

ಕೋಲಾರ: ನಗರದ ವಿವಿಧೆಡೆ ಗುರುವಾರ ಪ್ರದಣೆ ಮಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕಸದ ರಾಶಿ, ಗುಂಡಿಗಳನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಸ್ ನಿಲ್ದಾಣ, ಕ್ಲಾಕ್ ಟವರ್, ಎಂಜಿ ರಸ್ತೆ, ಟೇಕಲ್ ರಸ್ತೆ, ನಗರ ಸಮೀಪದ ಹೆದ್ದಾರಿ ರಸ್ತೆ, ಬೈರೇಗೌಡ ನಗರ, ಆರ್ಟಿಒ ಕಚೇರಿ, ಎಸ್ಎನ್ಆರ್ ವೃತ್ತಕ್ಕೆ ಭೇಟಿ ನೀಡಿ ಸ್ವಚ್ಛತೆ, ಫುಟ್ ಪಾಥ್ ತೆರವು ಮಾಡುವಂತೆ ಸೂಚಿಸಿದರು.
ಆಸ್ಪತ್ರೆಯ ಸಮೀಪ ಫುಟ್ ಪಾಥ್ ಮೇಲಿನ ಹೋಟಲ್ಗಳು ಸ್ವಚ್ಛತೆ ಕಾಪಾಡಬೇಕು, ಎಳನೀರು ಮಾರಾಟ ಮಾಡುವವರು ವ್ಯಾಪಾರ ಮುಗಿದ ನಂತರ ತ್ಯಾಜ್ಯವನ್ನು ತೆಗೆದುಕೊಂಡು ಹೋಗಬೇಕು. ಸ್ಥಳದಲ್ಲೇ ಬಿಟ್ಟರೆ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ಎಲ್ಲಂದರಲ್ಲಿ ಬಿಸಾಡಬಾರದು, ಆರೋಗ್ಯ ನಿರೀಕ್ಷರು ಈ ಬಗ್ಗೆ ನಿಗಾವಹಿಸಿ ನಿಯಮ ಪಾಲನೆ ಮಾಡದ ಅಂಗಡಿ ಮಾಲೀಕರಿಗೆ ನೋಟಿಸ್ ಕೊಟ್ಟು ಕ್ರಮವಹಿಸಬೇಕು. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು, ಅದು ಬಿಟ್ಟು ಸಾರ್ವಜನಿಕರ ಸ್ಥಳದಲ್ಲಿ ಕಸದ ರಾಶಿ ಹಾಕಿದರೆ ಅಂತಹವರ ಪರವಾನಗಿ ರದ್ದು ಮಾಡಬೇಕು ಎಂದು ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.
ವಾಣಿಜ್ಯ ಅಂಗಡಿಗಳವರು ಫುಟ್ ಪಾಥ್ ಮೇಲೆ ಅಂಗಡಿ ಸಾಮಾಗ್ರಿಗಳನ್ನು, ಜಾಹೀರಾತು ಲಕ ಇಟ್ಟುಕೊಳ್ಳುತ್ತಾರೆ. ಇದು ಸಾರ್ವಜನಿಕರ ಓಡಾಟಕ್ಕೆ, ವಾಹನ ನಿಲುಗಡೆಗೆ ಅಡಚಣೆಯಾಗುತ್ತದೆ. ಅವರು ಫುಟ್ ಪಾಥ್ ಮೇಲೆ ಏನೂ ಇಡದಂತೆ ಎಚ್ಚರಿಕೆ ನೀಡಬೇಕು ಎಂದು ಸಲಹೆ ನೀಡಿದರು.
ನಗರದಲ್ಲಿ ಅಳವಡಿಸಲಾಗಿರುವ ಫ್ಲೆಕ್ಸ್, ಬ್ಯಾನರ್ ತೆರವು ಮಾಡಬೇಕು, ಎಂಜಿ ರಸ್ತೆಯಲ್ಲಿ ಫುಟ್ ಪಾಥ್ ಒತ್ತುವರಿಯಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಗರಸಭೆ, ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಫುಟ್ ಪಾಥ್ ತೆರವು ಮಾಡಬೇಕು, ಅದೇ ರೀತಿ ಕಾಳಮ್ಮ ಗುಡಿ ರಸ್ತೆಯಲ್ಲೂ ಈ ಕೆಲಸ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಕಾಲಮಿತಿಯೊಳಗೆ ಕೆಲಸ
ನಗರ ಪ್ರದಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಕೆಲ ಸಲಹೆ ಸೂಚನೆಗಳನ್ನು ನೀಡಿದ್ದು, ಕಾಲಮಿತಿಯೊಳಗೆ ಕಾರ್ಯಗತಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಪ್ರಸಾದ್ ಹೇಳಿದರು. ಮಂಗಳವಾರ ಕಾಳಮ್ಮ ಗುಡಿ ರಸ್ತೆ ತೆರವು ಮಾಡಲು ಕ್ರಮವಹಿಸಲಾಗಿದ್ದು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನು ಮುಂದೆ ಪ್ರತಿ 15 ದಿನಕ್ಕೊಮ್ಮೆ ಪ್ರಮುಖ ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಒತ್ತುವರಿ ತೆರವು ಮಾಡಲಾಗುವುದು, ಆ ಮೂಲಕ ಸಾರ್ಜನಿಕರ ಸುಮಗ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಕೋಲಾರಮ್ಮ ರಸ್ತೆ, ಸೋಮೇಶ್ವರ ದೇವಾಲಯಗಳಿಗೆ ಭಕ್ತರು ಹೋಗಲು ಸಮರ್ಪಕ ರಸ್ತೆ ವ್ಯವಸ್ಥೆಯಿಲ್ಲ. ಆದ್ದರಿಂದ ಭಕ್ತಾಧಿಗಳು ಕುಳಿತುಕೊಳ್ಳಲು ವ್ಯವಸ್ಥೆ, ಕೋರ್ಟ್ ವೃತ್ತದಲ್ಲಿ ದ್ವಾರ ಬಾಗಿಲು ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.