

ಶಿವಮೊಗ್ಗ: ಜಿಟಿಜಿಟಿ ಮಳೆ ಬರುವಾಗ ಶಿವಮೊಗ್ಗದ ವಿನೋಬನಗರ ಬೊಮ್ಮನಕಟ್ಟೆ ರೈಲ್ವೆ ಗೇಟ್ ಬಳಿ ಬುಧವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಸಿಟಿ ಬಸ್ ಪಲ್ಟಿಯಾಗಿದ್ದು, ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಬಸ್‌ನಲ್ಲಿ ವಿದ್ಯಾರ್ಥಿಗಳು ಸೇರಿ ಸುಮಾರು 20 ಪ್ರಯಾಣಿಕರಿದ್ದರು. ಇಬ್ಬರು ಮಕ್ಕಳು ಸೇರಿ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತೆ ಮತ್ತು ಸರ್ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು ಅದರ ಪಕ್ಕದಲ್ಲೇ ಬಸ್ ಪಲ್ಟಿಯಾಗಿದೆ.
ಸಿಟಿ ಬಸ್ ಬೊಮ್ಮನಕಟ್ಟೆಯಿಂದ ಗೋಪಾಳಕ್ಕೆ ತೆರಳುತ್ತಿತ್ತು. ರೈಲ್ವೆ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬಳಿಕ ಫೆನ್ಸ್‌ಗೆ ಅಪ್ಪಳಿಸಿ ಪಲ್ಟಿಯಾಗಿದೆ. ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.