ತಿತ್ವ, ಗುಣಗಳ ಸಮೂಹ, ಶಕ್ತಿ. ಜ್ಞಾನಿಗಳು ಹೃದಯದಲ್ಲಿ ಕಂಡರಿದು ಆನಂದಿಸುವಂಥ, ಸೀತಾ ಸಮೇತನಾಗಿ ಕೋದಂಡವನ್ನು ಧರಿಸಿರುವ ಒಂದು ರೂಪ, ಒಂದು ಯೋಗಾನುಭವ. ರಾಮ ಎಂಬ ನಾಮವನ್ನು ಉಚ್ಚರಿಸಿ ಜಪಿಸಿದವರಿಗೆ ರಾಮನ ಗುಣಗಳು ಸಂಕ್ರಾಂತವಾಗುತ್ತವೆ. ಸತ್ಯಪರತೆ, ಧರ್ಮದಲ್ಲಿ ನಿಷ್ಠೆ ಮತ್ತು ಆತ್ಮಗುಣಗಳು ಸಿದ್ಧಿಸುತ್ತವೆ. ನಮ್ಮ ಜೀವನವನ್ನು ಧರ್ಮಮಯವಾಗಿ ಮಾಡುತ್ತದೆ.
ಮಂತ್ರ ಮಹಿಮೆ: ಮಂತ್ರಗಳೂ ಅಂತಹ ವಿಶೇಷವಾದಂಥ ಪದಪುಂಜಗಳು. ಅದರ ಜೋಡಣೆ, ಅದರಲ್ಲಿ ಉಪಯೋಗಿಸುವಂಥ ಸ್ವರ-ವ್ಯಂಜನಗಳು, ಅವುಗಳನ್ನು ಉಚ್ಚರಿಸುವ ಸ್ವರಸ್ಥಾಯಿ, ಮಾತ್ರಾಕಾಲಗಳು, ಬಲ, ಪ್ರಯತ್ನಗಳು ಎಲ್ಲವೂ ಕೂಡಿ ಉಚ್ಚರಿಸಿದವರಿಗೆ ಆ ಪದಾರ್ಥದ ಅನುಭವವನ್ನೇ ಮಾಡಿಸಿಬಿಡುತ್ತದೆ. ದೇವತಾ ಸಾನ್ನಿಧ್ಯವನ್ನು ತಂದುಕೊಡುವಂಥ ಇಂಥ ವಿಶಿಷ್ಟವಾದ ಪದಪುಂಜಗಳನ್ನು ಲೋಕಕ್ಕೆ ಕೊಟ್ಟವರು ಋಷಿಗಳು-ಕವಿಗಳು ಅನಿಸಿಕೊಳ್ಳುತ್ತಾರೆ. ವಾಲ್ಮೀಕಿ ಮಹರ್ಷಿಗಳು ಅಂತಹ ಕವಿವರೇಣ್ಯರು. ಅವರ ಕೃತಿಯೇ ಆದಿಕಾವ್ಯ. ಅಲ್ಲಿ ವರ್ಣಿತವಾದ ಪದಾರ್ಥವೇ ಸೀತಾ-ರಾಮರ ತತ್ತ್ವ.
ಸದಾ ಬೆಳಗಲಿ ಪ್ರೇರಣೆ: ವಾಲ್ಮೀಕಿ ರಚಿಸಿದ ಶ್ರೀರಾಮಾಯಣ ಅಪೂರ್ವವಾದ ಕಾವ್ಯ. ಇದನ್ನು ನಮ್ಮ ಪರಂಪರೆಯಲ್ಲಿ ಕಾವ್ಯವಾಗಿ ಮಾತ್ರವಲ್ಲದೆ, ಶಾಸ್ತ್ರವಾಗಿಯೂ ಪರಿಗಣಿಸಲಾಗಿದೆ. ಹಾಗಾಗಿ ಇದೊಂದು ಶಾಸ್ತ್ರಕಾವ್ಯ. ಶ್ರೀರಾಮನನ್ನು ವ್ಯಕ್ತಿಯಾಗಿ ಮಾತ್ರವಲ್ಲದೆ ಪರಮಾತ್ಮ, ಪರಬ್ರಹ್ಮ, ಸಂಸಾರ ಮಂಡಳದಲ್ಲಿ ಮುಳುಗಿದವರನ್ನು ಎತ್ತಿ ಮುಕ್ತಿಧಾಮಕ್ಕೆ ಕೊಂಡೊಯ್ಯುವ ಪರಂಧಾಮ ಪುರುಷೋತ್ತಮನನ್ನಾಗಿ ವಾಲ್ಮೀಕಿ ರಾಮಾಯಣ ದರ್ಶಿಸಿದೆ. ಇದರಲ್ಲಿ ರಾಮನ ಮಾನುಷ ಮುಖವಿದ್ದರೂ ಅದರೊಳಗೆ ದಿವ್ಯಜೋತಿಯಂತೆ ಅಡಗಿರುವ ಪರಾತ್ಪರ ಸ್ವರೂಪವನ್ನು ವಾಲ್ಮೀಕಿ ವಿಸ್ತಾರವಾಗಿ ಪರಿಚಯಿಸಿದ್ದಾರೆ.