ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಪಟ್ಟು

klr filter
ಕೋಲಾರ ತಾಲೂಕು ದೊಡ್ನಹಳ್ಳಿಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಟಕವನ್ನು ದುರಸ್ತಿಪಡಿಸಬೇಕು ಗ್ರಾಮಸ್ಥರು ಒತ್ತಾಯಿಸಿದರು.
Published on

ಕೋಲಾರ: ಕಳೆದ ಎರಡು ತಿಂಗಳಿಂದ ದುರಸ್ತಿಗೆ ಬಂದು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ತಾಲೂಕಿನ ದೊಡ್ನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೆನರಾ ಬ್ಯಾಂಕ್​ ವತಿಯಿಂದ ಕಳೆದ 6-7 ವರ್ಷಗಳ ಹಿಂದೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗಿದೆ. ಒಂದೆರೆಡು ವರ್ಷಗಳಿಂದೀಚೆಗೆ ಸಣ್ಣಪುಟ್ಟ ರಿಪೇರಿಯಾಗುತ್ತಿದ್ದ ಸಂದರ್ಭದಲ್ಲಿ ತ್ವರಿತವಾಗಿ ದುರಸ್ಥಿಪಡಿಸುತ್ತಿದ್ದರು. ಆದರೆ ಇದೀಗ ಕೆಟ್ಟು ಹೋಗಿ 2 ತಿಂಗಳೇ ಕಳೆದಿದ್ದರೂ ಯಾರೂ ಸಹ ಗಮನ ಹರಿಸದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಘಟಕವನ್ನು ಸ್ಥಾಪನೆ ಮಾಡಿದಾಗಿನಿಂದ ಸಮರ್ಪಕ ನಿರ್ವಹಣೆ ಮಾಡಿದ್ದರೆ ಕೆಟ್ಟು ಹೋಗುತ್ತಿರಲಿಲ್ಲ. ಬ್ಯಾಂಕ್​ ವತಿಯಿಂದ ನಿರ್ಮಾಣ ಮಾಡಿದ್ದು, ನಿರ್ವಹಣೆಗೆ ಗ್ರಾಮ ಪಂಚಾಯಿತಿಗೆ ಒಪ್ಪಿಸಿದ್ದಾರೆ. ಯಂತ್ರಗಳು ಸಾಕಷ್ಟು ಹಾಳಾಗಿ ಶಿಥಿಲಾವಸ್ಥೆಗೆ ತಲುಪಿವೆ, ಒಳಗೆ ಹೋದರೆ ವಿದ್ಯುತ್​ ಶಾಕ್​ ಹೊಡೆಯುತ್ತದೆ ಎನ್ನುವ ಫಲಕವನ್ನೂ ಘಟಕದ ಹೊರಗೆ ಹಾಕಿರುವುದರಿಂದ ಮಕ್ಕಳು ಯಾರಾದರೂ ಘಟಕದ ಒಳಗೆ ತೆರಳಿದರೆ ಅಪಾಯ ಇದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ದೊಡ್ನಹಳ್ಳಿ ಗ್ರಾಮದಲ್ಲಿ 150ಕ್ಕೂ ಅಧಿಕ ಕುಟುಂಬಗಳಿರುವ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವು ಕೆಟ್ಟು ಹೋಗಿರುವುದರಿಂದಾಗಿ ಪಕ್ಕದ ಚನ್ನರಾಯಪುರ ಅಥವಾ ಗಿರ್ನಹಳ್ಳಿಗೆ ಸುಮಾರು 2 ಕಿಲೋ ಮೀಟರ್​ ಹೋಗಿ ನೀರನ್ನು ತರಬೇಕಾದ ಪರಿಸ್ಥಿತಿಗೆ ಜನರು ಸಿಲುಕಿದ್ದಾರೆ.
ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಪಕ್ಕದ ಗ್ರಾಮಗಳಿಗೆ ತೆರಳಿ ನೀರು ತರಬೇಕಾಗಿದೆ. ಅಲ್ಲದೆ ಆ ಗ್ರಾಮಗಳಲ್ಲಿನ ಘಟಕಗಳ ಬಳಿ ಹೆಚ್ಚಿನ ಜನರಿದ್ದರೆ ಹೆಚ್ಚುಕಾಲ ಕಾಯಬೇಕಾಗಿದೆ. ಇನ್ನು ಕುಡಿಯುವ ನೀರಿನ ವಿಚಾರವಾಗಿ ಹಿರಿಯರು, ಮಹಿಳೆಯರಿಗಂತೂ ತಲೆನೋವಾಗಿ ಪರಿಣಮಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ದೊಡ್ನಹಳ್ಳಿ ಘಟಕದಲ್ಲಿ ಈ ಮೊದಲು 5 ರೂಪಾಯಿ ಕಾಯಿನ್​ ಹಾಕಿ ನೀರು ಹಿಡಿದುಕೊಳ್ಳಲಾಗುತ್ತಿತ್ತು, ಆದರೆ ಕೊನೆಯ ಗಳಿಗೆಯಲ್ಲಿ 5 ರೂ. ಕಾಯಿನ್​ ಬದಲಿಗೆ ಕಾರ್ಡ್​ ವ್ಯವಸ್ಥೆ ಮಾಡಲಾಗಿದೆ. ಕಾರ್ಡ್​, ರೀಚಾರ್ಜ್​ ಸೇರಿ ನೂರಾರು ರೂಪಾಯಿ ಖರ್ಚು ಮಾಡಿದ್ದವರಿಗೆ ಇದೀಗ ಕುಡಿಯುವ ನೀರೂ ಸಿಗದಂತಾಗಿದ್ದು, ಕಾರ್ಡ್​ಗೆ ಮಾಡಿದ್ದ ಹಣವೂ ವ್ಯರ್ಥವಾಗಿದೆ.
ಕಳೆದ 2 ತಿಂಗಳಿಂದಲೂ ಶುದ್ಧ ನೀರಿನ ಘಟಕ ರಿಪೇರಿಯಿಂದಾಗಿ ದೊಡ್ನಹಳ್ಳಿ ಗ್ರಾಮಸ್ಥರು ಅವಸ್ಥೆ ಪಡುವಂತಾಗಿದ್ದು, ಕೂಡಲೇ ದುರಸ್ಥಿಪಡಿಸಿ ನೀರಿನ ಸೌಲಭ್ಯ ಒದಗಿಸುವಂತೆ ಗ್ರಾಮದ ಸುರೇಶ್​ಗೌಡ, ಜಿ.ಮಂಜುನಾಥ್​, ಸಿ.ರಾಮಕೃಷ್ಣ, ಡಿ.ಎಸ್​.ವೆಂಕಟರವಣಪ್ಪ, ಆಂಜಿನಮ್ಮ, ಡಿ.ಎನ್​.ರಮೇಶ್​ಗೌಡ, ಆಂಜಪ್ಪ, ನಾರಾಯಣಪ್ಪ, ವೆಂಕಟೇಶಪ್ಪ, ಪ್ರದಿಪ್​, ತಾಳಗಳ ವೆಂಕಟೇಶಪ್ಪ. ತೋಟಿ ನಾರಾಯಣಪ್ಪ, ಡಿ.ಎನ್​.ವೇದಮೂರ್ತಿ, ಸಿ.ಮಂಜುನಾಥ್​ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net