ಸಾಗರ ರಸ್ತೆಯ ಅಕ್ರಮ ಕಟ್ಟಡ ತೆರವು

rpt building
ರಿಪ್ಪನ್‌ಪೇಟೆಯಲ್ಲಿ ಸಾಗರ ರಸ್ತೆಯಲ್ಲಿರುವ ಅಕ್ರಮ ಕಟ್ಟಡವನ್ನು ತೆರವು ಮಾಡುತ್ತಿರುವುದು.
Published on

ರಿಪ್ಪನ್‌ಪೇಟೆ: ಪಟ್ಟಣದ ಸಾಗರ ರಸ್ತೆ ಅಭಿವೃದ್ಧಿಗೆ ತೊಡಕಾಗಿದ್ದ ಅಕ್ರಮ ಕಟ್ಟಡವನ್ನು ಹೊಸನಗರ ತಹಸೀಲ್ದಾರ್ ರಶ್ಮಿ ಹಾಲೇಶ್ ನೇತೃತ್ವದಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಸೋಮವಾರ ತೆರವು ಮಾಡಲಾಯಿತು.

ಒಂದು ವರ್ಷದ ಹಿಂದೆ ವಿನಾಯಕ ವೃತ್ತದಿಂದ ಎಪಿಎಂಸಿ ಉಪ ಮಾರುಕಟ್ಟೆವರೆಗೆ 5 ಕೋಟಿ ರೂ. ಅನುದಾನದಲ್ಲಿ ದ್ವಿಪಥವನ್ನಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿತ್ತು. ಚರಂಡಿ ಹಾಗೂ ಭಾಗಶಃ ರಸ್ತೆ, ಡಿವೈಡರ್ ನಿರ್ಮಾಣದೊಂದಿಗೆ ವಿದ್ಯುತ್ ಕಂಬಗಳನ್ನು ರಸ್ತೆಯ ಹೊರಭಾಗಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿತ್ತು. ಆದರೆ ವಿನಾಯಕ ವೃತ್ತದ ಸಮೀಪದಲ್ಲಿದ್ದ ಪಾತ್ರೆ ಅಂಗಡಿ ಮಾಲೀಕ ತನ್ನ ಕಟ್ಟಡದ ಭಾಗಶಃ ಜಾಗವನ್ನು ತೆರವುಗೊಳಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡು ಗ್ರಾಮಾಡಳಿತವು ಮಾಲೀಕನ ಇ-ಸ್ವತ್ತು ರದ್ದುಪಡಿಸಿ ವರದಿ ನೀಡಿತ್ತು. ಲೋಕೋಪಯೋಗಿ ಇಲಾಖೆ ಮನವಿಯಂತೆ ಕ್ರಮ ಕೈಗೊಂಡು ರಸ್ತೆಯ ಖರಾಬು ಜಾಗದಲ್ಲಿದ್ದ ಕಟ್ಟಡವನ್ನು ತೆರವುಗೊಳಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕಂದಾಯ ನಿರೀಕ್ಷಕ ಅಫ್ರೋಜ್ ಅಹಮದ್, ಗ್ರಾಮಾಧಿಕಾರಿ ಮಂಜುನಾಥ, ಕಾರ್ಯದರ್ಶಿ ಮಧು, ಪಿಡಬ್ಲುೃಡಿ ಅಧಿಕಾರಿ ಸುನಿಲ್‌ಕುಮಾರ್, ಪಿಎಸ್‌ಐ ಪ್ರವೀಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net