

ಮನುಷ್ಯನ ದೇಹದಲ್ಲಿರುವ ‘ಮುಷ್ಟಿಗಾತ್ರದ ಹೃದಯಕ್ಕೆ ಶಿಖರದಷ್ಟು ಕೆಲಸವಿದೆ’. ಇಷ್ಟೊಂದು ಒತ್ತಡದಿಂದ ಕಾರ್ಯನಿರ್ವಹಿಸುವ ಹೃದಯ ಸದಾ ಮಿಡಿಯುತ್ತಿರಲು ಚಟುವಟಿಕೆಯುಕ್ತ ಜೀವನಶೈಲಿ ಹಾಗೂ ಉತ್ತಮ ಆಹಾರ ಕ್ರಮಗಳನ್ನು ಅನುಸರಿಸಬೇಕು. ಆರೋಗ್ಯವಂತ ಹೃದಯ ಪ್ರತಿ ನಿಮಿಷಕ್ಕೆ 75-85 ಬಾರಿ ಬಡಿತ ಹೊಂದಿರುತ್ತದೆ. ಅಂದರೆ ಪ್ರತಿ ನಿತ್ಯ ಒಂದು ಲಕ್ಷ ಬಾರಿ ಮಿಡಿಯುತ್ತದೆ. ಇದರಿಂದ ಹೃದಯಕ್ಕೆ ಒತ್ತಡ ಹೆಚ್ಚಿರುತ್ತದೆ. ಮಾನವ ದೇಹದ ಅಂಗಾಂಗಗಳಲ್ಲೇ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಹೃದಯ ನಿರಂತರವಾಗಿ ಮಿಡಿಯುತ್ತಲೇ ಇರಬೇಕು. ಅದೇನಾದರೂ ವಿಶ್ರಾಂತಿ ಬಯಸಿದ್ದೇ ಆದರೆ ಜೀವ ಮುಗಿಯಿತು ಎಂದರ್ಥ ಎಂದು ಎಚ್ಚರಿಸಿದವರು ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆಯ ತಜ್ಞ ಡಾ. ಸಿ.ಎನ್. ಮಂಜುನಾಥ್.
ಶೇ. 25 ಹೃದಯ ಸಂಬಂಧಿ ಕಾಯಿಲೆ: ಭಾರತದಲ್ಲಿ ಒಟ್ಟಾರೆ ರೋಗಿಗಳಲ್ಲಿ ಶೇ. 25 ಹೃದಯ ಸಂಬಂಧಿ ಕಾಯಿಲೆ ಹೊಂದಿದವರಿದ್ದಾರೆ. ಇದರಲ್ಲಿ ಮುಂಚೂಣಿಯಲ್ಲಿರುವುದು ಹೃದಯಾಘಾತ. ಹೃದಯದ ಸಮಸ್ಯೆಯನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಹೇಳುವುದಾದರೆ, ಹುಟ್ಟಿನಿಂದಲೇ ಬರುವ ಕಾಂಜನೈಟಿಲ್ ಹಾರ್ಟ್ ಡಿಸೀಸ್, ಎರಡನೇಯದು ಹೃದಯಾಘಾತ (ರಕ್ತನಾಳದಲ್ಲಿ ಬ್ಲಾಕೇಜ್ ಆಗಿ ರಕ್ತ ಹೆಪು್ಪಗಟ್ಟುವಿಕೆಯಿಂದ ಉಂಟಾಗುತ್ತದೆ), ಮೂರನೇಯದು ಹೃದಯದ ಕವಾಟಗಳ ಕಾಯಿಲೆ (ರುಮ್ಯಾಟಿಕ್ ಹಾರ್ಟ್ ಡಿಸೀಸ್). ಇದರಿಂದ ಹೃದಯದ ಬಾಗಿಲು ಕಿರಿದಾಗುತ್ತದೆ. ನಾಲ್ಕನೆಯದು ವ್ಯಾಲುಲಾರ್ ಡಿಸೀಸ್ ಕಾರ್ಡಿಯೋ ಮಯೋಪತಿ (ಅಧಿಕ ರಕ್ತದ ಒತ್ತಡ ಹಾಗೂ ಮಧುಮೇಹದಿಂದ ಹೃದಯ ದುರ್ಬಲವಾಗುವುದು). ಇವುಗಳ ಬಗ್ಗೆ ಎಚ್ಚರವಿರಬೇಕು.
ಯುವಕರಲ್ಲಿ ಹೃದಯಾಘಾತ: ಹೃದ್ರೋಗಿಗಳಲ್ಲಿ ಶೇ. 25 ಯುವಜನರಾಗಿದ್ದಾರೆ (30 ವರ್ಷದೊಳಗಿನ). ಮಧುಮೇಹ ಹಾಗೂ ಹೃದ್ರೋಗ ಸಮಸ್ಯೆಗಳು ಮದುಮಕ್ಕಳಲ್ಲಿ ಅಂದರೆ ಮದುವೆ ವಯಸ್ಸಿನ ಯುವಜನರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಹಿಂದೆ ನಗರವಾಸಿಗಳಲ್ಲಿ ಕಾಣಿಸುತ್ತಿದ್ದ ಹೃದ್ರೋಗ ಈಗ ಗ್ರಾಮೀಣ ಭಾಗದವರು, ಬಡವರು ಎನ್ನದೆ ಎಲ್ಲ ವರ್ಗ ಹಾಗೂ ವಯೋಮಾನದವರಲ್ಲಿ ಕಂಡುಬರುತ್ತಿದೆ. ಹಿಂದೆಲ್ಲ ಮಕ್ಕಳು ಪಾಲಕರನ್ನು ಆಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಈಗ ಪಾಲಕರೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ ಎಂದು ಡಾ. ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.
ಲಕ್ಷಣಗಳು: ನಡೆಯುವಾಗ, ಓಡಾಡುವಾಗ, ಮೆಟ್ಟಿಲು ಏರುವಾಗ ಎದೆಉರಿ, ಎದೆನೋವು ಬರುವುದು. ಎದೆಯ ಎಡಭಾಗ ಅಥವಾ ಮಧ್ಯಭಾಗದಲ್ಲಿ ನೋವು. ಮೈಬೆವರು, ಉಸಿರಾಟದ ತೊಂದರೆ. ಹೃದಯಾಘಾತವಾದಾಗ ಕೆಲವರಿಗೆ ಹೊಟ್ಟೆ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು ವಾಂತಿ ಆಗಬಹುದು. ಮೇಲ್ನೋಟಕ್ಕೆ ಗ್ಯಾಸ್ಟ್ರಿಕ್ ಎಂದು ತಿಳಿದುಕೊಳ್ಳುತ್ತಾರೆ. ಕೆಲವರಿಗೆ ಹೃದಯಾಘಾತ ಆದಾಗ ಗಂಟಲು, ದವಡೆ, ಬೆನ್ನಿನ ಮೇಲ್ಭಾಗದಲ್ಲಿ ನೋವು ಬರಬಹುದು. ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ತೋರಿಸಬೇಕು.
| ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಮಕ್ಕಳ ಹೃದ್ರೋಗ ತಜ್ಞೆ
ಅಡುಗೆಎಣ್ಣೆ ಬದಲಾವಣೆಯಿಂದ ಹೃದಯ ಸಮಸ್ಯೆ ಬರುತ್ತದೆಯೇ?
ಆಹಾರವಿರಲಿ, ಅಡುಗೆಎಣ್ಣೆ ಇರಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ, ಪಾರಂಪರಿಕವಾಗಿ ಬಳಸಿಕೊಂಡು ಬರುತ್ತಿರುವುದನ್ನು ಮುಂದುವರಿಸಬೇಕು. ಯಾವುದೇ ಎಣ್ಣೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿ ಬಳಸುವುದು ಒಳ್ಳೆಯದಲ್ಲ.
ಯಾವ ರೀತಿಯ ಆಹಾರ ಪದಾರ್ಥ ಬಳಸಿದರೆ ಒಳ್ಳೆಯದು?
ಮಂಡ್ಯದವರು ರಾಗಿ, ತುಮಕೂರಿನವರು ನವಣೆ, ಉತ್ತರ ಕರ್ನಾಟಕದವರು ಜೋಳ, ಉತ್ತರ ಭಾರತದವರು ಗೋಧಿ ಹೀಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಪಾರಂಪರಿಕ ಆಹಾರ ಕ್ರಮ ಅನುಸರಿಸುವುದು ಒಳ್ಳೆಯದು.
ಸಿರಿಧಾನ್ಯ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಬಹುದೇ?
ಸಿರಿಧಾನ್ಯ ಎಲ್ಲರಿಗೂ ಒಗ್ಗುವುದಿಲ್ಲ. ಅದರಲ್ಲೂ ಪಿತ್ತ ಹಾಗೂ ವಾತ ಪ್ರಕೃತಿ ಹೊಂದಿದವರು ಸಿರಿಧಾನ್ಯ ಬಳಸುವುದು ಸೂಕ್ತವಲ್ಲ. ರುಮಟೈಡ್ ಆರ್ಥರೈಟಿಸ್ ಹಾಗೂ ಐಬಿಎಸ್ ಸಮಸ್ಯೆ ಹೊಂದಿದವರು ಸೇಬು, ಆಲೂಗಡ್ಡೆ, ಬಟಾಣಿ, ಅವರೇಕಾಳು, ಶೇಂಗಾ, ಬೂದುಗುಂಬಳ ಹಾಗೂ ಅತಿಯಾದ ಮಸಾಲೆ ಪದಾರ್ಥ ಸೇವಿಸಬಾರದು.
ಆರೋಗ್ಯವಂತ ಹೃದಯಕ್ಕೆ ಕೋಪ ಒಳ್ಳೆಯದಲ್ಲ; ಹಾಗಾದರೆ ಕೋಪ ನಿಯಂತ್ರಿಸುವುದು ಹೇಗೆ?
ಪ್ರತಿನಿತ್ಯ 10 ರಿಂದ 15 ನಿಮಿಷ ‘ಓಂ’ ಎಂದು ಹೇಳುವುದರಿಂದ ಕೋಪ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ರಕ್ತದೊತ್ತಡ ಕಡಿಮೆಯಾಗಿ ಸ್ಥಿತಪ್ರಜ್ಞೆಯ ಮನಸ್ಸು ಹೊಂದಲು ಸಹಕಾರಿಯಾಗುತ್ತದೆ.
ಒಣ ಆಹಾರ, ಸಿದ್ಧಪಡಿಸಿದ ಆಹಾರ, ಅಲ್ಪಭೋಜನ, ವಿಪರೀತ ಬಿಸಿ, ಹುಳಿ, ಉಪು್ಪ ಮತ್ತು ಖಾರ ಆಹಾರ ಸೇವನೆ, ಅಜೀರ್ಣವಿದ್ದಾಗ ಊಟ ಮಾಡುವುದು, ಮದ್ಯಪಾನ, ಧೂಮಪಾನ, ಕೋಪ, ಬಿಸಿಲಿನಲ್ಲಿ ಕೆಲಸ ಮಾಡುವುದು, ಅತಿಯಾಗಿ ಭೋಜನ, ಜಿಡ್ಡು ಇರುವ ಆಹಾರ ಸೇವನೆ, ಎಳ್ಳು, ಹಾಲು, ಬೆಲ್ಲದ ಅತಿ ಸೇವನೆ ಹಾಗೂ ಹೆಚ್ಚಾಗಿ ನಿದ್ದೆ ಮಾಡುವುದು. ಚಿಕಿತ್ಸೆಯಲ್ಲಿ ವ್ಯತ್ಯಾಸ, ಭಯ, ಚಿಂತೆ, ಕೋಪ, ಉದ್ವೇಗ, ಅನ್ಯರೋಗಗಳಿಗೆ ಸರಿಯಾಗಿ ಚಿಕಿತ್ಸೆ ಆಗದಿದ್ದರೆ ಹೃದ್ರೋಗ ಬರುತ್ತದೆ.
| ಡಾ.ಗಿರಿಧರ ಕಜೆ ಆಯುರ್ವೆದ ತಜ್ಞ
| ಡಾ.ಕೆ.ಎಸ್.ಸದಾನಂದ ಮೈಸೂರು ಜಯದೇವ ಹೃದ್ರೋಗ ವಿಜ್ಞಾನ-ಸಂಶೋಧನಾ ಸಂಸ್ಥೆ
| ಡಾ.ಎಂ.ಆರ್. ಪ್ರಸಾದ್ ಡಾ. ಪ್ರಭಾಕರ ಕೋರೆ ಆಸ್ಪತ್ರೆ- ಸಂಶೋಧನಾ ಕೇಂದ್ರ ಬೆಳಗಾವಿ
ಹೃದ್ರೋಗಿಗಳು ಪ್ರತಿನಿತ್ಯ 15 ನಿಮಿಷಗಳ ಕಾಲ ಹಸಿರಿನಿಂದ ಕೂಡಿದ ಪರಿಸರ ವೀಕ್ಷಿಸುವುದರಿಂದಲೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಜತೆಗೆ ಇದರಿಂದ ಮನುಷ್ಯನಲ್ಲಿ ಕೋಪ, ಉದ್ವೇಗ, ಹೊಟ್ಟೆಕಿಚ್ಚು, ಅನುಮಾನ, ಹಗೆತನದಂಥ ದುರ್ಗಣಗಳು ದೂರವಾಗಿ ಉತ್ತಮ ಆಲೋಚನೆಗಳು ಮೂಡುತ್ತವೆ. ಇದು ಆರೋಗ್ಯಕರ ಹೃದಯಕ್ಕೆ ದಾರಿ ಮಾಡಿಕೊಡುತ್ತದೆ.
ಯೋಗಾಸನಗಳಲ್ಲಿ ತಾಡಾಸನ, ಅರ್ಧಕಟಿ ಚಕ್ರಾಸನ, ತ್ರಿಕೋನಾಸನ, ವೀರಭದ್ರಾಸನ, ಪರ್ವತಾಸನ, ಮಾರ್ಚಾಲಾಸನ, ಉತ್ತಿತ್ತ ಏಕ ಪಾದಾಸನ ಮಾಡಬೇಕು. ಜತೆಗೆ ಪ್ರತಿ ನಿತ್ಯ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಶವಾಸನ ಮಾಡಬೇಕು. ನಿತ್ಯ ಬೆಳಗ್ಗೆ ಮತ್ತು ಸಂಜೆ ಚಿನ್ಮುದ್ರೆ (ತೋರು ಬೆರಳು ಹೆಬ್ಬೆರಳ ತುದಿ ಸೇರಿಸಿ ಮಂಡಿಯ ಮೇಲಿಟ್ಟು) ಕಣ್ಣುಮುಚ್ಚಿ 1-50 ಬಾರಿ ಉಸಿರಾಟವನ್ನು ಎಣಿಸಬೇಕು.
ಮುದ್ರಾಸನ: ಹೃದಯ ಮುದ್ರೆ ಮಾಡಿ (ತೋರು ಬೆರಳನ್ನು ಹೆಬ್ಬೆರಳ ಬುಡಕ್ಕೆ ಮಡಿಚಿ, ಮಧ್ಯದ ಹಾಗೂ ಉಂಗುರದ ಬೆರಳುಗಳ ಅಗ್ರಭಾಗವನ್ನು ಹೆಬ್ಬೆರಳ ಅಗ್ರಭಾಗಕ್ಕೆ ರ್ಸ³ಸಿ, ಕಿರುಬೆರಳನ್ನು ನೇರವಾಗಿಟ್ಟುಕೊಳ್ಳಬೇಕು) ಹತ್ತು ನಿಮಿಷ ಕಾಲ ‘ಓಂ ನಮಃ ಶಿವಾಯ’ ಎಂದು ಹೇಳಬೇಕು.
ಲಲಿತಾ ದೇವಿ ಹೃದಯದ ಅಧಿದೇವತೆ. ಹಾಗಾಗಿ ಲಲಿತಾ ಮುದ್ರಾಸನದಲ್ಲಿ (ಎಡಗೈಯನ್ನು ಹೃದಯದ ಮೇಲಿಟ್ಟು, ಅದರ ಮೇಲೆ ಬಲಗೈ ಇಟ್ಟು ) ಪ್ರತಿ ಮಂಗಳವಾರ ದಕ್ಷಿಣಕ್ಕೆ ಮುಖಮಾಡಿ 108 ಬಾರಿ ‘ಓಂ ಲಂ ಲಲಿತ ದೇವಿ ಭ್ಯಾಂ ನಮಃ’ ಎಂದು ಹೇಳಬೇಕು.
| ಗೋಪಾಲಕೃಷ್ಣ ದೇಲಂಪಾಡಿ ಯೋಗ ತಜ್ಞ
| ಡಾ. ಬಸವರಾಜ ಬಳಿಗಾರ
ಭಾರತ ಮತ್ತು ಇನ್ನಿತರ ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ದೇಶಗಳಲ್ಲಿ ಸಂಭವಿಸುವ ಸಾವಿನ ಪ್ರಮಾಣದಲ್ಲಿ ಹೃದ್ರೋಗದಿಂದಲೇ ಸಾಯುವವರ ಸಂಖ್ಯೆಯೇ ಹೆಚ್ಚು.
ಹೃದಯಾಘಾತ ಎಂದರೇನು?: ಯಾವಾಗ ಹೃದಯದ ಮೇಲಿರುವ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆಯೋ (Blockage) ಆವಾಗ ಹೃದಯದ ಸ್ನಾಯುಗಳಿಗೆ ರಕ್ತಪೂರೈಕೆ ನಿಂತು ಹೃದಯಾಘಾತವಾಗುತ್ತದೆ. ಕೂಡಲೇ ರಕ್ತ ಹೆಪ್ಪುಗಟ್ಟುವುದನ್ನು ತೆಗೆಯದೆ ಇದ್ದರೆ ಹೃದಯಕ್ಕೆ Irreverceble damage ಆಗಿ ಸಾವು ಸಂಭವಿಸಬಹುದು. ಹೃದಯ ರಕ್ತನಾಳಗಳಲ್ಲಿ ಕೊಬ್ಬಿನಿಂದ ಕೂಡಿದ ರಕ್ತ ಹೆಪ್ಪುಗಟ್ಟುವುದು ಹೃದಯಾಘಾತಕ್ಕೆ ಪ್ರಮುಖ ಕಾರಣ.
ಹೃದ್ರೋಗದ ಲಕ್ಷಣಗಳು: ಎದೆನೋವು, ಬೆವರುವಿಕೆ, ಉಸಿರಾಟದ ತೊಂದರೆ, ನಿತ್ರಾಣ, ತಲೆ ಸುತ್ತುವುದು, ಕತ್ತು ಮತ್ತು ಗಂಟಲುನೋವು, ಬೆನ್ನುನೋವು, ಎಡಗೈ ನೋವು, ಮಧುಮೇಹ ಇದ್ದವರಿಗೆ ಯಾವುದೇ ತೊಂದರೆಗಳು (ಲಕ್ಷಣ) ಕಾಣದೆ ಇರಬಹುದು. ಈ ಲಕ್ಷಣಗಳು ಕಂಡುಬಂದಾಗ ತುರ್ತಾಗಿ ಹೃದಯರೋಗ ತಜ್ಞರನ್ನು ಕಂಡು ಇಸಿಜಿ (ಇಕೋ ಕಾರ್ಡಿಯಾಗ್ರಾಮ), ಟ್ರೋಪೊನಿನ್ ಟೆಸ್ಟ್ ಮಾಡಿಸಬೇಕು. ಈ ಟೆಸ್ಟ್ಗಳಲ್ಲಿ ಹೃದಯಾಘಾತ ದೃಢಪಟ್ಟರೆ ಕೂಡಲೇ ಆಸ್ಪತ್ರೆಗೆ ಅಡ್ಮಿಟ್ ಆಗಿ ಮುಂದಿನ ಚಿಕಿತ್ಸೆಯನ್ನು ತಪ್ಪದೆ ತೆಗೆದುಕೊಳ್ಳಬೇಕು.
ಚಿಕಿತ್ಸೆ: ಹೃದಯರೋಗ ತಜ್ಞರು ಅಂಜಿಯೊಗ್ರಾಮ್ ಅಂಜಿಯೊಪ್ಲಾಸ್ಟಿ (ಸ್ಟಂಟ್) ಚಿಕಿತ್ಸೆಯನ್ನು ಮಾಡುತ್ತಾರೆ. ಅಂಜಿಯೊಪ್ಲಾಸ್ಟಿ ಚಿಕಿತ್ಸೆಯಲ್ಲಿ ಹೃದಯದ ಬ್ಲಾಕೇಜ್ನ್ನು ತೆಗೆದು ಸ್ಟಂಟ್ ಕೂಡಿಸುತ್ತಾರೆ. ಬ್ಲಾಕೇಜ್ಗಳು ಬಹಳ ಇದ್ದರೆ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ.