ಗ್ರಾಮೀಣ ಜಲಮೂಲಗಳ ಅತಿಕ್ರಮಣ ತೆರವು; ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟ ಸೂಚನೆ

priyankh
Published on

ಬೆಂಗಳೂರು: ಆಸ್ತಿ, ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಬೆನ್ನಲ್ಲೇ ಸರ್ಕಾರ ಜಲಮೂಲಗಳ ಅತಿಕ್ರಮಣ ತೆರವಿಗೂ ಮುಂದಾಗಿದೆ.

ನಗರ ಪ್ರದೇಶಗಳ ಕೆರೆ ತೆರವಿನಂತೆಯೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜಲಮೂಲಗಳ ಅತಿಕ್ರಮಣ ತೆರವುಗೊಳಿಸಲು ಸರ್ಕಾರ ಸಜ್ಜಾಗಿದೆ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ತ್ವರಿತ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ನಮ್ಮ ಜಲಾಶಯಗಳ ಸಂರಕ್ಷಣೆಯಿಂದ ಪರಿಸರ ಸಮತೋಲನ ಕಾಪಾಡಬಹುದು. ಕೃಷಿ ಚಟುವಟಿಕೆ ಬೆಂಬಲಿಸುವುದು ಹಾಗೂ ನಮ್ಮ ಸಮುದಾಯಗಳಿಗೆ ಜಲ ಭದ್ರತೆ ಖಚಿತಪಡಿಸುವುದು ಆದ್ಯತೆಯ ಕ್ರಮವಾಗಬೇಕು ಎಂದು ತಿಳಿಸಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಜಲಾಶಯಗಳಲ್ಲಿ ಅತಿಕ್ರಮಣಗಳಾಗಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು ಈ ಗಂಭೀರ ವಿಷಯವನ್ನು ಗಮನದಲ್ಲಿಟ್ಟುಕೊಂಡು, ತಕ್ಷಣ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಪ್ರಮುಖ ನಿರ್ದೇಶನಗಳು

*ಜಲಮೂಲಗಳ ಸಮೀಕ್ಷೆ ನಡೆಸಿ ಅತಿಕ್ರಮಣ ಗುರುತಿಸಿ ವರದಿಯನ್ನು ಸಲ್ಲಿಸಬೇಕು. ಈ ವರದಿಯಲ್ಲಿ ಅತಿಕ್ರಮಣದ ವ್ಯಾಪ್ತಿ, ಭಾಗವಹಿಸಿದ ವ್ಯಕ್ತಿಗಳು ಮತ್ತು ಸ್ಥಳೀಯ ಪರಿಸರ ಮತ್ತು ಸಮುದಾಯದ ಮೇಲೆ ಪರಿಣಾಮದ ವಿವರ ದಾಖಲಿಸಬೇಕು.

*ಅತಿಕ್ರಮಣಗಳನ್ನು ಗುರುತಿಸಿದ ಕೂಡಲೇ ತೆರವೊಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ಕಾರ್ಯಚರಣೆಗಾಗಿ ಸಂಬಂಧಿಸಿದ ಎಲ್ಲ ಸ್ಥಳೀಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ತೆರವು ಕಾರ್ಯಾಚರಣೆಯನ್ನು ಸುಗಮ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು.

*ಗುರುತಿಸಿದ ಅತಿಕ್ರಮಣಗಳ ತೆರವು ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಅನುಪಾಲನಾ ವರದಿಯನ್ನು ಪಡೆದುಕೊಳ್ಳಬೇಕು.

*ಅತಿಕ್ರಮಣಗಳ ತೆರವು ಪ್ರಕ್ರಿಯೆಯ ಪ್ರಗತಿಯನ್ನು ತಿಂಗಳಿಗೊಮ್ಮೆ ಮೇಲ್ವಿಚಾರಣೆ ನಡೆಸಿ ತೆರವು ಕಾರ್ಯಚರಣೆ ಕೈಗೊಳ್ಳುವಲ್ಲಿ ಏನಾದರೂ ಸವಾಲುಗಳು ಇದ್ದಲ್ಲಿ, ಅವುಗಳನ್ನು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದು ಮುಂದಿನ ಕ್ರಮವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net