ಕುತೂಹಲ ತಣಿಸಿಕೊಳ್ಳಲು ಸಿಎಂ ಬಳಿಗೆ ಆಪ್ತ ಸಚಿವರ ದೌಡು | One to One discussion

CM Siddaramaiah
Published on

ಬೆಂಗಳೂರು: ದೆಹಲಿಯಲ್ಲಿ ಹೈಕಮಾಂಡ್ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಏನೆಲ್ಲ ಚರ್ಚಿಸಿದರು ಎಂದು ಅರಿತುಕೊಳ್ಳಲು ಸಚಿವರು, ಪಕ್ಷದ ರಾಜ್ಯ ನಾಯಕರಲ್ಲಿ ಹಂಬಲ ಹೆಚ್ಚಿದ್ದು, ಪಕ್ಷದೊಳಗೆ ಕುತೂಹಲ ಹುಟ್ಟಿ ಹಾಕಿದೆ.

ಸಿಎಂ, ಡಿಸಿಎಂ ಮಾಧ್ಯಮಗಳ ಮುಂದೆ ತುಟಿ ಬಿಚ್ಚಿಲ್ಲ. ಉನ್ನತ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರಿಗೆ ನೇರ, ಡಿ.ಕೆ.ಶಿವಕುಮಾರ್‌ಗೆ ಪರೋಕ್ಷ ‘ಸಂದೇಶ’ವನ್ನು ಪಕ್ಷದ ರಾಷ್ಟ್ರೀಯ ನಾಯಕರು ನೀಡಿದ್ದಾರೆ ಎಂದು ತರ್ಕಿಸಲಾಗುತ್ತಿದೆ.

ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರಿಗೆ ಭಾನುವಾರ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಭೇಟಿ ನೆಪದಲ್ಲಿ ಹೈಕಮಾಂಡ್ ಯೋಚನಾ ಲಹರಿ ತಿಳಿಯಲು ಕಸರತ್ತು ನಡೆಸಿದರು.

ಚರ್ಚೆಯ ವೇಳೆ ರಾಜ್ಯ ರಾಜಕೀಯ ವಿದ್ಯಮಾನ, ಹನಿಟ್ರ್ಯಾಪ್ ಪ್ರಕರಣ ಪ್ರಧಾನ ಅಜೆಂಡಾ ಆಗಿತ್ತು ಎಂಬುದು ಕೆಲವು ಸಚಿವರು, ನಾಯಕರ ಕಿವಿಗೆ ಬಿದ್ದಿದೆ.

ಆದರೆ ಸರ್ಕಾರ ಮತ್ತು ಪಕ್ಷದ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಮುಂತಾದವುಗಳ ಬಗ್ಗೆ ಪರೋಕ್ಷ ಸುಳಿವು ಪಡೆಯಲು ಆಪ್ತರು ತೆರೆಮರೆಯಲ್ಲಿ ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂಗೆ ಸಚಿವರ ಭೇಟಿ ಸರಣಿ

ಸಿಎಂ ಸಿದ್ದರಾಮಯ್ಯ ಅವರನ್ನು ಆಪ್ತ ಸಚಿವರು ಒಬ್ಬೊಬ್ಬರಾಗಿಯೇ ಭೇಟಿ ನೀಡಿ ಕುತೂಹಲ ತಣಿಸಿಕೊಳ್ಳುತ್ತಿದ್ದರೆ, ದೆಹಲಿಯಲ್ಲಿ ಹೈಕಮಾಂಡ್ ಜತೆಗೆ ಒನ್ ಟು ಒನ್ ಮಾತುಕತೆಯ ರಹಸ್ಯ ಕೂಡ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ ಎಂದು ತಿಳಿದಿದೆ.

ರಾಹುಲ್ ಗಾಂಧಿ ಜತೆಗೆ ಸಿದ್ದರಾಮಯ್ಯ ‘ಕ್ಲೋಸ್ಡ್ ಡೋರ್’ ಸಭೆಯ ಮಾಹಿತಿ ಪಡೆಯಲು ಆಪ್ತ ಸಚಿವರು ಉತ್ಸುಕತೆ ತೋರಿದ್ದು, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರು ಎನ್ನಲಾಗಿದೆ.

ಸಿಎಂ ಅಧಿಕೃತ ನಿವಾಸ ‘ಕಾವೇರಿ’ಗೆ ಶನಿವಾರ ರಾತ್ರಿಯೇ ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಧಾವಿಸಿ, ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದು ಎಂದು ತಿಳಿದಿದೆ.

ಖರ್ಗೆಯವರಿಗೂ ಭೇಟಿ

ಬೆಂಗಳೂರಿಗೆ ಭಾನುವಾರ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೆಲವು ನಾಯಕರು ಸೌಜನ್ಯದ ನೆಪದಲ್ಲಿ ಭೇಟಿಯಾಗಿ ಔಪಚಾರಿಕ ಮಾತುಕತೆ ನಡೆಸಿದ್ದಾರೆ.

ಖಗೆರ್ಯವರನ್ನು ಭೇಟಿಯಾದ ನಂತರ ಸಚಿವ ಡಾ.ಜಿ.ಪರಮೇಶ್ವರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆಯವರು ನನಗೆ ಹಿರಿಯಣ್ಣ. ಕಾಫಿ ಕುಡಿದೆವು, ಕುಟುಂಬದ ಬಗ್ಗೆ ಮಾತುಕತೆ ನಡೆಯಿತೆ ಹೊರತು ರಾಜಕೀಯದ ಬಗ್ಗೆ ಚರ್ಚಿಸಿಲ್ಲ ಎಂದರು.

ಆರೋಗ್ಯ, ಕುಟುಂಬದ ಬಗ್ಗೆ ವಿಚಾರಿಸಿದ್ದೇನೆ. ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ಕೂಡ ಇದ್ದರು. ನಮ್ಮದು ಒಂದೇ ಕುಟುಂಬ, ಸೌಜನ್ಯದ ಭೇಟಿಯಷ್ಟೇ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷರಿಗೆ ಅವರದೇ ಆದ ಚಾನೆಲ್‌ಯಿದೆ. ಅವರು ಮಾಹಿತಿ ಪಡೆದುಕೊಂಡಿರುತ್ತಾರೆ. ಅವರೇನೂ ಕೇಳಿಲ್ಲ, ನಾನೇನೂ ಹೇಳಿಲ್ಲ ಎಂದೂ ಸಚಿವ ಪರಮೇಶ್ವರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net