

ನವದೆಹಲಿ: ಧಾರ್ವಿುಕ ಮತ್ತು ದತ್ತಿ ಸಂಸ್ಥೆಗಳು ನಿರ್ವಹಿಸುವ ಪ್ರವಾಸಿಗೃಹಗಳು, ಸಿಖ್ಖರ ‘ಸಾರೈಸ್’ (ಇನ್ಸ್) ಬಾಡಿಗೆ ಹಾಗೂ ಆಸ್ತಿಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನ್ವಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರುವಾರ ಭೇಟಿ ಮಾಡಿದ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅಮೃತಸರದ ಸ್ವರ್ಣಮಂದಿರದ ಬಳಿ ಇರುವ ‘ಸಾರೈಸ್’ (ಇನ್ಸ್) ಮೇಲೆ ಶೇ.12 ಜಿಎಸ್ಟಿ ವಿಧಿಸುವ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಕೋರಿ ಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್್ಸ (ಸಿಬಿಐಸಿ) ಮಂಡಳಿ ಈ ಸ್ಪಷ್ಟನೆ ನೀಡಿದೆ. ದಿನಕ್ಕೆ 1 ಸಾವಿರ ರೂ.ಗಿಂತ ಕಡಿಮೆ ಬಾಡಿಗೆಯ ಕೋಣೆಗಳ ಮೇಲೂ ಜಿಎಸ್ಟಿ ವಿಧಿಸುವ ಪ್ರಸ್ತಾವನೆ ಕಳೆದ ಜು.18ರಂದು ಜಾರಿಗೆ ಬಂದ ನಂತರ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು (ಎಸ್ಜಿಪಿಸಿ )ತಾನು ನಿರ್ವಹಿಸುವ ಕೆಲವು ವಸತಿಗೃಹಗಳ ಬಾಡಿಗೆಗೆ ಜಿಎಸ್ಟಿ ಸಂಗ್ರಹಿಸಲು ಪ್ರಾರಂಭಿಸಿತ್ತು.
ರದ್ದತಿ ಶುಲ್ಕಕ್ಕೂ ತೆರಿಗೆ: ಹೋಟೆಲ್ಗಳು, ಟೂರ್ ಮತ್ತು ಟ್ರಾವೆಲ್ ಆಪರೇಟರ್ಗಳು ವಸೂಲಿ ಮಾಡುವ ರದ್ದತಿ ಶುಲ್ಕಕ್ಕೂ ಪ್ರಧಾನ ಸೇವೆಗೆ ಅನ್ವಯಿಸುವ ಜಿಎಸ್ಟಿ ದರದಲ್ಲೇ ತೆರಿಗೆ ವಿಧಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಟ್ಯಾಕ್ಸ್ ರೀಸರ್ಚ್ ಯೂನಿಟ್ (ಟಿಆರ್ಯುು) ತಿಳಿಸಿದೆ. ಪಾವತಿಯು ಸರಬರಾಜಿಗಾಗಿ ಪರಿಗಣನೆಯನ್ನು ಹೊಂದಿದ್ದರೆ ಅದನ್ನು ಯಾವುದೇ ಹೆಸರಿನಿಂದ ಕರೆಯಲಾಗಿದ್ದರೂ ಅದು ತೆರಿಗೆಗೆ ಒಳಪಡುತ್ತದೆ. ಹಾನಿಗಳು, ಪರಿಹಾರ ಮತ್ತು ಒಪ್ಪಂದದ ಉಲ್ಲಂಘನೆಗೆ ವಿಧಿಸಲಾಗುವ ದಂಡವೂ ಜಿಎಸ್ಟಿ ವ್ಯಾಪ್ತಿಗೆ ಒಳಪಡುತ್ತವೆ ಎಂದು ಟಿಆರ್ಯುು ತಿಳಿಸಿದೆ.
ಸೇವಾ ಪೂರೈಕೆದಾರರು (ವಾರ್ಷಿಕ 20 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದೊಂದಿಗೆ) ಅಥವಾ ವ್ಯಾಪಾರ (ವಾರ್ಷಿಕ 40 ಲಕ್ಷ ರೂ.ಗಿಂತ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಒಟ್ಟು ಆದಾಯದೊಂದಿಗೆ) ಮಾಡುವಂಥವರು ಅವರ ಮನೆಗಳನ್ನು ಬಾಡಿಗೆಗೆ ನೀಡಿದರೆ, ಅವರು ಪ್ರತಿ ಮನೆಯ ಬಾಡಿಗೆಗೆ ಶೇ.18 ಜಿಎಸ್ಟಿ ಪಾವತಿಸಬೇಕಾಗುತ್ತದೆ. ಆದರೆ, ಇದಕ್ಕಾಗಿ ಅವರು ಜಿಎಸ್ಟಿ ಅನ್ವಯ ನೋಂದಾಯಿಸಿಕೊಂಡಿರಬೇಕು. ವಾರ್ಷಿಕ 40 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ನಡೆಸುವ ಉದ್ಯಮಗಳು ಮತ್ತು ಸಂಬಳ ಪಡೆಯುವವರು ತೆರಿಗೆ ಪಾವತಿಸುವ ಅಗತ್ಯವಿಲ್ಲ.
ಅಲ್ಲದೆ, ಕಂಪನಿಯು ತನ್ನ ಉದ್ಯೋಗಿಗೆ ಮನೆಯನ್ನು ಬಾಡಿಗೆಗೆ ನೀಡಿದರೆ ಯಾವುದೇ ಜಿಎಸ್ಟಿ ಪಾವತಿಸುವ ಅಗತ್ಯವಿಲ್ಲ. ಇದಲ್ಲದೆ ಬಾಡಿಗೆದಾರ ಮತ್ತು ಮಾಲೀಕರು ಇಬ್ಬರೂ ನೋಂದಾಯಿಸದಿದ್ದರೆ ಬಾಡಿಗೆಗೆ ಯಾವುದೇ ಜಿಎಸ್ಟಿ ಪಾವತಿಸುವ ಕಾನೂನು ಬಾಧ್ಯತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಇವುಗಳಿಗೆ ತೆರಿಗೆ ಇದೆ: ಎಲೆಕ್ಟ್ರಿಕ್ ವಾಹನಗಳ ಮೇಲೆ (ಬ್ಯಾಟರಿ ಪ್ಯಾಕ್ ಇರಲಿ ಅಥವಾ ಇಲ್ಲದಿರಲಿ) 5%, ಮಾವಿನ ಹಣ್ಣಿನ ತಿರುಳಿನ ಮೇಲೆ ಶೇ.12, ನಿಕೋಟಿನ್ ಗಮ್ ಮೇಲೆ ಶೇ.18 ಜಿಎಸ್ಟಿ ವಿಧಿಸಲಾಗಿದೆ.