

ಭದ್ರಾವತಿ: ನಗರಸಭಾ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಳ ಹಾಗೂ ದೈನಂದಿನ ಕಾರ್ಯಗಳಿಗೆ ನಗರಕ್ಕೆ ಜನರು ಬರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಸಮಸ್ಯೆಯಾಗುತ್ತಿದೆ. ಸಂಚಾರ ಸಿಕ್ಕು ನಿಯಂತ್ರಣ ಮಾಡುವಲ್ಲಿ ಪೊಲೀಸ್ ಅಧಿಕಾರಿಗಳು ಮುಂದಾಗಬೇಕು. ಇಲಾಖೆಗೆ ನಗರಸಭೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಹೇಳಿದರು.
ನಗರಸಭಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಜನರ ಸುಗಮ ಸಂಚಾರಕ್ಕೆಂದು ಕೋಟ್ಯಂತರ ರೂ. ಖರ್ಚು ಮಾಡಿ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ ಅಂಗಡಿ ಮಾಲೀಕರು, ಹಣ್ಣು, ತರಕಾರಿ ವ್ಯಾಪಾರಿಗಳು ಫುಟ್‌ಪಾತ್ ಮೇಲೆ ಅಂಗಡಿ ಇಟ್ಟುಕೊಂಡಿದ್ದಾರೆ. ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಜೂ.21ರಿಂದಲೇ ಅವುಗಳನ್ನು ತೆರವು ಕಾರ್ಯಾಚರಣೆ ಮಾಡಬೇಕು. ಒಂದು ವಾರಗಳ ಕಾಲ ನಿರಂತರ ಕಾರ್ಯಾಚರಣೆ ಹಮ್ಮಿಕೊಳ್ಳುವ ಮೂಲಕ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ನಗರಸಭೆ ಮುಂಭಾಗ ಸೇರಿ ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ಚನ್ನಗಿರಿ ರಸ್ತೆ, ತರೀಕೆರೆ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಕಾರು ಚಾಲಕರು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಸಂಚರಿಸುವುದು ಕಷ್ಟವಾಗುತ್ತಿದೆ. ಸಂಚಾರ ಠಾಣೆ ಪೊಲೀಸರು ಗಮನಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ತಿಳಿಸಿದರು.
ಈಗಾಗಲೇ ಪ್ರಮುಖ ವತ್ತಗಳಲ್ಲಿ ಸಿಸಿ ಕ್ಯಾಮರಾ ಹಾಗೂ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ತಾಂತ್ರಿಕ ಸಮಸ್ಯೆ ಇರುವುದರಿಂದ ಅದನ್ನು ನಗರಸಭೆಯಿಂದ ಶೀಘ್ರ ಸರಿಪಡಿಸಲಾಗುವುದು. ಪೊಲೀಸ್ ಇಲಾಖೆ ಬೇಡಿಕೆ ಇಟ್ಟಿದ್ದ 15 ವಿಷಯಗಳಿಗೂ ಸಮ್ಮತಿ ಇದೆ. ಇದಕ್ಕಾಗಿ 2 ಕೋಟಿ ರೂ. ಖರ್ಚು ಮಾಡಲು ನಗರಸಭೆ ಸಿದ್ಧವಿದೆ. ಯಾವ ಯಾವ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಏಕಮುಖ ಸಂಚಾರ ಎಲ್ಲಿ ಮಾಡಬೇಕು. ನಾಮಲಕಗಳನ್ನು ಎಲ್ಲಿ ಹಾಕಬೇಕು ಎಂಬುದನ್ನು ಇಲಾಖೆ ಅಧಿಕಾರಿಗಳು ಆದಷ್ಟು ಬೇಗನೆ ತಿಳಿಸಿ ಕಾರ್ಯೋನ್ಮುಖರಾಗಲು ತಿಳಿಸಿದರು.
ದೌರ್ಜನ್ಯ ಮಾಡಬೇಡಿ: ಫುಟ್‌ಪಾತ್ ತೆರವು, ಟ್ರಾಫಿಕ್ ಸಮಸ್ಯೆ ನಿವಾರಣೆಗಳನ್ನು ಹಂತ ಹಂತವಾಗಿ ಮಾಡಬೇಕು. ತೆರವು ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಎಸಗಬಾರದು. ಸಾರ್ವಜನಿಕ ಆಸ್ಪತ್ರೆ, ನಗರಸಭೆ ಮುಂಭಾಗ, ಬಿ.ಎಚ್.ರಸ್ತೆ ಹಾಗೂ ಜನ್ನಾಪುರ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ ಇದೆ. ನಾಗರಿಕರಿಂದ ಸಾಕಷ್ಟು ದೂರುಗಳಿವೆ. ನಿಮಗೆ ಎಲ್ಲ ರೀತಿಯ ಸಹಕಾರವನ್ನು ನಮ್ಮ ನಗರಸಭೆ ಹಾಗೂ ಶಾಸಕರು ನೀಡುತ್ತಾರೆ. ಜಿಲ್ಲೆಯಲ್ಲೇ ಭದ್ರಾವತಿ ನಗರಸಭೆ ಟ್ರಾಫಿಕ್ ಸಮಸ್ಯೆ ಇಲ್ಲದ ಕ್ಷೇತ್ರವಾಗಿ ಮೊದಲ ಸ್ಥಾನದಲ್ಲಿ ನಿಲ್ಲಬೇಕು ಎಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಸಲಹೆ ನೀಡಿದರು.
ಬಾರ್ ಮಾಲೀಕನಿಗೆ ನೋಟ್‌ಸ್ ಕೊಡಿ: ತಾಲೂಕು ಕಚೇರಿ ಎದುರು ಹಾಗೂ ಹೊಸಮನೆ ರಸ್ತೆಗಳು ಅಗಲೀಕರಣವಾದರೂ ಫುಟ್‌ಪಾತ್ ವ್ಯಾಪಾರಿಗಳಿಂದ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗಿದೆ. ಅದನ್ನು ನಿವಾರಣೆ ಮಾಡಿ, ಈಗಿನ ಟ್ರಾಫಿಕ್ ಪೊಲೀಸರು ಒಂದು ಸರ್ಕಲ್‌ನಲ್ಲಿ ನಿಂತು ಬರೀ ಕೇಸು ಹಾಕುವುದರಲ್ಲೇ ಮಗ್ನರಾಗಿದ್ದಾರೆಯೇ ಹೊರತು ಸುಗಮ ಸಂಚಾರ ವ್ಯವಸ್ಥೆೆ ಕಲ್ಪಿಸಲು ಮುಂದಾಗುತ್ತಿಲ್ಲ ಎಂದು ಸದಸ್ಯ ಬಿ.ಟಿ.ನಾಗರಾಜ್ ಹಾಗೂ ಕದಿರೇಶ್ ದೂರಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ಚನ್ನಪ್ಪ, ಜನ್ನಾಪುರ ಹಾಗೂ ತರೀಕೆರೆ ರಸ್ತೆಯಲ್ಲಿರುವ ಬಾರ್‌ಗಳ ಮುಂದೆ ವಾಹನಗಳನ್ನು ಅಡಾದಿಡ್ಡಿ ನಿಲ್ಲಿಸುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಂಬಂಧಿಸಿದ ಬಾರ್ ಮಾಲೀಕರಿಗೆ ನೋಟಿಸ್ ನೀಡಬೇಕು ಎಂದು ಒತ್ತಾಯಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್ ಮಾತನಾಡಿ, ಇತ್ತೀಚೆಗೆ ಶಾಲಾ ಕಾಲೇಜುಗಳ ಮುಂದೆ ಯುವತಿಯರು ಸಂಚರಿಸುವಾಗ ಯುವಕರ ಬೈಕ್ ಶೋ ಜಾಸ್ತಿಯಾಗಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.
ಸಭೆಯಲ್ಲಿ ನಗರಸಭಾ ಸದಸ್ಯರು, ವಿವಿಧ ಠಾಣೆಗಳ ಸಬ್‌ಇನ್ಸ್‌ಪೆಕ್ಟರ್, ಟ್ರಾಫಿಕ್ ಸಬ್‌ಇನ್ಸ್‌ಪೆಕ್ಟರ್ ಉಪಸ್ಥಿತರಿದ್ದರು.