ಯುವಶಕ್ತಿಯಿಂದಲೇ ಸಶಕ್ತ ರಾಷ್ಟ್ರನಿರ್ಮಾಣ; ಅಂತರ್ಬಾಹ್ಯ ಪರಿಸರ ನಿಯಂತ್ರಣವೇ ಬಹುಮುಖ್ಯ..

Swami Vivekananda Clubhouse
Published on
ಸ್ವಾಮಿ ವಿವೇಕಾನಂದರ ಕುರಿತು ಮಾತನಾಡುವುದು ಎಂದರೆ ಶಕ್ತಿಯ ಬಗ್ಗೆ ಆಳವಾದ ಸಂಶೋಧನೆ ಮಾಡಿದಂತೆ, ಶಕ್ತಿಯನ್ನು ಪೂಜೆ ಮಾಡಿದಂತೆ. ಅಂತರ್ಬಾಹ್ಯ ಪರಿಸರವನ್ನು ನಿಯಂತ್ರಿಸುತ್ತ ಜೀವನ ನಡೆಸುವುದೇ ಸ್ವಾಮಿ ವಿವೇಕಾನಂದರ ಜೀವನ ಸಾರ ಎಂದು ಹೇಳಿದವರು ಗದಗ ಮತ್ತು ವಿಜಯಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು, ‘ವಿಜಯವಾಣಿ’ ಅಂಕಣಕಾರರೂ ಆದ ಸ್ವಾಮಿ ನಿರ್ಭಯಾನಂದ ಸರಸ್ವತೀ ಅವರು. ‘ವಿಜಯವಾಣಿ ಮತ್ತು ದಿಗ್ವಿಜಯ’ ಆಯೋಜಿಸಿದ್ದ ಕ್ಲಬ್​ಹೌಸ್ ಕಾರ್ಯಕ್ರಮದಲ್ಲಿ ಅವರು ವಿವೇಕ ಚಿಂತನೆಗಳಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು. ಅವರ ಚಿಂತನೆಗಳ ಸಾರ ಇಲ್ಲಿದೆ.

ಹೊರಗಿನ ಪ್ರಕೃತಿಯನ್ನು ನಿಯಂತ್ರಿಸುವುದು ವಿಜ್ಞಾನ. ಇದರಿಂದಾಗಿಯೇ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸುತ್ತಿದ್ದೇವೆ. ಆದರೆ ಆಂತರಿಕ ಪರಿಸರವನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಆತ್ಮದ ಬೆಳಕು ನಮ್ಮ ಮನಸ್ಸು, ಚಿತ್ತದ ಮೇಲೆ ಬೀಳುವಂತೆ ಮಾಡುವುದು ಹೇಗೆ ಎಂಬುದನ್ನೇ ಉಪನಿಷತ್ತುಗಳು ವಿವರಿಸಿವೆ. ಈ ಆಂತರಿಕ ವಿಜ್ಞಾನವನ್ನೇ ಅಧ್ಯಾತ್ಮ ಎನ್ನಲಾಯಿತು. ಬಾಹ್ಯ ಹಾಗೂ ಆಂತರಿಕ ಪ್ರಕೃತಿಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದನ್ನೇ ನಮ್ಮಲ್ಲಿ ಧರ್ಮ ಎಂದು ಕರೆಯಲಾಯಿತು. ‘ಇಡೀ ವಿಶ್ವವನ್ನೇ ನಿಯಂತ್ರಿಸುವ ಸಾಮರ್ಥ್ಯ ಇರುವ ನೀವು ಕೇವಲ ಒಂದು ತಾಲೂಕು, ಒಂದು ಜಿಲ್ಲೆ, ಒಂದು ರಾಜ್ಯವನ್ನು ನಿಯಂತ್ರಿಸುವ ಸಣ್ಣ ಗುರಿಯನ್ನು ಇರಿಸಿಕೊಂಡಿದ್ದೀರಿ’ ಎಂದು ಭಾರತೀಯರ ಕುರಿತು ವಿವೇಕಾನಂದರು ಬೇಸರ ವ್ಯಕ್ತಪಡಿಸುತ್ತಾರೆ. ‘ಮನುಷ್ಯನ ಮಿದುಳಿನ ಶಕ್ತಿಯನ್ನು ತಿಳಿಯುವ ಸಾಮರ್ಥ್ಯ ಯಾವುದೇ ವಿಜ್ಞಾನ, ಕೃತಿ, ಮಹಾಕಾವ್ಯಕ್ಕಿಲ್ಲ. ಅದಕ್ಕಾಗಿಯೇ, ಮಾನವನಲ್ಲಿರುವ ಬೃಹತ್ ಶಕ್ತಿಯನ್ನು ಜಾಗೃತಗೊಳಿಸುವತ್ತಲೇ ನನ್ನೆಲ್ಲ ಸಮಯ ವಿನಿಯೋಗಿಸುತ್ತಿದ್ದೇನೆ’ ಎಂದಿದ್ದರು ವಿವೇಕಾನಂದರು. ಇಷ್ಟು ಶಕ್ತಿ ಹೊಂದಿರುವ ಮಾನವ ಹೀಗೆ ಬದುಕುತ್ತಿರುವುದು ಸರಿಯಲ್ಲ. ಒಳಗಿರುವ ಶಕ್ತಿಯನ್ನು ಎಚ್ಚರಿಸಬೇಕು, ಅದಕ್ಕಾಗಿ ಆತ್ಮಶ್ರದ್ಧೆಯನ್ನು ಉಪಯೋಗಿಸಿಕೊಳ್ಳಬೇಕು.

ಸಾಧನೆಯ ಹಾದಿ...: ಸಾಧನೆಯ ಮಾರ್ಗದಲ್ಲಿ ಅವಮಾನ, ಹತಾಶೆ, ಕಣ್ಣೀರು, ಸೋಲು, ಜಿಗುಪ್ಸೆ, ನಿರಾಸೆ ಎಲ್ಲವೂ ಇರುತ್ತದೆ. ರವಿ ಚೆನ್ನಣ್ಣವರ್ ಪಿಯುಸಿಯಲ್ಲಿದ್ದಾಗ ನಮ್ಮ ಆಶ್ರಮಕ್ಕೆ ಬಂದರು. ‘ನಿಮಗಾಗುತ್ತಿರುವ ಅವಮಾನ, ನಿರಾಸೆ ಎಲ್ಲವನ್ನೂ ರಾಮಕೃಷ್ಣರು ಆಶೀರ್ವಾದವಾಗಿ ನೀಡುತ್ತಿದ್ದಾರೆ’ ಎಂದು ಹೇಳಿದೆ. ಕಂಡಕ್ಟರ್ ಆಗುತ್ತೇನೆ ಎಂದು ಹೊರಟ ವ್ಯಕ್ತಿ ಐಪಿಎಸ್ ಆದರು. ಬಿಎ ಪಾಸ್ ಮಾಡಲಾಗುತ್ತಿಲ್ಲ ಎಂದು ಪರಿತಪಿಸುತ್ತಿದ್ದ ಶಾಂತೇಶ್ ಎಂಬ ವಿದ್ಯಾರ್ಥಿ ಉತ್ತಮವಾಗಿ ಅಡುಗೆ ಮಾಡುತ್ತಿದ್ದ. ಹೋಟೆಲ್ ಉದ್ಯಮ ಆರಂಭಿಸಿದ. ಈಗ 20 ಹೋಟೆಲ್​ಗಳಲ್ಲಿ ಏಳುನೂರು ಜನರಿಗೆ ಉದ್ಯೋಗ ನೀಡಿದ್ದಾರೆ. ಇಂತಹ ಹತ್ತಾರು ಉದಾಹರಣೆಗಳು ನಮ್ಮ ಆಶ್ರಮದಲ್ಲೇ ಸಿಗುತ್ತವೆ.

ಭಾರತದ ಉದ್ಧಾರ ವಿಶ್ವದ ಉದ್ಧಾರ: ಭಾರತ ಉದ್ಧಾರವಾಗದೆ ವಿಶ್ವ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ನಂಬಿದ್ದರು ವಿವೇಕಾನಂದರು. ಅವರು ನೀಡಿದ ಉಪನಿಷತ್ತಿನ ಕೇಂದ್ರ ವಿಷಯವೇ, ಮನುಷ್ಯನ ಸಾಮರ್ಥ್ಯ ಹಾಗೂ ಅದನ್ನು ಅರಿಯುವಿಕೆ. ಮನುಷ್ಯ ಎಂಬ ದೇವರನ್ನು ಸ್ವಾಮಿ ವಿವೇಕಾನಂದರು ಪರಿಚಯಿಸಿದರು. ‘ಮನುಷ್ಯದೇವನನ್ನು ಆರಾಧಿಸುವು ದಕ್ಕಿಂತಲೂ ನನಗೆ ಬೇರೆ ಯಾವುದೇ ಕಾರ್ಯಕ್ರಮ ಇಲ್ಲ. ಏಕೆಂದರೆ ಜಗತ್ತಿನ ಅಳಿವು, ಉಳಿವು ನಿಂತಿರುವುದು ಮನುಷ್ಯನಿಗೆ ತನ್ನ ಬಗ್ಗೆ ನಂಬಿಕೆ ಮೂಡಿಸುವುದೇ ಆಗಿದೆ’ ಎಂದಿದ್ದರು.

ಯಾವ ಕೃತಿ ಓದಬೇಕು?

  • ಸ್ವಾಮಿ ರಂಗನಾಥಾನಂದಜೀ ಅವರು ವಿವೇಕಾನಂದರ ಕುರಿತು ರಚಿಸಿರುವ ಕೃತಿಗಳನ್ನು ಮೊದಲಿಗೆ ಓದಿ. ನಂತರ 9 ಸಂಪುಟಗಳ ವಿವೇಕಾನಂದರ ಸಂಪೂರ್ಣ ಜೀವನವನ್ನು ಓದಿ.
  • ಪ್ರತಿಯೊಬ್ಬ ತಂದೆ-ತಾಯಿಯೂ, ವಿವೇಕಾನಂದರ ಚಿಂತನೆಗಳನ್ನು ಮಕ್ಕಳಿಗೆ ತಿಳಿಸಬೇಕು.

ಆಕಾಶದ ತಾರೆಗಳನ್ನು ಕೀಳೋಣ!

‘ಆಕಾಶದಲ್ಲಿರುವ ತಾರೆಗಳನ್ನು ಕಿತ್ತು ಯಾವುದೋ ಗಿಡದ ಹೂಗಳಂತೆ ಬಿಸಾಡುತ್ತೇವೆ. ಮೂರು ಲೋಕಗಳನ್ನೂ ಪಲ್ಲಟಗೊಳಿಸುತ್ತೇವೆ, ನಮ್ಮನ್ನು ರಾಮಕೃಷ್ಣರ ದಾಸರು ಎನ್ನುತ್ತಾರೆ’. ರಾಮಕೃಷ್ಣರ ಶಿಷ್ಯರೆಂದರೆ ಯಾರು ಎಂದು ವಿವೇಕಾನಂದರು ತಮ್ಮ ಶಿಷ್ಯರಿಗೆ ಬರೆದ ಪತ್ರದಲ್ಲಿ ಹೀಗೆ ವಿವರಿಸುತ್ತಾರೆ. ‘ಇಂತಹ ಮಹಾಪುರುಷನ ಜತೆಗಿರಲು, ಅವರಿಂದ ಮಂತ್ರದೀಕ್ಷೆ ಪಡೆಯುವ ಭಾಗ್ಯ ಸಿಗಲು ನಾವು ಏನು ಪುಣ್ಯ ಮಾಡಿದ್ದೇವೆಯೊ. ನಮಗೇ ಇಷ್ಟು ಸೌಭಾಗ್ಯ ಸಿಕ್ಕಿರುವಾಗ, ಯಾವ ದೇಶದಲ್ಲಿ ಅವರು ಜನಿಸಿದ್ದಾರೊ ಅವರು ನಮಗಿಂತ ಭಾಗ್ಯವಂತರು’ ಎಂದು ಅಮೆರಿಕದ ಶಿಷ್ಯರಾದ ಜೋಸೆಫಿನ್ ಮೆಕ್​ಲ್ಯಾರ್ಡ್, ಕ್ರಿಸ್ಟಿನ್ ಗ್ರೀನ್​ಸ್ಟೈಡಲ್ ಹೇಳುತ್ತಾರೆ. ಎರಡು ಸಾವಿರ ವರ್ಷದವರೆಗಿನ ಕಾಲದಲ್ಲಿ ಮುಕ್ಕಾಲು ಪ್ರಪಂಚವನ್ನು ಇಷ್ಟು ಲೀಲಾಜಾಲವಾಗಿ ಗೆದ್ದುಬಂದ ಇನ್ನೊಬ್ಬರಿಲ್ಲ. ಕೈಯಲ್ಲಿ ಕಾಸಿಲ್ಲದ, ಜಾತಿ, ನೀತಿಗೆ ಸೇರದ ಕೇವಲ ಮೂವತ್ತು ವರ್ಷದ ಯುವಕ ಇವರೆಲ್ಲ ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡಿದರು. ಅಂದಿನ ಅಮೆರಿಕ, ಯುರೋಪ್​ಗಳನ್ನು ಗೆದ್ದು ಭಾರತಕ್ಕೆ ಹಿಂದಿರುಗಿದಾಗ ಸಿಕ್ಕ ಸ್ವಾಗತ, ಜಗತ್ತಿನ ಇತಿಹಾಸದಲ್ಲಿ ಸೀಸರ್, ಅಲೆಕ್ಸಾಂಡರ್ ಸೇರಿ ಯಾವ ನಾಯಕನಿಗೂ, ಸೇನಾಧಿಕಾರಿಗೂ ಸಿಕ್ಕಿಲ್ಲ ಎಂದು ರೊಮೈ ರೋಲಾ ಹೇಳುತ್ತಾರೆ.

ವಿವೇಕಾನಂದರು ಹಾಗೂ ಕರ್ನಾಟಕ

ವಿವೇಕಾನಂದರು ಅಮೆರಿಕಕ್ಕೆ ಹೋಗುವ ಮುನ್ನ, ಬೆಳಗಾವಿಗೆ ಭೇಟಿ ನೀಡಿದ್ದರು. ಭಾಟೆ ಎಂಬ ವಕೀಲರು, ಮಿತ್ರ ಎಂಬ ಬಂಗಾಳಿ ಅಧಿಕಾರಿ ಮನೆಯಲ್ಲಿ ಉಳಿದಿದ್ದರು. ಇವೆರಡೂ ಮನೆಗಳನ್ನು ಈಗ ಮ್ಯೂಸಿಯಂ ಮಾಡಲಾಗಿದೆ. ಅಲ್ಲಿಂದ ಗೋವಾಕ್ಕೆ ತೆರಳಿ ಲ್ಯಾಟಿನ್ ಭಾಷೆಯಲ್ಲಿದ್ದ ‘ಓಲ್ಡ್ ಟೆಸ್ಟಮೆಂಟ್’ ಕೃತಿ ಓದಿದರು. ಕ್ರಿಶ್ಚಿಯಾನಿಟಿ ಬಗ್ಗೆ ಓದಿ, ಧಾರವಾಡದ ಮೂಲಕ ಬೆಂಗಳೂರಿಗೆ ಬಂದು ದಿವಾನ್ ಶೇಷಾದ್ರಿ ಅಯ್ಯರ್ ಅವರನ್ನು ಭೇಟಿ ಮಾಡಿದರು. ಚಾಮರಾಜೇಂದ್ರ ಒಡೆಯರ್ ಅವರಿಗೆ ವಿವೇಕಾನಂದರನ್ನು ಪರಿಚಯಿಸಲಾಯಿತು. ‘ನೀವು ದೇವರ ಆಸ್ತಿಗಳ ವಿಶ್ವಸ್ಥ. ನಿಮ್ಮ ಮಕ್ಕಳ ರೀತಿಯಲ್ಲಿ ಪ್ರಜೆಗಳನ್ನು ಕಾಪಾಡಬೇಕು’ ಎಂದು ಮಹಾರಾಜರಿಗೆ ತಿಳಿಸಿದರು. ತಾವು ಅಮೆರಿಕಕ್ಕೆ ತೆರಳುವುದಾದರೆ ನಾನು ಖರ್ಚು ವಹಿಸಿಕೊಳ್ಳುವೆ ಎಂದು ಮಹಾರಾಜರು ಹೇಳಿದರು. ಅಲ್ಲಿಂದ ಕನ್ಯಾಕುಮಾರಿ, ರಾಮೇಶ್ವರಂ ಮೂಲಕ ಮದ್ರಾಸ್​ಗೆ ತೆರಳಿದರು. ಅಮೆರಿಕಕ್ಕೆ ತೆರಳುವುದೆಂದು ನಿರ್ಧಾರವಾದ ನಂತರ ಅಳಸಿಂಗ ಪೆರುಮಾಳ್ ಮೈಸೂರಿಗೆ ಬಂದು ಮಹಾರಾಜರಿಂದ ಐನೂರು ರೂ. ಪಡೆದುಕೊಂಡು ಹೋದರು. ಅಮೆರಿಕದಿಂದ ವಿವೇಕಾನಂದರು ಮಹಾರಾಜರಿಗೆ ಒಂದು ಪತ್ರ ಬರೆದರು. ‘ಬೇರೆಯವರಿಗೆ ಬದುಕುವವರದ್ದೇ ಬದುಕು, ಕೇವಲ ತಮಗಾಗಿಯೇ ಬದುಕುವವರು ಬದುಕಿಯೂ ಸತ್ತಂತೆ’ ಎಂಬ ಪತ್ರದ ಸಾರವು, ಅಂದು ಯುವಕರಾಗಿದ್ದ, ಮುಂದೆ ಮಹಾರಾಜರಾದ ಕೃಷ್ಣರಾಜ ಒಡೆಯರ್ ಮೇಲೆ ಅಗಾಧ ಪರಿಣಾಮ ಬೀರಿತು. ಮುಂದೆ ಅವರು ರಾಜರ್ಷಿಯಾಗಿ ಪರಿವರ್ತನೆಯಾಗಲು ಈ ಮಾತುಗಳು ನಿಸ್ಸಂಶಯವಾಗಿ ಕೆಲಸ ಮಾಡಿರಬೇಕು. ಮೈಸೂರಿನ ನಿರಂಜನ ಮಠದಲ್ಲಿ ಉಳಿದುಕೊಂಡು ಜಪಧ್ಯಾನ ಮಾಡಿದರು. ಒಂದು ದಿನ ಮೈಸೂರು ಪ್ರಾಂತ್ಯ ನಮ್ಮ ಕ್ರಿಯಾಶೀಲ ಕೇಂದ್ರವಾಗುತ್ತದೆ ಎಂದು ಅಳಸಿಂಗ ಪೆರುಮಾಳ್ ಅವರಿಗೆ ಬರೆದ ಪತ್ರದಲ್ಲಿ ವಿವೇಕಾನಂದರು ತಿಳಿಸಿದ್ದರು. ಇದೇ ಕಾರಣಕ್ಕಿರಬೇಕು, ಬಂಗಾಳಿ ಸಾಧುಗಳನ್ನು ಬಿಟ್ಟರೆ ರಾಮಕೃಷ್ಣ ವಿವೇಕಾನಂದರ ವಿಚಾರಗಳನ್ನು ಅನುಸರಿಸಿ ಅತಿ ಹೆಚ್ಚು ಸಾಧುಗಳಿರುವುದು ಕನ್ನಡಿಗರೇ. ಕರ್ನಾಟಕದಲ್ಲಿ 50 ಆಶ್ರಮಗಳಿವೆ.

ನೈತಿಕತೆ ನಮ್ಮದಾಗಲಿ

13-25ರವರೆಗಿನ 12 ವರ್ಷದಲ್ಲಿ ಯುವಕರು ಸಿಂಹದಂತೆ ನಿರ್ಮಾಣ ಆಗಬೇಕು. ಇದಕ್ಕಾಗಿ ಶಾರೀರಿಕ, ನೈತಿಕ ಹಾಗೂ ಬೌದ್ಧಿಕ ಶಕ್ತಿಯೂ ಬೇಕು. ಇಂದು ಶಾರೀರಿಕ ಹಾಗೂ ಬೌದ್ಧಿಕ ಶಕ್ತಿಗೇ ಸೀಮಿತವಾಗುತ್ತೇವೆ. ಧೀಃಶಕ್ತಿ, ಚುರುಕುತನ ಇಲ್ಲದಿದ್ದರೆ ಏನು ಸಾಧನೆ ಮಾಡಲು ಸಾಧ್ಯ? ‘ಧಿಯೋ ಯೋನಃ ಪ್ರಚೋದಯಾತ್’ ಎಂದು ಗಾಯತ್ರಿ ಮಂತ್ರದಲ್ಲಿ ಹೇಳಿದಂತೆ, ಧೀಃಶಕ್ತಿಯನ್ನು ಜಾಗೃತಗೊಳಿಸಬೇಕು. ನಮಗೆ ಪರ್ವತೋಪಮಾನ ಇಚ್ಛಾಶಕ್ತಿ ಬೇಕು. ಸಮುದ್ರದ ಆಳಕ್ಕೆ ಇಳಿದು ಮೃತ್ಯುವನ್ನು ಎದುರಿಸಿಬರುವಂತಿರಬೇಕು. ಜೀವನದಲ್ಲಿ ಏನಾಗಬೇಕೆಂದು ಸ್ಪಷ್ಟತೆ ಇರಬೇಕು. ಇಂದಿನ ಯುವಕರಿಗೆ ಅನೇಕರ ರೀತಿ ಆಗಬೇಕೆಂಬ ಬಯಕೆ ಇರುತ್ತದೆ. ಕೊನೆಗೆ ಏನನ್ನೂ ಮಾಡಲು ಆಗುವುದಿಲ್ಲ. ಜಗತ್ತು ಎಂದಿಗೂ ಸಾಮರ್ಥ್ಯವನ್ನು ಆರಾಧಿಸುತ್ತದೆ. ಯಾವುದಾದರೂ ಒಂದು ಗುರಿ ಇಟ್ಟುಕೊಳ್ಳಬೇಕು.

ವಿವೇಕಾನಂದರ ಜೀವನ ಮತ್ತು ಆದರ್ಶವನ್ನು ನಾವು ಗಂಭೀರವಾಗಿ ತೆಗೆದುಕೊಂಡು ಯುವಕರಿಗೆ ತಲುಪಿಸಬೇಕು. ಅಂದಾಗ ಯುವಜನರ ಜೀವನ ಉಜ್ವಲವಾಗುವ ಜತೆಗೆ ದೇಶದ ಏಳಿಗೆಯೂ ಆಗುತ್ತದೆ. | ಸ್ವಾಮಿ ಪ್ರಕಾಶಾನಂದ ರಾಮಕೃಷ್ಣ- ವಿವೇಕಾನಂದ ಆಶ್ರಮ, ರಾಣೆಬೆನ್ನೂರು

ವಿಜಯವಾಣಿ ಕ್ಲಬ್ ಸಂವಾದ

ವಿವೇಕಾನಂದರದ್ದು ಇಚ್ಛಾಮರಣವೆ?

ಹೌದು. ನಿಧನರಾಗುವ ಎರಡು ವರ್ಷ ಮೊದಲೇ ಒಂದು ಪದ್ಯದಲ್ಲಿ ಈ ಕುರಿತು ಬರೆದಿದ್ದಾರೆ. 15 ದಿನ ಮುನ್ನ ಪಂಚಾಂಗ ತರಿಸಿ ದಿನಾಂಕವನ್ನು ನಿಗದಿ ಮಾಡಿಕೊಂಡಿದ್ದರು. ‘ನರೇಂದ್ರನಿಗೆ ತಾನು ಯಾರು ಎಂದು ಗೊತ್ತಾಗಿಹೋದರೆ ಹೆಚ್ಚು ದಿನ ಬದುಕುವುದಿಲ್ಲ’ ಎಂದಿದ್ದರು ರಾಮಕೃಷ್ಣ ಪರಮಹಂಸರು. ‘ಪ್ರಕೃತಿಯನ್ನು ಗೆಲ್ಲು’ ಎಂದು ವಿವೇಕಾನಂದರು ಹೇಳಿದ್ದು ಇದರ ಕುರಿತೇ.

ಸರಿಯಾದ ಊಟವೂ ಸಿಗುತ್ತಿರಲಿಲ್ಲ

ವಿವೇಕಾನಂದರಿಗೆ ನಾಲ್ಕು ಸಲ ನೆಗಡಿ ಬಂದಿದ್ದನ್ನು ‘ನಾಲ್ಕು ಬಾರಿ ಕಾಯಿಲೆ’ ಎಂದು ಕೆಲವರು ಪುಸ್ತಕ, ಲೇಖನ ಬರೆದಿದ್ದಾರೆ, ಅದೆಲ್ಲ ಸುಳ್ಳು. ಅಮೆರಿಕಕ್ಕೆ ಹೋಗಿದ್ದಾಗ ಹಾಗೂ ವಾಪಸಾಗಿದ್ದಾಗಿನ ಪರಿಸ್ಥಿತಿಯಲ್ಲಿ ತೆಳ್ಳಗಾಗಿದ್ದರು. ಅಮೆರಿಕದಲ್ಲಿ ಮೂರೂವರೆ ವರ್ಷ ಓಡಾಟ, ಪ್ರವಚನಗಳಿಂದಾಗಿ ಆರೋಗ್ಯದ ಮೇಲೆ ಪರಿಣಾಮವಾಗಿತ್ತು. ಪರಿವ್ರಾಜಕರಾಗಿ ಓಡಾಡುವಾಗ ಎರಡು ದಿನಕ್ಕೆ ಒಂದು ಹೊತ್ತು ಊಟವೂ ಸಿಗುತ್ತಿರಲಿಲ್ಲ. ಇಂತಹ ಸ್ಥಿತಿ ಎದುರಿಸಿದ ಯಾರಾದರೂ ಜರ್ಜರಿತ ರಾಗುತ್ತಾರೆ. ಆದರೆ ಬೆಳಗಾವಿಗೆ ಬರುವ ವೇಳೆಗೆ ವಜ್ರಶರೀರಿ ಆಗಿದ್ದರು. ಕೆ. ವ್ಯಾಸರಾವ್ ಎನ್ನುವವರು, ‘ಪೈಲ್ವಾನ್ ಸ್ವಾಮೀಜಿ’ ಎಂದೇ ವಿವೇಕಾನಂದರನ್ನು ಕರೆದಿದ್ದಾರೆ.

ಗುಲಾಮಗಿರಿ ಮಾನಸಿಕತೆ

ನಮ್ಮಲ್ಲಿ ಗುಲಾಮಿ ಪ್ರವೃತ್ತಿ ಈ ಹೊತ್ತಿಗೂ ಇದೆ. ಪಶ್ಚಿಮದವರು ಹೇಳುವ ಸುಳ್ಳುಗಳು ನಮಗೆ ವೇದವಾಕ್ಯಗಳಾಗುತ್ತಿವೆ. ನಾವು ಶಿಕ್ಷಣ ಪಡೆದಷ್ಟೂ ಹೆಚ್ಚು ಗುಲಾಮರಾಗುತ್ತಿದ್ದೇವೆ. ಅಲ್ಲಲ್ಲಿ ಕೆಲವರಿಗೆ ಮಾತ್ರವೇ ಸ್ವಾಮೀಜಿಯವರ ಸಾಮರ್ಥ್ಯ ತಿಳಿದಿತ್ತು. ರಾಮಕೃಷ್ಣರ ಹೆಸರಿನಲ್ಲಿ ದೊಡ್ಡ ಮಠ ಮಾಡಬೇಕು ಎಂಬ ಬಯಕೆ ವಿವೇಕಾನಂದರಿಗಿತ್ತು. ಊರೂರಿಗೂ ಮನೆಮನೆಯಲ್ಲಿ ಜಾಗೃತಿ ಮೂಡಿಸಬೇಕಿತ್ತು. ಇದಕ್ಕೆ ಯುವಕರು ಬೇಕಿತ್ತು, ಎರಡು ಕಾಲೇಜು ಆಗಬೇಕಿತ್ತು. ಈ ಕಾರ್ಯಕ್ಕೆ ಅವತ್ತಿನ ಭಾರತದಲ್ಲಿ ಹಣ ಇತ್ತು. ಆದರೆ ಇದರಿಂದ ಭಾರತಕ್ಕೆ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ.

ಪಶ್ಚಿಮಕ್ಕೆ ಹೋಗಿ ದೊಡ್ಡವರಾದರೆ ಭಾರತೀಯರು ನಿಮ್ಮ ಪೂಜೆ ಮಾಡುತ್ತಾರೆ. ಅದಕ್ಕಾಗಿಯೇ ರಾಮಕೃಷ್ಣರು ವಿವೇಕಾನಂದರನ್ನು ಅಮೆರಿಕಕ್ಕೆ ಕಳಿಸಿದರು. ಅಲ್ಲಿಂದ ಆಗಮಿಸಿದ ನಂತರ ಭಾರತೀಯರು ನಾಮುಂದು ತಾಮುಂದು ಎಂದು ಹಠಕ್ಕೆ ಬಿದ್ದು ವಿವೇಕಾನಂದರನ್ನು ಗೌರವಿಸಲು ಆರಂಭಿಸಿದರು.

ಸುಳ್ಳು ಇತಿಹಾಸ ಬರೆದವರು ಅಪರಾಧಿಗಳು

ಋಗ್ವೇದದ ಆರಂಭದಿಂದ ವಿವೇಕಾನಂದರ ಕೊನೆಯ ನುಡಿಯವರೆಗೆ, ‘ಬೆಂಕಿಯಂತೆ ಬದುಕಿ...’ ಎಂಬ ಸಂದೇಶವನ್ನೇ ನೀಡಲಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದೆಲ್ಲ ಎಲ್ಲಿದೆ? ಸಂಬಂಧಪಟ್ಟವರ ಬೇಜವಾಬ್ದಾರಿತನ ಇದು. ಸಾಮರ್ಥ್ಯವಂತರಾಗಿ ದೇಶ, ರಾಜ್ಯ, ಇಲಾಖೆಗಳನ್ನು ನಡೆಸಬೇಕು. ಕೈಲಾಗದಿದ್ದರೆ ಬಿಟ್ಟುಬರಬೇಕು. ‘ಮನುಷ್ಯ ಜೀವನಕ್ಕೆ ಬೇಕಾದ ಲಕ್ಷಣಗಳನ್ನು ನಮ್ಮ ಸ್ವಭಾವಗಳನ್ನಾಗಿಯೇ ಮಾಡಿಕೊಳ್ಳುವುದು ಶಿಕ್ಷಣ’ ಎಂದರು ವಿವೇಕಾನಂದರು. ಇದೀಗ ಹೊಸ ಶಿಕ್ಷಣ ನೀತಿ ಬರುತ್ತಿದೆ. ಬದಲಾವಣೆ ತರುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಪ್ರಾಚೀನ ಭಾರತದ ಸಾಧನೆಗಳನ್ನು ಇತಿಹಾಸದಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ಮುಖ್ಯವಾದದ್ದು. ಇತಿಹಾಸ ತಿಳಿಯದವ ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಯುರೋಪ್ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗಲೇ ಭಾರತದಲ್ಲಿ ಪ್ರಬುದ್ಧ ನಾಗರಿಕತೆ ಬೆಳೆದಿತ್ತು ಎಂದು ವಿದೇಶಿಗರೇ ಹೇಳುತ್ತಾರೆ. ಆದರೆ ನಮ್ಮ ದೇಶದ ದ್ರೋಹಿಗಳು ಇದೆಲ್ಲವನ್ನೂ ಮುಚ್ಚಿಟ್ಟು ಇತಿಹಾಸ ಕೃತಿಗಳನ್ನು ಬರೆದರು. ಸುಳ್ಳು ಇತಿಹಾಸದ ಕೃತಿ ಬರೆದ ಅವಿವೇಕಿಗಳನ್ನು, ಅಪರಾಧಿಗಳನ್ನು ಎಂದಿಗೂ ಸಹಿಸಿಕೊಳ್ಳಬಾರದು.

ಹಿಂದುಳಿದ ಸಮಾಜ ಎನ್ನಬೇಡಿ

ಹಿಂದುಳಿದವರು ಎನ್ನುವುದು ರಾಜಕಾರಣಿಗಳು ಬಳಸುವ ಪದ. ಜಗತ್ತಿನ ಎಲ್ಲ 700 ಕೋಟಿ ಜನರಿಗೂ ಎಂಟು ನೊಬೆಲ್ ಬಹುಮಾನ ಪಡೆದುಕೊಳ್ಳುವ ಸಾಮರ್ಥ್ಯ ಇದೆ. ಹಿಂದುಳಿದ ವರ್ಗ ಎನ್ನುವ ಪದವನ್ನು ಕಿತ್ತು ಬಿಸಾಕಿ. ಸ್ವಾರ್ಥ ರಾಜಕಾರಣಿಗಳು, ಹೇಡಿ ನಪುಂಸಕ ಅಧಿಕಾರಿಗಳು ಸೇರಿ ಹಿಂದುಳಿದ ಪ್ರದೇಶ, ಹಿಂದುಳಿದ ವರ್ಗ ಎಂಬ ಪದಗಳನ್ನು ಪ್ರಯೋಗಿಸಿದ್ದಾರೆ. ಭಾರತದಲ್ಲಿ ಯಾರೂ ದುರ್ಬಲರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net