

ರಾಣೆಬೆನ್ನೂರ: ಇಲ್ಲಿನ ಮಾರುತಿ ನಗರದ ಸರ್ಕಾರಿ ಜಾಗೆಯಲ್ಲಿ ಸುಮಾರು ವರ್ಷಗಳಿಂದ ವಾಸವಿರುವ ಜನತೆಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಮಾರುತಿ ನಗರದ ರಿ.ಸ.ನಂ.312 ಸರ್ವೆ ನಂಬರಿನ ಜಾಗೆಯಲ್ಲಿ ಸುಮಾರು ವರ್ಷಗಳಿಂದ ಹೆಚ್ಚಾಗಿ ದಿನಗೂಲಿ ಕಾಮಿರ್ಕರೇ ವಾಸವಾಗಿದ್ದಾರೆ. ಅಲ್ಲಿರುವ ಜಾಗೆಯಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಹಾಗೂ ಮನೆತನದ ಅಡಚಣೆಗಾಗಿ ಬ್ಯಾಂಕ್ಗಳಲ್ಲಿ ಸಾಲ ತೆಗೆದುಕೊಳ್ಳಲು ಇ-ಸ್ವತ್ತು ಅತಿ ಅವಶ್ಯಕವಾಗಿರುತ್ತದೆ.
ಇ-ಸ್ವತ್ತು ಬಂದಾಗಿನಿಂದ 312 ಸರ್ವೆ ನಂಬರಿನ ಜನರು ಇ-ಸ್ವತ್ತಿಗಾಗಿ ಅಜಿರ್ಗಳನ್ನು ಸಲ್ಲಿಸಿದ್ದರೂ ಅದನ್ನು ಪೂರೈಸಿರುವುದಿಲ್ಲ. ಇ-ಸ್ವತ್ತಿಗಾಗಿ ಬಂದಂತಹ ಜನತೆಗೆ ಈ ಹಿಂದೆ ಇದ್ದಂತಹ ಅಧಿಕಾರಿಗಳು ಇಲ್ಲಸಲ್ಲದ ಉತ್ತರ ನೀಡುತ್ತಾ ಬಂದಿರುತ್ತಾರೆ. ಆದ್ದರಿಂದ ಇ-ಸ್ವತ್ತಿಗಾಗಿ ಅಲೆದಾಡಿ, ರೋಸಿ ಹೋಗಿರುವ ಜನತೆಗೆ ಇ-ಸ್ವತ್ತು ಹಾಗೂ ಸುಮಾರು 25-30 ವರ್ಷಗಳಿಂದ ಸರ್ಕಾರಿ ಜಾಗೆಯಲ್ಲಿ ವಾಸವಿರುವ ಬಡಜನತೆಗೆ ಹಕ್ಕು ಪತ್ರ (ಆ ಜಾಗೆಯನ್ನು ಅವರ ಹೆಸರಿನಲ್ಲಿ ಮಾಡಿಕೊಡಬೇಕು) ನೀಡಬೇಕು.
ಕಾರಣ ತಾವುಗಳು 15 ದಿನದೊಳಗಾಗಿ ಇ-ಸ್ವತ್ತು ಒದಗಿಸಬೇಕು ಮತ್ತು ಈಗಾಗಲೇ ಸರ್ಕಾರದ ಆದೇಶದ ಪ್ರಕಾರ ಬಿ ಖಾತೆ ಕೊಡುತ್ತಿದ್ದು, ಇದರಿಂದ ಯಾವುದೇ ರೀತಿಯ ಸಾಲ ಸೌಲಭ್ಯಗಳು ಇಲ್ಲದೆ ವಂಚಿತರಾಗಿದ್ದಾರೆ. ಕೂಡಲೇ ಬಿ ಖಾತೆಗೆ ಸಂಬಂಧಪಟ್ಟ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಕಚೇರಿಯ ಮುಂಭಾಗದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ರಾಜು ಅಂಗಡಿ, ಮಂಜುನಾಥ ಗುಡ್ಡಣ್ಣನವರ, ಮಂಜುನಾಥ ಸಂಬೋಜಿ, ಶೋಭಾ ಇಚ್ಚಂಗಿ, ಬಿ.ಬಿ. ಆಸ್ಮಾ, ಕುಮಾರ ಜಂಬಗಿ, ಬಷಿರ್ ಸೈಯ್ಯದ, ಕರಬಸಪ್ಪ ಎನ್.ಕೆ., ಯಲ್ಲಪ್ಪ ಚಿಕ್ಕಣ್ಣನವರ, ದ್ಯಾಮವ್ವ ನೇಕಾರ, ಮಾಲತೇಶ ಮಡಿವಾಳರ, ಶಾಂತಾ ಬಸಪ್ಪನವರ, ಮಂಜುನಾಥ ಐರಣಿ ಮತ್ತಿತರರು ಉಪಸ್ಥಿತರಿದ್ದರು.