ಪರಿಸರ ಸಂರಕ್ಷಣೆ ಮಾಡಿ ವೀರಯೋಧರಿಗೆ ಗೌರವ ಸಲ್ಲಿಸಿ; ಮಲ್ಲಣ್ಣ ಅಂಗಡಿ

22-RNR-06
Published on

ರಾಣೆಬೆನ್ನೂರ: ಇಂದಿನ ದಿನಮಾನದಲ್ಲಿ ಪರಿಸರ ಸಂರಕ್ಷಣೆ ಬಹಳ ಅವಶ್ಯವಾಗಿದ್ದು, ಪರಿಸರ ಸಂರಕ್ಷಣೆ ಮಾಡುವ ಮೂಲಕ ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ವೀರಯೋಧರಿಗೆ ಗೌರವ ಸಲ್ಲಿಸಬೇಕಿದೆ ಎಂದು ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಹೇಳಿದರು.
ಇಲ್ಲಿಯ ನಗರಸಭೆ ವತಿಯಿಂದ ಮಂಗಳವಾರ ನಗರದ ದೊಡ್ಡಕೆರೆ ಬಳಿ ಏರ್ಪಡಿಸಿದ್ದ ನನ್ನ ಮಣ್ಣು ನನ್ನ ದೇಶ (ಮೇರಿ ಮಿಟ್ಟಿ ಮೇರಾ ದೇಶ) ಹಾಗೂ ಸ್ವಾತಂತ್ರೃ ಹೋರಾಟದಲ್ಲಿ ವೀರಮರಣ ಹೊಂದಿದವರ ಕುಟುಂಬಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮೇರಿ ಮಿಟ್ಟಿ ಮೇರಾ ದೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂಥ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಭಾರತ ದೇಶ ವಿಶ್ವಗುರು ಆಗಲು ಸಾಧ್ಯವಾಗಲಿದೆ. ಆದ್ದರಿಂದ ಎಲ್ಲರೂ ದೇಶಿಯ ಸಸಿ ನೆಡುವುದು ಅವುಗಳನ್ನು ಬೆಳೆಸುವುದು ಸೇರಿ ಪರಿಸರ ಕಾಳಜಿಗೆ ಮುಂದಾಗಬೇಕು ಎಂದರು.
ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ ಅಧ್ಯಕ್ಷತೆ ವಹಿಸಿದ್ದರು. ವೀರಮರಣ ಹೊಂದಿದ ಸ್ವಾತಂತ್ರೃ ಹೋರಾಟಗಾರರ ಕುಟುಂಬದವರನ್ನು ಸನ್ಮಾನಿಸಲಾಯಿತು. ಪರಿಸರ ಸಂರಕ್ಷಣೆ ಕುರಿತು ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕೆರೆಯ ದಂಡೆಯ ಮೇಲೆ ಸಸಿಗಳನ್ನು ನೆಡಲಾಯಿತು.
ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕರ, ನಾಗರಾಜ ಪವಾರ, ಕಸ್ತೂರಮ್ಮ ಚಿಕ್ಕಬಿದರಿ, ಪ್ರಭಾವತಿ ತಿಳವಳ್ಳಿ, ಶೇಖಪ್ಪ ಹೊಸಗೌಡ್ರ, ಪ್ರಮುಖರಾದ ಪ್ರಭುಸ್ವಾಮಿ ಕರ್ಜಗಿಮಠ, ಚಂದ್ರಣ್ಣ ರಾಮಾಳದ, ಬಸವರಾಜ ಹುಚ್ಚಗೊಂಡರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net