ಪರಿಸರ ಮಾಲಿನ್ಯದಿಂದ ಹವಾಮಾನ ವೈಪರೀತ್ಯ

weather
ಶಿವಮೊಗ್ಗದಲ್ಲಿ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ ಕುರಿತು ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ಸುಜಾತಾ ಉದ್ಘಾಟಿಸಿದರು. ಹನುಮಾನಾಯ್ಕ, ರುಚಿತಾಶ್ರೀ, ಶಂಕರ್ ಇದ್ದರು.
Published on

ಶಿವಮೊಗ್ಗ: ಪರಿಸರದ ಮೇಲೆ ಹೆಚ್ಚಿನ ಒತ್ತಡ ಮತ್ತು ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವೈಜ್ಞಾನಿಕ ಕ್ರಿಯಾ ಯೋಜನೆಗಳು ಹಾಗೂ ಸರಳ ಜೀವನ ಅವಶ್ಯಕ ಎಂದು ಜಿಪಂ ಉಪಕಾರ್ಯದರ್ಶಿ ಸುಜಾತಾ ಹೇಳಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಸಹಯೋಗದಲ್ಲಿ ಬುಧವಾರ ಎಂಎಡಿಬಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪರಿಸರ ಮಾಲಿನ್ಯ ಹಾಗೂ ಹವಾಮಾನದ ಬದಲಾವಣೆಯಿಂದ ಮಾನವನ ಜೀವನದ ಮೇಲೆ ಅನೇಕ ದುಷ್ಟರಿಣಾಮಗಳು ಆಗುತ್ತಿವೆ. ಕೈಗಾರಿಕೆಗಳು ಸೇರಿ ಮನುಷ್ಯ ಕೈಗೊಳ್ಳುವ ಅನೇಕ ಪ್ರಕ್ರಿಯೆಗಳಿಂದ ಪರಿಸರ ಮಾಲಿನ್ಯ, ಅಸಮತೋಲನ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾವೆಲ್ಲರೂ ಸರಳ ಜೀವನ, ಅಹಿಂಸಾ ತತ್ವವನ್ನು ಅಳವಡಿಸಿಕೊಳ್ಳಬೇಕು. ಅತಿಯಾದ ಕೈಗಾರಿಕೋದ್ಯಮ, ರಾಸಾಯನಿಕಗಳ ಬಳಕೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ದೇಶಗಳ ನಡುವೆ ಸ್ಪರ್ಧೆ ಹೆಚ್ಚುತ್ತಿದೆ. ಇಡೀ ಭೂಮಿಯನ್ನು ಸುಡುವಷ್ಟು ಸ್ಫೋಟಕ ನಮ್ಮಲ್ಲಿದೆ. ಹಳ್ಳಿಗಳಲ್ಲೂ ಘನತ್ಯಾಜ್ಯ ಸಂಗ್ರಹವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ತರಬೇತುದಾರರಾದ ರುಚಿತಾಶ್ರೀ ಮಾತನಾಡಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯನ್ನು ಕರ್ನಾಟಕ ಸರ್ಕಾರವು ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಡಿಯಲ್ಲಿ 2002ರಲ್ಲಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆ. ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಾಮರ್ಥ್ಯ, ನಿರ್ಮಾಣ ತರಬೇತಿಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಶ್ರುತಿ ಮಾತನಾಡಿದರು. ಜಿಪಂ ಎನ್‌ಆರ್‌ಡಿಎಂಎಸ್ ಅಧಿಕಾರಿ ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net