

ಉತ್ತರಪ್ರದೇಶ: ಪರೀಕ್ಷೆಯ ಶುಲ್ಕ ಕಟ್ಟದ ಕಾರಣಕ್ಕೆ ಖಾಸಗಿ ಶಾಲೆಯೊಂದು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಈ ವಿಚಾರವಾಗಿ ಮನನೊಂದ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶುಲ್ಕ ಕಟ್ಟದ ಕಾರಣಕ್ಕೆ ಇಲ್ಲಿನ ಖಾಸಗಿ ಶಾಲೆಯೊಂದು ಪರೀಕ್ಷೆ ಬರೆಯಲು ಬಿಡಲಿಲ್ಲ ಎಂದು 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ತಿಳಿಸಿದ್ದಾರೆ.
"ನನ್ನ ಮಗಳು ಸ್ಥಳೀಯ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಳು. ಕೆಲವು ಹಣಕಾಸಿನ ಅಡಚಣೆಗಳಿಂದ ನಾನು ಅವಳ ಶಾಲಾ ಶುಲ್ಕವನ್ನು ಜಮಾ ಮಾಡಲು ಸಾಧ್ಯವಾಗಲಿಲ್ಲ" ಎಂದು ಬಾಲಕಿಯ ತಂದೆ ಬಾರಾದರಿ ನಿವಾಸಿ ಅಶೋಕ್ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಶುಲ್ಕವನ್ನು ಸಲ್ಲಿಸಲು ಸ್ವಲ್ಪ ಸಮಯ ಕೇಳಿದ್ದೆ. ಆದರೆ ಶಾಲೆಯ ಆಡಳಿತ ಮಂಡಳಿಯು ತನ್ನ ಮಗಳಿಗೆ ಶುಕ್ರವಾರ ಪರೀಕ್ಷೆಗೆ ಹಾಜರಾಗಲು ಬಿಡಲಿಲ್ಲ . ಮಗಳು ಶಾಲೆಯಿಂದ ಮನೆಗೆ ಹಿಂದಿರುಗಿದ ನಂತರ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆಂದು ಹೇಳಿದ್ದಾರೆ.