ಶಿಕ್ಷಕ ಸೇವೆ ಸಾರ್ಥಕ| ಮರದಡಿಯಲ್ಲೇ ತರಗತಿ

T 10
Published on

ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.

‘ಮಕ್ಕಳೇ ನಿಮಗೆ ಮೊಬೈಲ್ ಬೇಡ’ ಎಂದು ಹೇಳುತ್ತಿದ್ದೆ. ಅದೇ ಮಕ್ಕಳಿಗೆ, ‘ಹುಷಾರಾಗಿ ಮೊಬೈಲ್​ನಲ್ಲೇ ಪಾಠ ಕೇಳಿ’ ಎಂದು ನನ್ನ ಬಾಯಿಂದಲೇ ಹೇಳಿಸಿತು ಕರೊನಾ. ಹೆಚ್ಚು ಮಕ್ಕಳು ಶಾಲೆಗೆ ಬರಬೇಕು ಎಂದು ಕೈಲಾದ ಪ್ರಯತ್ನ ಮಾಡಿರುವ ಶಿಕ್ಷಕರಲ್ಲಿ ನಾನೂ ಒಬ್ಬ. ವಿದ್ಯಾಗಮ ಕಾರ್ಯಕ್ರಮ ಮಾಡಿ ಎಂದು ಸರ್ಕಾರ ಆದೇಶಿಸಿದಾಗ ನಮ್ಮ ಸುರಕ್ಷತೆ, ಮಕ್ಕಳ ಸುರಕ್ಷತೆ ಎರಡನ್ನೂ ನೋಡಿಕೊಂಡರೂ ನಮ್ಮ ಮನೆಯವರೂ, ಮಕ್ಕಳ ಪಾಲಕರೂ ಆತಂಕದಲ್ಲಿರುತ್ತಾರೆ. ಹೀಗಾಗಿ ವಿದ್ಯಾಗಮ ಕಾರ್ಯಕ್ರಮ ಶಾಲೆ ಪಕ್ಕದ ಬನ್ನಿ ಮರದ ಕಟ್ಟೆಯಲ್ಲೇ ನೆರವೇರಿಸಲು ನಿರ್ಧರಿಸಿದೆ. ಮಳೆ ಇಲ್ಲದಿದ್ದ ಸಮಯ ನೋಡಿ, ಶಾಲೆಗೆ ಹತ್ತಿರದ ಮಕ್ಕಳನ್ನು ಕರೆಸಿಕೊಂಡೆ. ಮರದ ಕೆಳಗೆ ಕುಳಿತು, ಮಕ್ಕಳಿಗೂ ಹಾಗೇ ದೂರ-ದೂರ ಕೂರಿಸಿ ಪಾಠ ಮಾಡಿದೆ. ಮಧ್ಯೆ ಮಳೆ ಬಂದರೆ ಶಾಲೆಯ ಮೊಗಸಾಲೆಯಲ್ಲಿ ರಕ್ಷಣೆ ಪಡೆಯುತ್ತಿದ್ದೆವು. ಇದರಿಂದ ತರಗತಿ ಇಲ್ಲದೆ ಬೇಸರವಾಗಿದ್ದ ಮಕ್ಕಳಿಗೂ, ಕಲಿಸುವಿಕೆ ಇಲ್ಲದೆ ದಿನ ಕಳೆದಿದ್ದ ನನಗೂ ಏನೋ ಖುಷಿ. ಜತೆಗೆ, ಸರ್ಕಾರದ ಆದೇಶ ಪಾಲಿಸಿದ ಧನ್ಯತೆ.

| ಅಶೋಕ ಸಜ್ಜನ ಶಿಕ್ಷಕ, ಹೆಬಸೂರ ತಾ. ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net