

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶ ಉಲ್ಲಂಸಿದ ಎಸ್‌ಸಿ ಒಳಮೀಸಲಾತಿ ಅವೈಜ್ಞಾನಿಕವಾಗಿದೆ. ಪರಿಷ್ಕರಣೆಗೆ ವಿಧಿಸಿದ ಗಡುವು ಬುಧವಾರ ಸಂಜೆ ಅಂತ್ಯವಾಗಲಿದ್ದು, ನಿರ್ಲಕ್ಷಿಸಿದರೆ ಪರಿಣಾಮ ನೆಟ್ಟಗಿರದು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಎಚ್ಚರಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ, ಭೋವಿ, ಕೊರಮ, ಕೊರವ ಸಮುದಾಯಗಳು ಸೆ.10ರಂದು ಹೋರಾಟ ನಡೆಸಿದ ವೇಳೆ ಒಂದು ವಾರದ ಗಡುವು ನೀಡಲಾಗಿತ್ತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಸ್ವೀಕರಿಸಿದ್ದಾರೆ. ಆದರೆ ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆಯಿಲ್ಲ, ಹಿಂಬರಹವನ್ನೂ ನೀಡಿಲ್ಲ. ಆದರೆ ನನ್ನೊಂದಿಗೆ ಇತರ ಹೋರಾಟಗಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದೆ.
ಇದರಿಂದಾಗಿ ಶೋಷಿತರ ಪ್ರತಿಭಟನೆಯ ಆಕ್ರೋಶಕ್ಕೆ ಸರ್ಕಾರ ಬೆಚ್ಚಿ ಬಿದ್ದಿದೆ. ಹತಾಶವಾಗಿರುವುದು ಬಹಿರಂಗವಾಗಿದೆ. ಸರ್ಕಾರ ಏನೇ ಒತ್ತಡ ಹೇರಿದರೂ ಸಾಮಾಜಿಕ ನ್ಯಾಯಕ್ಕಾಗಿ ಕಾನೂನುಬದ್ಧ ಚಳವಳಿ ಮುಂದುವರಿಸುತ್ತೇವೆ ಎಂದು ಸೆಡ್ಡೆ ಹೊಡೆದರು.
ಶೋಷಿತ ಸಮುದಾಯಗಳು ಬೀದಿಗೆ ಇಳಿದು ನೀಡಿದ ಗಡುವು ಹಗುರವಾಗಿ ಪರಿಗಣಿಸಬಾರದು. ಸೆ.10ರ ಹೋರಾಟಕ್ಕಿಂತ ಮತ್ತಷ್ಟು ತೀವ್ರವಾಗಲಿದೆ. ಬುಧವಾರ ಸಂಜೆಯೊಳಗೆ ಸರ್ಕಾರದಿಂದ ಯಾವುದೇ ಉತ್ತರ ಬಾರದಿದ್ದರೆ ಚಳವಳಿ ವಿಧಾನ ನಿರ್ಧರಿಸುತ್ತೇವೆ ಎಂದರು.
ಸುಪ್ರೀಂ ಕೋರ್ಟ್ ಆದೇಶ ಪಾಲಿಸಲಿಲ್ಲ, ನ್ಯಾ.ನಾಗಮೋಹನ್‌ದಾಸ್ ವರದಿಯನ್ನು ಅಂಗೀಕರಿಸಲಿಲ್ಲ. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೊಟ್ಟಷ್ಟೂ ಮೀಸಲಾತಿಯನ್ನು ಕೊಡದೇ ವಂಚಿಸಲಾಗಿದೆ ಎಂದು ದೂರಿದರು.
ಕೊರವ, ಕೊರಮ, ಭೋವಿ ಮತ್ತು ಲಂಬಾಣಿ ಸಮುದಾಯಗಳನ್ನು ಒಳಗೊಂಡ ಗುಂಪಿಗೆ ಹಿಂದಿನ ಸರ್ಕಾರ ಶೇ.4.5ರಷ್ಟು ಮೀಸಲು ಹಂಚಿಕೆ ಮಾಡಿತ್ತು. ಕಾಂಗ್ರೆಸ್ ಸರ್ಕಾರ ನಾಲ್ಕು ಸಮುದಾಯಗಳ ಜತೆಗೆ ಅಲೆಮಾರಿ ಸಮುದಾಯದ 59 ಜಾತಿಗಳನ್ನು ಸೇರಿಸಿದೆ.
ಒಟ್ಟು 63 ಜಾತಿಗಳಿಗೆ ಶೇ.5ರಷ್ಟು ಮೀಸಲು ಹಂಚಿಕೆ ಮಾಡಿದೆ. ನಾಲ್ಕು ಸಮುದಾಯಗಳಿಗೆ ಶೇ.0.5ರಷ್ಟು ಕಡಿಮೆ ಮಾಡಿದರೆ, ಅಲೆಮಾರಿ 59 ಜಾತಿಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ನೀಡಿದ್ದ ಮೀಸಲಾತಿ ಕಸಿದುಕೊಂಡಿದೆ ಎಂದು ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.
ಇತರ ಮತಗಳಲ್ಲಿ ಸಮಾನತೆಯಿರುವ ಮತಾಂತರವಾದರೆ ತಪ್ಪೇನು ? ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಈಗ ಚರ್ಚೆಯ ವಿಷಯ ಅದಲ್ಲ, ಸಿದ್ದರಾಮಯ್ಯನವರು 75ನೇ ವಯಸ್ಸಿನವರೆಗೆ ಎಷ್ಟು ಪ್ರಯತ್ನ ಮಾಡಿದ್ದರೆ, 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸಮಾನತೆ ತರಲು ದುಡಿದಿದ್ದು, ಕನಕದಾಸರ ತತ್ವವನ್ನೇ ಸಿದ್ದರಾಮಯ್ಯ ಕೈ ಬಿಟ್ಟಿರುವುದು ಎದ್ದುಕಾಣುತ್ತದೆ ಎಂದು ಟೀಕಿಸಿದರು.
ಹಿಂದು ಸಂಸ್ಕೃತಿ, ಆಧ್ಯಾತ್ಮದಲ್ಲಿ ವಿಶ್ವಾವಿಟ್ಟಿದ್ದೇನೆ, ಗೌರವಿಸುತ್ತೇನೆ ಎಂದು ಸಾಹಿತಿ ಬಾನು ಮುಷ್ತಾಕ್ ಹೇಳಿಬಿಟ್ಟರೆ ಯಾವುದೇ ಭಿನ್ನಾಭಿಪ್ರಾಯ, ವ್ಯತ್ಯಾಸಗಳಿರುವುದಿಲ್ಲ ಎಂದು ಪಿ.ರಾಜೀವ್ ಪ್ರತಿಪಾದಿಸಿದರು.