

ಶಿವಮೊಗ್ಗ: ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಚ್.ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಲೋಕಾಯುಕ್ತ ಸಿಬ್ಬಂದಿ ಮಂಗಳವಾರ ನಗರದ ವಿವಿಧೆಡೆ ಸ್ವಚ್ಛತೆ ನಿರ್ವಹಣೆ ಕುರಿತು ಪರಿಶೀಲಿಸಿದರು. ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಅವರಿಗೆ ವಾಸ್ತವದ ಬಗ್ಗೆ ವಿವರಿಸಿದರು.
ಬುದ್ಧನಗರ, ಆರ್‌ಎಂಎಲ್ ನಗರ, ಕೆಎಸ್‌ಆರ್‌ಟಿಸಿ ಬಸ್ ಡಿಪೋ, ಹರಕೆರೆ, ನ್ಯೂ ಮಂಡ್ಲಿ, ಊರುಗಡೂರು. ಮದಾರಿಪಾಳ್ಯ ವಿದ್ಯಾನಗರ, ರಾಜೀವ್ ಗಾಂಧಿ ಬಡಾವಣೆ, ಟ್ಯಾಂಕ್ ಮೊಹಲ್ಲಾ, ಶಾಂತಿನಗರ, ರಾಗಿಗುಡ್ಡ, ನವುಲೆ ಮುಖ್ಯರಸ್ತೆ ಚಾನಲ್ ಬಳಿ, ಮ್ಯಾಕ್ಸ್ ಆಸ್ಪತ್ರೆ ಪಕ್ಕದ ಕನ್ಸರ‌್ವೆನ್ಸಿ ಮುಂತಾದ ಭಾಗಗಳಲ್ಲಿ ಲೋಕಾಯುಕ್ತ ಸಿಬ್ಬಂದಿ ಪರಿಶೀಲನೆ ನಡೆಸಿದರು. ಸಾಗರ ರಸ್ತೆ ಬಿಎಸ್‌ಎನ್‌ಎಲ್ ಕಚೇರಿ ಸಮೀಪದ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದರು.
ಲೋಕಾಯುಕ್ತ ಡಿಎಸ್‌ಪಿ ಉಮೇಶ್ ಈಶ್ವರ ನಾಯ್ಕ, ಇನ್ಸ್‌ಪೆಕ್ಟರ್‌ಗಳಾದ ಎಚ್.ಎಸ್.ಸುರೇಶ್, ಪ್ರಕಾಶ್, ವೀರಬಸಪ್ಪ ಎಲ್.ಕುಸಲಾಪುರ ಇತರರರು ಪರಿಶೀಲನಾ ತಂಡದಲ್ಲಿದ್ದರು. ನಗರಪಾಲಿಕೆಯ ಆಯುಕ್ತ ಕೆ.ಮಾಯಣ್ಣಗೌಡ ಹಾಗೂ ಇಂಜಿನಿಯರ್‌ಗಳು ಸ್ವಚ್ಛತೆ ಬಗ್ಗೆ ಲೋಕಾಯುಕ್ತ ಸಿಬ್ಬಂದಿಗೆ ಮಾಹಿತಿ ನೀಡಿದರು.
ಹಲವೆಡೆ ಚರಂಡಿ ನೀರು ಸರಾಗವಾಗಿ ಹರಿಯದೇ ಇರುವುದು, ರಸ್ತೆಯ ಅಕ್ಕಪಕ್ಕದಲ್ಲಿ ಕಸದ ರಾಶಿ ಬಿದ್ದಿರುವುದು, ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ಹಂದಿಗಳು ವಾಸವಾಗಿರುವುದು. ಕೆಲವೆಡೆ ಕಸ ವಿಲೇವಾರಿ ಮಾಡದೇ ಇರುವುದನ್ನು ಗಮನಿಸಿದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.