

ಶಿವಮೊಗ್ಗ: ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಳ್ಳಿ ಗ್ರಾಮದಲ್ಲಿ ಒತ್ತುವರಿ ಆಗಿರುವ ಗ್ರಾಮ ಠಾಣಾ ಜಾಗವನ್ನು ತೆರವುಗೊಳಿಸಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಆಟದ ಮೈದಾನಕ್ಕೆ ಮೀಸಲಿಡಬೇಕೆಂದು ಆಮ್ ಆದ್ಮಿ ಪಕ್ಷದ ಮುಖಂಡ ಜಗದೀಶ್ ಒತ್ತಾಯಿಸಿದರು.
ಬಿದರಳ್ಳಿ ಗ್ರಾಮದ ಸ.ನಂ.56 ಮತ್ತು 57ಕ್ಕೆ ಹೊಂದಿಕೊಂಡಿರುವ ಮಜಿರೆ (ಗ್ರಾಮ ಠಾಣಾ)ಜನವಸತಿ ಇಲ್ಲದ 6 ಎಕರೆ ಜಾಗವನ್ನು ಕೆಲವು ರಾಜಕೀಯ ವ್ಯಕ್ತಿಗಳು ಹಾಗೂ ಇತರರು ಒತ್ತುವರಿ ಮಾಡಿ ಅಲ್ಲಿದ್ದ ಗಿಮರಗಳನ್ನು ಕಡಿದು ಬೇಲಿ ಹಾಕಿದ್ದಾರೆ. ತಕ್ಷಣವೇ ಬೇಲಿ ತೆರವುಗೊಳಿಸಿ ಸರ್ಕಾರದ ಯೋಜನೆಗಳಿಗೆ ಜಾಗವನ್ನು ಬಳಸಿಕೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಒತ್ತುವರಿಯಾದ ಜಾಗವನ್ನು ತೆರವುಗೊಳಿಸಬೇಕೆಂದು ಜಿಪಂ ಸಿಇಒ, ಇಒ ಮತ್ತು ಪಿಡಿಒಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಹೋರಾಟ ಮಾಡುತ್ತಿರುವ ನನಗೆ ತೊಂದರೆಯಾದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಪಕ್ಷದ ಜಿಲ್ಲಾಧ್ಯಕ್ಷ ಕಿರಣ್‌ಕುಮಾರ್, ಮುಖಂಡರಾದ ಶಿವಕುಮಾರ್, ಹರೀಶ್, ಶಿವು ಇದ್ದರು.