• ಗುವಾಹಟಿಯಲ್ಲಿ ವಾಲಂಟಿಯರ್ ಮೀಟ್‌ಗೂ ಮುನ್ನ ನಾಯಕ ವಶಕ್ಕೆ
• ರಂಕಾ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು
• ಕಾರ್ಯಕ್ರಮದ ವಾಲಂಟಿಯರ್‌ಗಳನ್ನು ಹೊರಗೆ ಕಳಿಸಿದ ಆರೋಪ
CJP leader Ashutosh Ranka: ಗುವಾಹಟಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿದ್ದ ವಾಲಂಟಿಯರ್ ಮೀಟ್‌ಗೂ ಮುನ್ನ ಪಕ್ಷದ ಸಹ-ಸಂಯೋಜಕ ಆಶುತೋಷ್ ರಂಕಾ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸಿಜೆಪಿ ಹೇಳಿದೆ. ಅಸ್ಸಾಂನ ವಿವಿಧ ಭಾಗಗಳಿಂದ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಸಭೆ ಆರಂಭಕ್ಕೂ ಮುನ್ನವೇ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದ ಸುತ್ತ ಪೊಲೀಸರು ಬ್ಯಾರಿಕೇಡ್ ಹಾಕಿ, ಅಲ್ಲಿ ಸೇರಿದ್ದ ವಾಲಂಟಿಯರ್‌ಗಳನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ. ಬಳಿಕ ವಶಕ್ಕೆ ಪಡೆದವರನ್ನು ಗುವಾಹಟಿಯ ಕಹಿಲಿಪಾರಾದ 10ನೇ ಪೊಲೀಸ್ ಬೆಟಾಲಿಯನ್‌ಗೆ ಕರೆದೊಯ್ಯಲಾಗಿದೆ ಎಂದು ಪಕ್ಷ ತಿಳಿಸಿದೆ. ಆದರೆ ಎಷ್ಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಪೊಲೀಸ್ ಕ್ರಮಕ್ಕೆ ಕಾರಣವೇನು ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ.
ಸಿಜೆಪಿ ವಾಲಂಟಿಯರ್ ಮೀಟ್‌ಅಪ್ ಅನ್ನು ಮೊದಲಿಗೆ ಗುವಾಹಟಿಯ ಆತ್ಗಾಂವ್‌ನ ಅಸ್ಸಾಂ ಶ್ರೀ ಪರಶುರಾಮ ಸೇವಾ ಸದನ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಅನುಮತಿ ಹಿಂಪಡೆಯಲಾಗಿದೆ ಎಂದು ಸಿಜೆಪಿ ಆರೋಪಿಸಿದ ಬಳಿಕ ಕಾರ್ಯಕ್ರಮದ ಸ್ಥಳವನ್ನು ಚೌಧರಿ ಟಿಲಾಗೆ ಬದಲಾಯಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಆಶುತೋಷ್ ರಂಕಾ, ಅಸ್ಸಾಂನ ಸರ್ಕಾರಿ ಶಾಲೆಗಳು, ಮೂಲಸೌಕರ್ಯ ಹಾಗೂ ಕಾಜಿರಂಗದಲ್ಲಿನ ಜನರ ಹಕ್ಕುಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದರು.
ರಂಕಾ ಸೇರಿದಂತೆ ಪಕ್ಷದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಸಿಜೆಪಿ ಖಂಡಿಸಿದೆ. ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ರಂಕಾ ಹಾಗೂ ಸಿಜೆಪಿ ತಂಡವನ್ನು ಪೊಲೀಸರು ವಶಕ್ಕೆ ಪಡೆದು ಅಪರಿಚಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಜೆಪಿ ಆರೋಪಗಳ ಬಗ್ಗೆ ಅಸ್ಸಾಂ ಪೊಲೀಸರ ಅಧಿಕೃತ ಪ್ರತಿಕ್ರಿಯೆ ಈ ವರದಿ ಸಿದ್ಧಪಡಿಸುವ ವೇಳೆಗೆ ಲಭ್ಯವಾಗಿಲ್ಲ. ಹೀಗಾಗಿ ರಂಕಾ ಅವರನ್ನು ವಶಕ್ಕೆ ಪಡೆದಿರುವ ಕಾರಣ ಹಾಗೂ ಪೊಲೀಸ್ ಕ್ರಮದ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. (ಏಜೆನ್ಸೀಸ್)