

ಹೊಳೆಹೊನ್ನೂರು: ಸಮಾಜದಲ್ಲಿ ಪೌರ ಕಾರ್ಮಿಕರನ್ನು ಎಲ್ಲರಂತೆ ಗೌರವಯುತವಾಗಿ ಕಾಣುವಂತಾಗಬೇಕು ಎಂದು ಪೌರ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಹೇಳಿದರು.
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ಸಮಾಜದ ಸ್ವಾಸ್ಥ್ಯ ಕಾಪಾಡುವ ಸೇನಾನಿಗಳು ಎಂದು ಬಣ್ಣಿಸಿದರು.
ಒಂದು ದಿನ ಕಾರ್ಮಿಕರು ತಮ್ಮ ಸೇವೆ ನಿಲ್ಲಿಸಿದರೆ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಅವರಿಗೆ ದೊರೆಯಬಹುದಾದ ಸೌಲಭ್ಯ ಹಾಗೂ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಸಂಘಟಿತರಾಗಬೇಕು. ನ್ಯಾಯ ಸಮ್ಮತ ಹೋರಾಟದಿಂದ ಪರಿಹಾರ ಕಂಡುಕೊಳ್ಳಬಹುದು. ಸಂಘದ ಪರಿಶ್ರಮದಿಂದ ಇಂದಿನ ಪೌರ ಕಾರ್ಮಿಕರಿಗೆ ಉತ್ತಮ ವೇತನ ಸೇರಿ ಎಲ್ಲಾ ರೀತಿಯ ಭತ್ಯೆ ದೊರೆಯುತ್ತಿದೆ. ಆದ್ದರಿಂದ ಪೌರ ಕಾರ್ಮಿಕರು ಒಟ್ಟಾಗಿರಬೇಕು ಎಂದರು.
ಪೌರಸೇವಾ ನೌಕರರ ಸಂಘದ ಸ್ಥಳೀಯ ಶಾಖೆ ಗೌರವಾಧ್ಯಕ್ಷ ಮಂಜುನಾಥ್, ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷ ಹನುಮಂತಪ್ಪ, ಲೆಕ್ಕಾಧಿಕಾರಿ ಪ್ರದೀಪ್, ರಾಜಸ್ವ ನಿರೀಕ್ಷಕ ಉನ್ನಿಕುಮಾರ್, ಎಸ್‌ಡಿಎ ಅಣ್ಣಪ್ಪ ಸ್ವಾಮಿ, ಎನ್.ರಂಗನಾಥ, ಕರಿಯಪ್ಪ, ಹಾಲೇಶ್, ಸ್ವಾತಿ, ರಂಗನಾಥ ಮತ್ತಿತರರಿದ್ದರು. ನಿವೃತ್ತ ಹಾಗೂ ಉತ್ತಮ ಸೇವೆ ನೀಡುತ್ತಿರುವ ಪೌರ ಕಾರ್ಮಿಕರನ್ನು ಗೌರವಿಸಲಾಯಿತು.