

ಪ್ರಸ್ತುತ ಭಾರತದ ಉನ್ನತ ಚುನಾವಣಾ ಅಧಿಕಾರಿಗಳನ್ನು ನೇಮಿಸುವ ಮುಕ್ತ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ. ಈಗ ಈ ನೇಮಕಾತಿ ವಿಧಾನವನ್ನು ಬದಲಾಯಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದರ ಪರಿಣಾಮಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರ ನೇಮಕಾತಿ ವಿಧಾನ ರೀತಿಯಲ್ಲಿಯೇ ಚುನಾವಣೆ ಆಯುಕ್ತರ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠವು ಈ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಈ ಪೀಠದ ಇತರ ಸದಸ್ಯರು.
ಅರ್ಜಿದಾರರ ವಾದವೇನು?: ಈ ಅರ್ಜಿಗಳು (ಪಿಐಎಲ್) ಸಿಇಸಿ ಮತ್ತು ಇಸಿಗಳ ನೇಮಕಾತಿಯನ್ನು ನಿಯಂತ್ರಿಸುವ ಕಾನೂನನ್ನು ಕೋರಿದ್ದವು. ಈ ಕುರಿತ ಮೊದಲ ಪಿಐಎಲ್ ಅನ್ನು 2015ರಲ್ಲಿ ಸಲ್ಲಿಸಲಾಗಿತ್ತು. 2018ರಲ್ಲಿ ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಇದೇ ವಿಷಯದ ಕುರಿತು ಸಲ್ಲಿಸಿದ ಎರಡನೇ ಪಿಐಎಲ್ನ ವಿಚಾರಣೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದ್ದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವಹಿಸಿತ್ತು. ಸಂವಿಧಾನ ಪೀಠವು ಕಳೆದ ವರ್ಷ ನವೆಂಬರ್ನಲ್ಲಿ ವಿಚಾರಣೆ ನಡೆಸಿತು. ವಿಚಾರಣೆಯ ಕೊನೆಯ ದಿನದಂದು, ಅರುಣ್ ಗೋಯಲ್ ಅವರನ್ನು ಇಸಿ ಆಗಿ 24 ಗಂಟೆಗಳಿಗಿಂತಲೂ ಕಡಿಮೆ ಸಮಯದಲ್ಲಿ ಕೇಂದ್ರ ಸರ್ಕಾರ ನೇಮಕ ಮಾಡಿದ್ದನ್ನು ನ್ಯಾಯಾಲಯ ಗಮನಿಸಿತು.
ವಿ.ಪಿ.ಸಿಂಗ್ ಸರ್ಕಾರವು 1991ರಲ್ಲಿ ಚುನಾವಣೆ ಆಯೋಗದ ಕಾಯ್ದೆಯನ್ನು ಜಾರಿಗೊಳಿಸಿ, ಸಿಇಸಿಗೆ ಸುಪ್ರೀಂ ಕೋಟ್ ನ್ಯಾಯಮೂರ್ತಿಗಳಿಗೆ ಸಮಾನವಾದ ಸ್ಥಾನಮಾನ ನೀಡಿತು. ಅಲ್ಲದೆ, ಅವರ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ನಿಗದಿಪಡಿಸಲಾಯಿತು. ಇಸಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಾನ ಸ್ಥಾನಮಾನ ನೀಡಿ, ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ನಿಗದಿಪಡಿಸಲಾಯಿತು. ಚುನಾವಣೆ ಆಯೋಗದ ಕಾಯ್ದೆಯ ಮೂಲಕ ಚುನಾವಣಾ ಆಯೋಗವು ಮತ್ತೊಮ್ಮೆ ಬಹುಸದಸ್ಯ ಸಂಸ್ಥೆಯಾಯಿತು. ಸಿಇಸಿ ಅಧ್ಯಕ್ಷರಾಗಿ ಕಾರ್ಯನಿರ್ವಸಿದರೆ, ಇಸಿಗಳು ಅವರಿಗಿಂತ ಕಿರಿಯ ಸ್ಥಾನದಲ್ಲಿ ಇರುವಂತಾಯಿತು.
1990ರ ಡಿಸೆಂಬರ್ 12 ರಂದು ಟಿ.ಎನ್. ಶೇಷನ್ ಅವರನ್ನು ಸಿಇಸಿಯಾಗಿ ನೇಮಿಸಲಾಯಿತು. ಅವರು ತೀವ್ರ ಸ್ವತಂತ್ರ ಮನೋಭಾವದವರಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ನಿಯಂತ್ರಿಸುವ ಉದ್ದೇಶದೊಂದಿಗೆ ಪಿ.ವಿ.ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 1993ರ ಅಕ್ಟೋಬರ್ 1 ರಂದು ಮತ್ತೊಮ್ಮೆ ಚುನಾವಣಾ ಸಂಸ್ಥೆಯನ್ನು ವಿಸ್ತರಿಸಲು ನಿರ್ಧರಿಸಿತು. ಎಂ.ಎಸ್.ಗಿಲ್ ಮತ್ತು ಜಿವಿಜಿ ಕೃಷ್ಣಮೂರ್ತಿ ಅವರನ್ನು ಇಸಿಗಳಾಗಿ ನೇಮಿಸಲಾಯಿತು. ಅಲ್ಲದೆ, ಸರ್ಕಾರವು ಚುನಾವಣೆ ಆಯೋಗದ ಕಾಯ್ದೆಗೆ ತಿದ್ದುಪಡಿ ಮಾಡಲು ಸುಗ್ರೀವಾಜ್ಞೆ ತಂದಿತು, ಸಿವಿಸಿ ಹಾಗೂ ಇಸಿ ಈ ಮೂವರಿಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಮಾನ ಸ್ಥಾನಮಾನವನ್ನು ನೀಡಿತು. ಮೂವರಿಗೂ ನಿವೃತ್ತಿ ವಯಸ್ಸನ್ನು 65ಕ್ಕೆ ನಿಗದಿ ಮಾಡಲಾಯಿತು. ಈ ಮೂಲಕ ಮೂವರಿಗೂ ಸಮಾನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲಾಯಿತು. ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ, ಬಹುಮತದಿಂದ ನಿರ್ಧಾರ ಕೈಗೊಳ್ಳಲು ಅವಕಾಶ ಕಲ್ಪಿಸಲಾಯಿತು.
ಭಾರತದ ಸಂವಿಧಾನವು ಚುನಾವಣಾ ಆಯೋಗಕ್ಕೆ ವ್ಯಾಪಕ ಅಧಿಕಾರ ನೀಡಿದೆ. 1949ರ ಜೂನ್ 15ರಂದು ಸಂವಿಧಾನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು, ‘ಇಡೀ ಚುನಾವಣೆ ಯಂತ್ರವು ಕೇಂದ್ರ ಚುನಾವಣಾ ಆಯೋಗದ ಕೈಯಲ್ಲಿರಬೇಕು. ಚುನಾವಣಾ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ಮತ್ತು ಇತರರಿಗೆ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿರಬೇಕು’ ಎಂದು ಹೇಳಿದ್ದರು. ತರುವಾಯ ಸಂಸತ್ತು ಚುನಾವಣಾ ಆಯೋಗದ ಅಧಿಕಾರಗಳನ್ನು ವ್ಯಾಖ್ಯಾನಿಸಲು ಮತ್ತು ವಿಸ್ತರಿಸಲು ಜನ ಪ್ರಾತಿನಿಧ್ಯ ಕಾಯ್ದೆ 1950 ಮತ್ತು ಜನಪ್ರಾತಿನಿಧ್ಯ ಕಾಯ್ದೆ 1951 ಅನ್ನು ಜಾರಿಗೊಳಿಸಿತು. 1977ರಲ್ಲಿ ಮೊಹಿಂದರ್ ಸಿಂಗ್ ಗಿಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಸಂವಿಧಾನದ 324ನೇ ವಿಧಿ ಪ್ರಕಾರ, ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ಅಧಿಕಾರ ಚುನಾವಣೆ ಆಯೋಗಕ್ಕಿದೆ ಎಂದು ಸ್ಪಷ್ಟಪಡಿಸಿತು. ಚುನಾವಣಾ ಆಯೋಗ (ಚುನಾವಣಾ ಆಯುಕ್ತರ ಸೇವೆಯ ಷರತ್ತುಗಳು ಮತ್ತು ವ್ಯವಹಾರದ ವಹಿವಾಟು) ಕಾಯ್ದೆ 1991ರ ಪ್ರಕಾರ ಇಸಿ ಮತ್ತು ಸಿಇಸಿ ಹುದ್ದೆಗಳ ಅವಧಿ ಆರು ವರ್ಷ.
ಚುನಾವಣೆ ಮತ್ತು ಚುನಾವಣೆ ಆಯೋಗಕ್ಕೆ ಸಂಬಂಧಿಸಿದಂತೆ ಸಂವಿಧಾನದ ಭಾಗ 15ರಲ್ಲಿ ಐದು ವಿಧಿಗಳು (324ರಿಂದ 329ರವರೆಗೆ) ಇವೆ. ರಾಷ್ಟ್ರಪತಿಗಳು ನೇಮಿಸುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ಒಳಗೊಂಡಿರುವ ಚುನಾವಣೆ ಆಯೋಗವು ಚುನಾವಣೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಬಗ್ಗೆ ಸಂವಿಧಾನದ 324ನೇ ವಿಧಿಯಲ್ಲಿ ಪ್ರಸ್ತಾಪಿಸಲಾಗಿದೆ. ಸಿಇಸಿ ಮತ್ತು ಇಸಿಗಳ ನೇಮಕಾತಿಗೆ ಸಂವಿಧಾನವು ನಿರ್ದಿಷ್ಟ ಶಾಸಕಾಂಗ ಪ್ರಕ್ರಿಯೆಯನ್ನು ರೂಪಿಸುವುದಿಲ್ಲ. ಪ್ರಧಾನಮಂತ್ರಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಈ ನೇಮಕಾತಿಗಳನ್ನು ಮಾಡುತ್ತಾರೆ.
ಗಣರಾಜ್ಯವಾದ ನಂತರ ಸುಮಾರು ನಾಲ್ಕು ದಶಕಗಳವರೆಗೆ, ಚುನಾವಣಾ ಆಯೋಗವು ಏಕ ಸದಸ್ಯ ಸಂಸ್ಥೆಯಾಗಿದ್ದು, ಮುಖ್ಯ ಚುನಾವಣಾ ಆಯುಕ್ತರನ್ನು ಮಾತ್ರ ಹೊಂದಿತ್ತು. ರಾಜೀವ್ ಗಾಂಧಿ ಸರ್ಕಾರ ಮತ್ತು ಅಂದಿನ ಸಿಇಸಿ ಆರ್.ವಿ.ಎಸ್ ಪೇರಿ ಶಾಸ್ತ್ರಿ ನಡುವಿನ ಘರ್ಷಣೆಯ ವಾತಾವರಣದಲ್ಲಿ 1987ರಲ್ಲಿ ರಾಷ್ಟ್ರಪತಿ ಚುನಾವಣೆಯ ಸಮಯದಲ್ಲಿ ಸರ್ಕಾರಕ್ಕೆ ಕೆಲವು ಅಹಿತಕರ ಅನುಭವಗಳಾದವು. ಒಂಬತ್ತನೇ ಲೋಕಸಭೆಗೆ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ 1989ರಲ್ಲಿ ರಾಜೀವ್ ಗಾಂಧಿ ಸರ್ಕಾರವು ಚುನಾವಣಾ ಆಯೋಗವನ್ನು ಬಹುಸದಸ್ಯರ ಸಂಸ್ಥೆಯಾಗಿ ಮಾಡುವ ಮೂಲಕ ಶಾಸ್ತ್ರಿ ಅವರ ಅಧಿಕಾರವನ್ನು ಮೊಟಕುಗೊಳಿಸಲು ನಿರ್ಧರಿಸಿತು. 1989ರ ಅಕ್ಟೋಬರ್ 7ರಂದು ಅಂದಿನ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ಸಂವಿಧಾನದ ವಿಧಿ 324 (2) ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿ, ಚುನಾವಣಾ ಆಯೋಗದಲ್ಲಿ ಸಿಇಸಿ ಜತೆಗೆ ಮತ್ತೆ ಎರಡು ಸ್ಥಾನಗಳನ್ನು ಸೃಷ್ಟಿಸುವ ಅಧಿಸೂಚನೆ ಹೊರಡಿಸಿದರು. 1989ರ ಅಕ್ಟೋಬರ್ 16ರಂದು ಸರ್ಕಾರವು ಎಸ್.ಎಸ್. ಧನೋವಾ ಮತ್ತು ವಿ.ಎಸ್. ಸೀಗೆಲ್ ಅವರನ್ನು ಚುನಾವಣೆ ಆಯುಕ್ತರ ಹುದ್ದೆಗಳಿಗೆ ನೇಮಿಸಿತು. 1989ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವು 1989ರ ಅಕ್ಟೋಬರ್ 7ರಂದು ಇಬ್ಬರು ಚುನಾವಣೆ ಆಯುಕ್ತರನ್ನು ನೇಮಿಸುವ ರಾಷ್ಟ್ರಪತಿಗಳ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಿತು. ಇದನ್ನು ಪ್ರಶ್ನಿಸಿ ಧನೋವಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತು.