ಕೇಂದ್ರ ಸರ್ಕಾರದ ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಸೋಮವಾರ ಕದ್ರಿ ಪಾರ್ಕ್‌ನಲ್ಲಿ ಎಂ.ಆರ್.ಪಿ.ಎಲ್. ಮತ್ತು ರಾಮಕೃಷ್ಣ ಮಿಷನ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಸುರೇಶ್ ಗೋಪಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಪ್ರಮುಖರಾದ ರಂಜನ್ ಬೆಳ್ಳರ್ಪ್ಪಾಡಿ ಇದ್ದರು.
Published on:
Copied
Follow Us
ಮಂಗಳೂರು: ಸ್ವಚ್ಛ ಭಾರತ ನಮ್ಮೆಲ್ಲರ ಹೊಣೆ: ಕೇವಲ ಆಚರಣೆಯಲ್ಲ, ಅದುವೇ ಭಾರತದ ಜೀವನಶೈಲಿ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಹಾಗೂ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಹೇಳಿದರು.
ಕೇಂದ್ರ ಸರ್ಕಾರದ ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಸೋಮವಾರ ಕದ್ರಿ ಪಾರ್ಕ್‌ನಲ್ಲಿ ಎಂ.ಆರ್.ಪಿ.ಎಲ್. ಮತ್ತು ರಾಮಕೃಷ್ಣ ಮಿಷನ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಮಾರ್ಗದರ್ಶನ ಮತ್ತು ಸಂಘ-ಸಂಸ್ಥೆಗಳ ಸಕ್ರಿಯ ಬೆಂಬಲದೊಂದಿಗೆ ಕ್ಲೀನೆಸ್ಟ್ ಭಾರತನಿರ್ಮಾಣ ಮಾಡುವುದು ಸಚಿವಾಲಯದ ಮುಖ್ಯ ಗುರಿ. ಇದರ ಭಾಗವಾಗಿ ಹಮ್ಮಿಕೊಳ್ಳಲಾಗಿರುವ ಸ್ವಚ್ಛತಾ ಪಾಕ್ಷಿಕ ಅಭಿಯಾನದ 15 ದಿನಗಳ ಅವಧಿಯಲ್ಲಿ ಕನಿಷ್ಠ 10 ರಾಜ್ಯಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ. ಆದರೆ, ಸ್ವಚ್ಛತೆ ಎನ್ನುವುದು ಕೇವಲ ಸರ್ಕಾರ ಅಥವಾ ಕೆಲವು ಸಂಸ್ಥೆಗಳ ಪ್ರಯತ್ನದಿಂದ ಮಾತ್ರ ನನಸಾಗುವ ಕನಸಲ್ಲ. ಈ ಬೃಹತ್ ಆಂದೋಲನ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಬದ್ಧತೆ ಅತ್ಯಂತ ಅನಿವಾರ್ಯ ಎಂದರು.
ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ, ದೇಶದ ಟಾಪ್ ಟೆನ್ ಕ್ಲೀನ್ ಸಿಟಿಗಳ ಪೈಕಿ ಮಂಗಳೂರು 8 ನೇ ಸ್ಥಾನದಲ್ಲಿದೆ. ಮಂಗಳೂರಿನ ಈ ಸಾಧನೆ ಇತರ ನಗರಗಳಿಗೂ ಪ್ರೇರಣೆಯಾಗಬೇಕು. ಸ್ವಚ್ಛತೆ ಎನ್ನುವುದು ಕೇವಲ ಅರಮನೆಗಳಂತಹ ನಗರಗಳಿಗೆ ಮಾತ್ರ ಸೀಮಿತವಾಗದೆ, ದೇಶದ ಪ್ರತಿಯೊಂದು ಹಳ್ಳಿ ಮತ್ತು ಗಲ್ಲಿಗಳಿಗೂ ವಿಸ್ತರಿಸಬೇಕಾದ ಅಗತ್ಯವಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅಂದವಾಗಿಟ್ಟುಕೊಳ್ಳುವುದು ನಮ್ಮ ಪ್ರಾಥಮಿಕ ಕರ್ತವ್ಯವಾಗಿದೆ. ಸ್ವಚ್ಛತೆ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಲ್ಲ; ಅದು ನಮ್ಮ ಜೀವನದ ಭಾಗವಾಗಬೇಕು ಎಂದರು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಶಾಸಕ ವೇದವ್ಯಾಸ ಕಾಮತ್, ಎಂಆರ್ ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್, ನಿರ್ದೇಶಕ ನಂದಕಿಶೋರ್ ಪಿಳ್ಳೈ, ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಪ್ರತಿಜ್ಞೆ ಬೋಧಿಸಿದ ಅವರು ಅತಿಥಿಗಳ ಜತೆ ಗೂಡಿ ಪೊರಕೆಯನ್ನು ಹಿಡಿದು ಕಸ ಗುಡಿಸಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗೋಣಿ ಚೀಲಗಳನ್ನು ವಿತರಿಸಿದರು. ಬಳಿಕ ಹಸಿರು ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಸಸಿಗಳನ್ನು ವಿತರಿಸಿದರು ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದರು.
ಎಂಆರ್‌ಪಿಎಲ್ ಕಾರ್ಪೊರೇಟ್ ಕಮ್ಯೂನಿಕೇಶನ್ಸ್ ವಿಭಾಗದ ಸಿಜೆಎಂ ರುಡಾಲ್ಫ್ ವಿ.ಜೆ. ನರೋನ್ಹ ಕಾರ್ಯಕ್ರಮ ನಿರೂಪಿಸಿದರು.
----------------
ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನದ ಆಚರಣೆಗೆ ಅಥವಾ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಅದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು; ನಮ್ಮ ಸಂಸ್ಕೃತಿಯಾಗಬೇಕು. ಪ್ರತಿಯೊಬ್ಬ ನಾಗರಿಕನೂ ಸ್ವಚ್ಛತೆಯನ್ನು ತನ್ನ ವೈಯಕ್ತಿಕ ಜವಾಬ್ದಾರಿ ಎಂದು ಭಾವಿಸಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯವಂತ ಹಾಗೂ ಸುಂದರ ಭಾರತದ ನಿರ್ಮಾಣ ಸಾಧ್ಯ.
-ಸುರೇಶ್ ಗೋಪಿ, ಕೇಂದ್ರದ ರಾಜ್ಯ ಸಚಿವ
ಪ್ರವಾಸೋದ್ಯಮ ಖಾತೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ,