

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಪುನಾರಚನೆ ಅಥವಾ ವಿಸ್ತರಣೆ ಸೇರಿ ಪ್ರಮುಖ ರಾಜಕೀಯ ಬದಲಾವಣೆ ಕುರಿತು ಏ. 17ರ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ. ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಬಿಜೆಪಿಯ ರಾಷ್ಟ್ರೀಯ ವರಿಷ್ಠರು ಹಾಗೂ ಮಾರ್ಗದರ್ಶಕರ ಮಟ್ಟದಲ್ಲಿ ಚರ್ಚೆ ನಡೆಯಬೇಕಾಗಿದೆ. ಏ.16 ಮತ್ತು 17ರಂದು ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಗೆ ಮುನ್ನ ಯಾವುದೇ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿಲ್ಲ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಬಸವರಾಜ ಬೊಮ್ಮಾಯಿ ಅವರ ದೆಹಲಿ ಭೇಟಿ ಬೆನ್ನಲ್ಲೇ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ಅವರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಸಿಎಂ ಗುರುವಾರ ರಾಜ್ಯಕ್ಕೆ ವಾಪಸಾಗಲಿದ್ದಾರೆ. ಆದರೆ ಯಾವುದೇ ನಿರ್ಧಾರಕ್ಕೆ ಹೈಕಮಾಂಡ್ ಸಮ್ಮತಿ ನೀಡಬೇಕಾದರೆ ಅದಕ್ಕೂ ಮೊದಲು ಪಕ್ಷದ ವರಿಷ್ಠರು ಹಾಗೂ ಸಂಘದ ಮುಖಂಡರ ನಡುವೆ ಚರ್ಚೆ ನಡೆಯುವುದು ಬಿಜೆಪಿಯಲ್ಲಿನ ವಾಡಿಕೆ.
ಚರ್ಚೆ ಬಳಿಕವೇ ನಿರ್ಧಾರ: ಚುನಾವಣೆ ಹತ್ತಿರದಲ್ಲಿರುವ ರಾಜ್ಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಅಧ್ಯಕ್ಷ ನಡ್ಡಾ ಅವರು ಸಂಘದ ಇಬ್ಬರು ಮುಖಂಡರ ಜತೆ ಒಂದು ಸುತ್ತಿನ ಚರ್ಚೆ ನಡೆಸುತ್ತಾರೆ. ಸಂಘದ ಈ ಇಬ್ಬರ ಪೈಕಿ ಒಬ್ಬರು ಪ್ರಮುಖ ಹುದ್ದೆಯಲ್ಲಿದ್ದಾರೆ. ಇನ್ನೊಬ್ಬರು ಸಂಘದಿಂದ ಪಕ್ಷದ ಕೆಲಸಕ್ಕಾಗಿ ಹೋಗಿದ್ದು ಚುನಾವಣೆ ನಡೆಯುವ ರಾಜ್ಯಗಳ ಬೆಳವಣಿಗೆಗಳನ್ನು ಗಮನಿಸುತ್ತಾರೆ. ಈ ನಾಲ್ವರ ಪ್ರಾಥಮಿಕ ಚರ್ಚೆಯ ನಂತರ ಆಯಾ ರಾಜ್ಯದ ಸಂಘದ ಪ್ರಮುಖರಿಂದ ಮಾಹಿತಿ ಕೇಳುತ್ತಾರೆ. ಆ ಮಾಹಿತಿ ಆಧಾರದಲ್ಲಿ ಮತ್ತೊಂದು ಸುತ್ತಿನ ಚರ್ಚೆ ವರಿಷ್ಠರ ಮಟ್ಟದಲ್ಲಿ ಆಗುತ್ತದೆ. ಆ ನಂತರವಷ್ಟೇ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂತಹ ಸಭೆ ಯಾವಾಗ ಎಲ್ಲಿ ನಡೆಯುತ್ತದೆ ಎಂಬ ಕುರಿತು ಯಾರಿಗೂ ಗುಟ್ಟು ಬಿಟ್ಟುಕೊಡುವುದಿಲ್ಲ. ಸಂಸತ್ತಿನ ಅಧಿವೇಶನ ಏ.8 ತನಕ ಇದೆ. ರಾಜ್ಯ ಕಾರ್ಯಕಾರಿಣಿ ಹತ್ತಿರದಲ್ಲಿದೆ. ಯಾವುದೇ ರಾಜ್ಯದಲ್ಲಿ ಕಾರ್ಯಕಾರಿಣಿ ಇರುವ ಸಂದರ್ಭದಲ್ಲಿ ರಾಜಕೀಯವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಉದಾಹರಣೆ ಪಕ್ಷದಲ್ಲಿ ಇಲ್ಲ. ಒಂದು ವೇಳೆ ಕಾರ್ಯಕಾರಿಣಿಗೂ ಮುನ್ನ ನಿರ್ಧಾರವಾದರೆ ಪಕ್ಷದ ಮಟ್ಟಿಗೆ ಅದು ಹೊಸ ಇತಿಹಾಸವಾಗುತ್ತದೆ ಎಂದು ಮೂಲಗಳು ಹೇಳುತ್ತವೆ.
ಹೈಕಮಾಂಡ್ ಸಮೀಕ್ಷೆ: ಹೈಕಮಾಂಡ್ ಕಡೆಯಿಂದಲೇ ದೆಹಲಿಯ ಎರಡು ಸಂಸ್ಥೆಗಳು ರಾಜ್ಯದಲ್ಲಿ ಬಿಜೆಪಿಯ ಸ್ಥಿತಿಗತಿ ಹಾಗೂ ರಾಜ್ಯ ಸರ್ಕಾರದ ಸಾಧನೆಯ ಬಗ್ಗೆ ಈಗಾಗಲೇ ಸಮೀಕ್ಷೆ ಆರಂಭಿಸಿವೆ. ಅಮಿತ್ ಷಾ ಇತ್ತೀಚೆಗೆ ಭಾಗವಹಿಸಿದ್ದ ಕೋರ್ ಕಮಿಟಿ ಸಭೆಯಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಪ್ರಮುಖ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರನ್ನು ಬಿಟ್ಟು ಹತ್ತು ಜನರೊಂದಿಗೆ ತಾವೇ ಮಾತನಾಡಿ ಮಾಹಿತಿ ಸಂಗ್ರಹಿಸುತ್ತಿರುವ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಷಾ ಹೇಳಿದ್ದಾರೆ. ಆದ್ದರಿಂದ ಇಲ್ಲಿನ ಪ್ರತಿಯೊಂದು ವಿಷಯವೂ ಅವರಿಗೆ ತಿಳಿದಿದೆ ಎಂಬುದು ರಾಜ್ಯ ಮುಖಂಡರಿಗೆ ಸ್ಪಷ್ಟವಾಗಿದೆ. ಷಾ ಅವರೇ ಕೆಲವೊಂದು ಸಂಗತಿಗಳನ್ನು ಹೇಳಿ ರಾಜ್ಯ ಮುಖಂಡರಿಗೆ ಅಚ್ಚರಿ ಮೂಡಿಸಿದ್ದಾರೆ. ಆದ್ದರಿಂದ ಅವರು ಸಂಘದೊಂದಿಗೆ ಚರ್ಚೆ ನಡೆಸಿದ ನಂತರವಷ್ಟೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕೋರ್ ಕಮಿಟಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಸಂಪುಟ ಪುನಾರಚನೆಯ ಪ್ರಸ್ತಾಪ ಮಾಡಿದಾಗ ಷಾ ಹೆಚ್ಚು ಚರ್ಚೆಗೆ ಅವಕಾಶ ನೀಡಲಿಲ್ಲವೆಂಬ ಮಾತು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.
ವೀಕ್ಷಕರ ಸಂದೇಶ: ರಾಜ್ಯ ಕಾರ್ಯಕಾರಿಣಿಯಲ್ಲಿ ಜೆ.ಪಿ. ನಡ್ಡಾ ಭಾಗವಹಿಸುತ್ತಾರೆ. ಅವರು ವಾಪಸ್ ಹೋದ ನಂತರ ವರಿಷ್ಠರು ವೀಕ್ಷಕರನ್ನು ಕಳುಹಿಸುತ್ತಾರೆ. ಅವರು ವರಿಷ್ಠರ ತೀರ್ಮಾನವನ್ನು ರಾಜ್ಯ ಮುಖಂಡರಿಗೆ ತಿಳಿಸಲಿದ್ದಾರೆ. ಅದರಂತೆ ಮುಂದಿನ ಬೆಳವಣಿಗೆಗಳು ನಡೆಯಲಿವೆ.
ಸಿದ್ಧವಾಗುತ್ತಿದೆ ಪ್ರೊಗ್ರೆಸ್ ಕಾರ್ಡ್: ಸರ್ವೆ ನಡೆಸುತ್ತಿರುವ ಒಂದು ಸಂಸ್ಥೆ ಸರ್ಕಾರದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಸರ್ಕಾರದ ಒಟ್ಟಾರೆ ಸಾಧನೆ, ಜನರನ್ನು ಸರ್ಕಾರ ಹೇಗೆ ತಲುಪಿದೆ? ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಲು ಏನೇನು ಮಾಡಲಾಗಿದೆ? ಪ್ರತಿಯೊಬ್ಬ ಮಂತ್ರಿ ಇಲಾಖೆಗೆ ಎಷ್ಟರ ಮಟ್ಟಿಗೆ ನ್ಯಾಯ ಒದಗಿಸಿದ್ದಾರೆ? ಇನ್ನಿತರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.
ಶಾಸಕರಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ? ಅಭಿವೃದ್ಧಿ ಏನಾಗಿದೆ? ಹಣ ಬಿಡುಗಡೆ ಹೇಗಿದೆ? ಎಂಬ ಮಾಹಿತಿಯನ್ನು ಸಂಗ್ರಹಿಸಿ ಪ್ರೊಗ್ರೆಸ್ ಕಾರ್ಡನ್ನು ರಾಜ್ಯ ಕಾರ್ಯಕಾರಿಣಿ ಮುಗಿ ಯುವ ಮುನ್ನ ಷಾ ಅವರಿಗೆ ಸಲ್ಲಿಸುವ ಸಾಧ್ಯತೆಗಳಿವೆ. ಆ ಸರ್ವೆ ವರದಿಯನ್ನು ಮುಂದಿನ ಬೆಳವಣಿಗೆಗಳಿಗೆ ಆಧಾರವಾಗಿಟ್ಟುಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.