

ಹಾವೇರಿ: ಸ್ವ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿ, ಹಗಲು ಹೊತ್ತಿನಲ್ಲೇ ಕಚ್ಚುವ ಈಡಿಸ್ ಈಜಿಪ್ತ ಸೊಳ್ಳೆಗಳಿಂದ ಡೆಂಘಿ ರೋಗ ಹರಡುತ್ತದೆ. ಹೀಗಾಗಿ ಮಳೆಗಾಲದ ಈ ಹೊತ್ತಿನಲ್ಲಿ ನಮ್ಮ ಸುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ಮೂಲಕ ಡೆಂಘಿ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸರಿತಾ ತಿಳಿಸಿದರು.
ನಗರದ ಆರೋಗ್ಯ ಭವನದಲ್ಲಿ ಡೆಂಘಿ ವಿರೋಧಿ ಮಾಸಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದಾಗಿ ಮನೆ ಸುತ್ತಲಿನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಸ್ವಚ್ಚಗೊಳಿಸಬೇಕು. ಇನ್ನು ವಸತಿ ಶಾಲೆ ಹಾಗೂ ಹಾಸ್ಟೆಲ್ಗಳ ಸುತ್ತ ಮಳೆ ನೀರು ಗುಂಡಿಗಳಲ್ಲಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳಲ್ಲಿ ಅಥವಾ ಯಾವುದೇ ವ್ಯಕ್ತಿಯಲ್ಲಿ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೇನೋವು, ಕಣ್ಣಿನ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಲ್ಲಿ ಕೂಡಲೇ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿ. ಒಂದು ವೇಳೆ ನಿರ್ಲಕ್ಷ$್ಯ ವಹಿಸಿದಲ್ಲಿ ಅದು ಮತ್ತಷ್ಟು ತೀವ್ರಗೊಂಡು ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಕಂಡು ಬಂದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಚಂದ್ರಶೇಖರ, ಅಮೃತಗೌಡ ಪಾಟೀಲ ಮತ್ತಿತರರು ಇದ್ದರು.