ಸಿನಿಮಾ, ಕಿರುತೆರೆ ವಿಭಾಗ: ಹೇಮಾ ಚೌಧರಿ, ನರಸಿಂಹಮೂರ್ತಿಗೆ ರಾಜ್ಯೋತ್ಸವ ಪ್ರಶಸ್ತಿ

kannada raj 1
Published on

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಸಿನಿಮಾ ಹಾಗೂ ಕಿರುತೆರೆ ವಿಭಾಗದಿಂದ ಕನ್ನಡ ಸೇರಿ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಹೇಮಾ ಚೌಧರಿ ಹಾಗೂ ‘ಪಾಪ ಪಾಂಡು’, ‘ಸಿಲ್ಲಿ ಲಲ್ಲಿ’ ಸೇರಿ ಅನೇಕ ಧಾರಾವಾಹಿಗಳಿಗೆ ಚಿತ್ರಕಥೆ ಬರೆದಿರುವ ಸಿನಿಮಾ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅವರಿಗೆ ಸಂದಿದೆ. ಈ ಸಂದರ್ಭದಲ್ಲಿ ವಿಜಯವಾಣಿ ಜತೆ ಖುಷಿ ಹಂಚಿಕೊಂಡಿದ್ದಾರೆ.

ಯೋಗ್ಯತೆಯ ಫಲ: ತೆಲುಗಿನ ಎನ್‌ಟಿ ರಾಮರಾವ್, ವರನಟ ರಾಜಕುಮಾರ್, ವಿಷ್ಣುವರ್ಧನ್, ಅನಂತ್‌ನಾಗ್ ಹಾಗೂ ಶಂಕರ್ ನಾಗ್ ಸೇರಿ ಹಲವು ಖ್ಯಾತನಾಮ ನಟರ ಸಿನಿಮಾದಲ್ಲಿ ನಟಿಸಿದ ಖ್ಯಾತಿ ನಟಿ ಹೇಮಾ ಚೌಧರಿಗೆ ಸಲ್ಲುತ್ತದೆ. ಮೊದಲು ತೆಲುಗು, ಮಲಯಾಳಂ ಚಿತ್ರದಲ್ಲಿ ಗುರುತಿಸಿಕೊಂಡಿದ್ದ ಹೇಮಾ ಚೌಧರಿ 1976ರಲ್ಲಿ ತೆರೆಕಂಡಿದ್ದ ‘ವಿಜಯವಾಣಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ಕನ್ನಡದಲ್ಲಿಯೇ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ಅಲ್ಲದೇ ಕಿರುತೆರೆಯಲ್ಲೂ ನಟಿಸಿದ್ದಾರೆ. ಇಂತಹ ಅಪ್ರತಿಮ ಸಾಧನೆ ಮಾಡಿರುವ ಹಿರಿಯ ಕಲಾವಿದೆಗೆ ಈ ಬಾರಿಯ ರಾಜ್ಯೋತ್ಸವ ದೊರೆತಿದೆ.

ಕನ್ನಡ ಚಿತ್ರರಂಗಕ್ಕೆ ಆಗಮಿಸಿ 49 ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ಸರ್ಕಾರವು ನನ್ನ ಕಲಾ ಸೇವೆಯನ್ನು ಗುರುತಿಸಿರುವುದಕ್ಕೆ ಖುಷಿಯಾಗುತ್ತದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದೆ. ಒಂದು ರೀತಿಯಲ್ಲಿ ಸಾವನ್ನು ಗೆದ್ದು ಬಂದೆ. ಭಗವಂತ ಇಂತಹ ಕ್ಷಣವನ್ನು ಕಣ್ತುಂಬಿಕೊಳ್ಳುವ ಕಾರಣಕ್ಕಾಗಿಯೇ ನನ್ನನ್ನು ಬದುಕಿಸಿದ್ದೇನೆ ಎಂದೆನಿಸುತ್ತದೆ. ಯೋಗ್ಯತೆಯ ಲವಾಗಿ ಈ ಯೋಗ ದೊರೆತಿದೆ. ಹೇಮಾ ಚೌಧರಿ, ಹಿರಿಯ ನಟಿ

ಮತ್ತಷ್ಟು ಉತ್ಸಾಹಿಯನ್ನಾಗಿಸಿದೆ ಕನ್ನಡ ಸಾಹಿತ್ಯ, ನಗೆ ಬರಹ ಹಾಗೂ ಕಿರುತೆರೆ ಧಾರಾವಾಹಿಗಳ ಮೂಲಕ ಎಂ.ಎಸ್..ನರಸಿಂಹಮೂರ್ತಿ ಚಿರಪರಿಚಿತ. ಕನ್ನಡದ ‘ಸಿಲ್ಲಿ ಲಲ್ಲಿ’, ‘ಪಾಪ ಪಾಂಡು’ ಸೇರಿ ಅನೇಕ ಧಾರಾವಾಹಿಗಳಿಗೆ ಸುಮಾರು 12 ಸಾವಿರ ಎಪಿಸೋಡ್‌ಗಳನ್ನು ಬರೆದಿದ್ದಾರೆ. ಅಲ್ಲದೇ ಕನ್ನಡದ ಬಹುತೇಕ ಪತ್ರಿಕೆ ಹಾಗೂ ಮ್ಯಾಗಜೀನ್‌ಗಳಲ್ಲಿ ಅವರ ಬರೆಹಗಳು ಪ್ರಕಟವಾಗಿವೆ. ಇವರ ಸಾಹಿತ್ಯ ಹಾಗೂ ಕಲಾ ಸೇವೆಗೆ ಸರ್ಕಾರವು ಅವರ 75ನೇ ವಯಸ್ಸಿನಲ್ಲಿ ಗುರುತಿಸಿ, ಸುವರ್ಣ ರಾಜ್ಯೋತ್ಸವ ಪ್ರಶಸ್ತಿಯ ಗರಿ ಸಂದಿದೆ.

ಕನ್ನಡದ ಹಲವು ಧಾರಾವಾಹಿಗಳ ಸೇರಿ 12 ಸಾವಿರ ಸಂಚಿಕೆಗಳಿಗೆ ಬರವಣಿಗೆ ಮಾಡಿದ್ದೇನೆ. ದಿನಕ್ಕೊಂದು ಕಥೆ ಇರುವ ಹಾಸ್ಯ ಬರವಣಿಗೆ ಮಾಡಿರುವುದು ದೇಶದಲ್ಲಿ ಮೊದಲು ಎಂಬ ಹೆಗ್ಗಳಿಕೆಗೆ ಇದೆ. ನನ್ನ 75ನೇ ವಯಸ್ಸಿನಲ್ಲಿ ಸರ್ಕಾರವು ಸಾಧನೆ ಗುರುತಿಸಿ, ಪ್ರಶಸ್ತಿ ನೀಡಿರುವುದು ಖುಷಿಯ ತಂದಿದೆ. ಈ ಮೂಲಕ ಇನ್ನಷ್ಟು ಉತ್ಸಾಹ, ಜವಾಬ್ದಾರಿ ಹೆಚ್ಚಿಸಿದೆ. ಎಂ.ಎಸ್.ನರಸಿಂಹಮೂರ್ತಿ, ಸಿನಿಮಾ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net