

ಸಾಗರ: ಆನಂದಪುರ ಮಾರಿಕಾಂಬಾ ದೇವಸ್ಥಾನ ಆವರಣದಲ್ಲಿ ಮಾ.15ರಂದು ಸಂಜೆ 4ಕ್ಕೆ ಹೋಬಳಿಯ ಕಾಗೋಡು ತಿಮ್ಮಪ್ಪ ನಾಗರಿಕ ಸನ್ಮಾನ ಸಮಿತಿ ಆಶ್ರಯದಲ್ಲಿ ವಿಧಾನಸಭೆ ಮಾಜಿ ಸ್ಪೀಕರ್, ಎರಡು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ಗೆ ಭಾಜನರಾಗಿರುವ ಕಾಗೋಡು ತಿಮ್ಮಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಸೋಮಶೇಖರ ಲ್ಯಾವಿಗೆರೆ ಮಾಹಿತಿ ನೀಡಿದರು.
ಕಾಗೋಡು ತಿಮ್ಮಪ್ಪ ಅವರು ನಾಡಿಗೆ ನೀಡಿರುವ ಕೊಡುಗೆ ಅಪರೂಪವಾದುದು. ಭೂಹೋರಾಟದ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಬೆಳೆದು ನಿಂತ ಅವರು ಅಧಿಕಾರ ಇರಲಿ, ಇಲ್ಲದಿರಲಿ ಜನಪರವಾಗಿ ಧ್ವನಿ ಎತ್ತಿದವರು. ಭೂಹೀನರಿಗೆ ಭೂಮಿಹಕ್ಕು ಕೊಡಿಸುವಲ್ಲಿ ಪ್ರಮುಖಪಾತ್ರ ವಹಿಸಿದವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸುವರು.ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿನಂದನಾ ಭಾಷಣ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾಗೋಡು ತಿಮ್ಮಪ್ಪ ಅವರ ವಿಶೇಷ ಭಾವಚಿತ್ರ ಬಿಡುಗಡೆ ಮಾಡುವರು. ಸಮಿತಿ ಅಧ್ಯಕ್ಷ ಬಿ.ಟಾಕಪ್ಪ, ಬಿ.ಆರ್.ಜಯಂತ್, ಡಾ. ರಾಮಪ್ಪ, ಸುಧೀರ್‌ಕುಮಾರ್ ಮುರೊಳ್ಳಿ ಮತ್ತಿತರರು ಉಪಸ್ಥಿತರಿರುವರು. ಸಂಜೆ 6ಕ್ಕೆ ಸರಿಗಮಪ ಕಲಾವಿದೆ ಸಾಧ್ವಿನಿಕೊಪ್ಪ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಕೋವಿ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರು ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆ ಅಪಾರ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಗೆ ಸ್ಥಾನಮಾನ, ಮಹಿಳೆ ಹೆಸರಿಗೆ ಹಕ್ಕುಪತ್ರ, ತಾಯಿ-ಮಗು ಆಸ್ಪತ್ರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಮಹಿಳೆಯರು ಆಗಮನಿಸಬೇಕು ಎಂದು ಮನವಿ ಮಾಡಿದರು.
ಬಿ.ಟಾಕಪ್ಪ, ಚೇತನರಾಜ ಕಣ್ಣೂರು, ಎನ್.ಉಮೇಶ್, ಗಜೇಂದ್ರ, ಕಿರಣ್ ದೊಡ್ಮನೆ, ಈಶ್ವರ, ಅಶ್ವಿನಿ ಗೌಡ ಇತರರಿದ್ದರು.