

Cloudburst: ಜಮ್ಮು ಮತ್ತು ಕಾಶ್ಮೀರದಲ್ಲಿ ಕಿಶ್ತ್ವಾರ್ ಬಳಿಕ ಕತುವಾ ಜಿಲ್ಲೆ ಜಾಂಗ್ಲೋಟ್ ಎಂಬ ಹಳ್ಳಿಯಲ್ಲಿ ಮೇಘಸ್ಪೋಟದಿಂದಾಗಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ಭಾನುವಾರ(ಆಗಸ್ಟ್ 17) ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ತಡರಾತ್ರಿ ಜಾಂಗ್ಲೋಟ್‌ನ ಹಳ್ಳಿಯ ಮೇಲೆ ಮೇಘಸ್ಫೋಟ ಅಪ್ಪಳಿಸಿದೆ. ಪ್ರವಾಹದಲ್ಲಿ ರೈಲ್ವೆ ಹಳಿ, ರಾಷ್ಟ್ರೀಯ ಹೆದ್ದಾರಿ-44 ಹಾಗೂ ಪೊಲೀಸ್ ಠಾಣೆ ಕೂಡ ಹಾನಿಗೊಳಗಾಗಿವೆ ಎಂದು ಉದಂಪುರ್ ಸಂಸದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ನಾಗರಿಕ ಆಡಳಿತ, ಮಿಲಿಟರಿ ಮತ್ತು ಅರೆಸೈನಿಕ ಪಡೆಗಳು ಸ್ಥಳದಲ್ಲಿ ಕಾರ್ಯಪ್ರವೃತ್ತವಾಗಿವೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕಥುವಾದ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ" ಎಂದು ಹೇಳಿದ್ದಾರೆ.
ಘಟನೆ ಕುರಿತು ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಮಾಹಿತಿ ಪಡೆದಿದ್ದು, ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಮೇಘಸ್ಪೋಟ, ಭೂಕುಸಿತ ಪೀಡಿತ ಕಥುವಾ ಜಿಲ್ಲೆಯಲ್ಲಿ ಜನರ ಸುರಕ್ಷತೆಯನ್ನು ಖಿಚಿತ ಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜೊತೆಗೆ ಪರಿಹಾರ, ರಕ್ಷಣಾ ಕಾರ್ಯ ಹಾಗ ಸ್ಥಳಾಂತರಿಸುವ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದರು" ಎಂದು ಸಿಎಂ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಕಿಶ್ತ್ವಾರ್‌ನಲ್ಲಿ ಸಂಭವಿಸಿದ್ದ ಮೇಘಸ್ಪೋಟ
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಗುರುವಾರ(ಆಗಸ್ಟ್ 14) ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಚೈಲ್ ಮಾತಾ ದೇವಸ್ಥಾನಕ್ಕೆ ವಾರ್ಷಿಕ ತೀರ್ಥಯಾತ್ರೆಗಾಗಿ ಚಿಸೋಟಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದಾಗ ಈ ದುರಂತ ಸಂಭವಿಸಿದೆ. ಇನ್ನೂ ಕನಿಷ್ಠ 82 ಜನರು ಕಾಣೆಯಾಗಿದ್ದಾರೆವ ಎನ್ನಲಾಗಿದೆ. (ಏಜೆನ್ಸೀಸ್)