ಸಿಡಿಆರ್ ಕೇಸ್‌ನಲ್ಲಿ ಸಿಐಡಿ ಹೆಡ್‌ಕಾನ್‌ಸ್ಟೆಬಲ್ ಸೆರೆ

cid
Published on

ಬೆಂಗಳೂರು: ಅನಧಿಕೃತವಾಗಿ ಸಿಡಿಆರ್ (ಕರೆಗಳ ವಿವರ) ಪಡೆದು ಮಾರಾಟ ಮಾಡುತ್ತಿದ್ದ ಡಿಟೆಕ್ಟಿವ್ ಏಜೆನ್ಸಿಗಳ ಪ್ರಕರಣ ಸಂಬಂಧ ಸಿಐಡಿಯ ಹೆಡ್‌ಕಾನ್‌ಸ್ಟೆಬಲ್‌ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಐಡಿಯ ಟೆಕ್ನಿಕಲ್ ಸೆಲ್ ಹೆಡ್‌ಕಾನ್‌ಸ್ಟೆಬಲ್ ಮುನಿರತ್ನ ಬಂಧಿತ. ಈಗಾಗಲೆ ಕಿಂಗ್‌ಪಿನ್ ಆಂಧ್ರಪ್ರದೇಶ ನಾಗೇಶ್ವರ ರೆಡ್ಡಿ ಸೆರೆಸಿಕ್ಕಿದ್ದಾನೆ. ಆರೋಪಿಗಳ ಪಟ್ಟಿ 12ಕ್ಕೆ ಏರಿಕೆಯಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ಮೇ 22ರಲ್ಲಿ ಮಹಾನಗರಿ ಡಿಟೆಕ್ಟಿವ್, ಸೆಕ್ಯೂರಿಟಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಕಚೇರಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಅನಧಿಕೃತವಾಗಿ ಸಿಡಿಆರ್ ಪಡೆಯುತ್ತಿದ್ದ ಆರೋಪದಡಿ ಗೋವಿಂದರಾಜನಗರ ಮತ್ತು ಬಸವೇಶ್ವರನಗರ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಅಪರಾಧ ಪ್ರಕರಣಗಳ ಸಿಡಿಆರ್ ಪಡೆಯಲು ಕಾನೂನು ಅನ್ವಯ ತನಿಖಾಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ. ಈ ಸಿಡಿಆರ್ ಅನ್ನು ಪಡೆಯಲು ಕಮಿಷನರೇಟ್‌ನಲ್ಲಿ ಡಿಸಿಪಿ ಮತ್ತು ಜಿಲ್ಲೆಗಳಲ್ಲಿ ಎಸ್‌ಪಿಗಳ ಅನುಮತಿ ಪಡೆಯಬೇಕು. ಸಿಡಿಆರ್ ಪಡೆಯುವ ಮುನ್ನ ಅಪರಾಧ ಪ್ರಕರಣದ ಆರೋಪಿ ಪಾತ್ರದ ಕುರಿತು ಮಾಹಿತಿ ಸಂಗ್ರಹಿಸಬೇಕು. ಈ ಕಾನೂನು ಪ್ರಕ್ರಿಯೆ ಬಳಿಕ ಸಿಡಿಆರ್ ತನಿಖಾಧಿಕಾರಿಗೆ ಸಿಗುತ್ತದೆ.

ಈ ಮಾರ್ಗವಾಗಿ ಸಿಡಿಆರ್ ಪಡೆಯಲು ಅಧಿಕಾರಿಗಳು ಸಿಐಡಿಗೆ ಪತ್ರ ಬರೆದಾಗ ಸಿಐಡಿ ಟೆಕ್ನಿಕಲ್ ಸೆಲ್ನ ಹೆಡ್‌ಕಾನ್‌ಸ್ಟೆಬಲ್ ಮುನಿರತ್ನ, ಹಿರಿಯ ಅಧಿಕಾರಿಗಳ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್ ಸೇರಿಸಿ ಸರ್ವಿಸ್ ಪ್ರೊವೈಡರ್‌ಗಳಿಗೆ ಸಲ್ಲಿಸಿ ಸಿಡಿಆರ್ ಪಡೆಯುತ್ತಿದ್ದ. ಸಿಡಿಆರ್ ಕೈಸೇರಿದ ಮೇಲೆ ಅಧಿಕೃತ ಸಿಡಿಆರ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡಿ ಅನಧಿಕೃತ ಸಿಡಿಆರ್‌ಗಳನ್ನು ನಾಗೇಶ್ವರ ರೆಡ್ಡಿಗೆ 15 ರಿಂದ 20 ಸಾವಿರ ರೂ.ಗೆ ಮಾರಾಟ ಮಾಡಿಕೊಳ್ಳುತ್ತಿದ್ದ.

ಸಿಐಡಿ ಸಿಬ್ಬಂದಿಯಿಂದ ಪಡೆದ ಸಿಡಿಆರ್‌ನ್ನು ನಾಗೇಶ್ವರ ರಾವ್, ಪ್ರಶಾಂತ್‌ನಗರದ ಮಹಾನಗರಿ ಡಿಟೆಕ್ಟಿವ್ ಆ್ಯಂಡ್ ಸೆಕ್ಯೂರಿಟಿ ಸರ್ವೀಸ್, ಗೋವಿಂದರಾಜನಗರದ 4ನೇ ಮುಖ್ಯರಸ್ತೆಯಲ್ಲಿ ರಾಜಧಾನಿ ಕಾರ್ಪೋರೇಷನ್ ಹೆಸರಿನ ಡಿಟೆಕ್ಟಿವ್ ಏಜೆನ್ಸಿ ಬಸವೇಶ್ವರನಗರದಲ್ಲಿ ಸ್ನೇಕ್ ಡಿಟೆಕ್ಟಿವ್‌ಗೆ ಕೊಟ್ಟು ಹಣ ಮಾಡುತ್ತಿದ್ದ. ಈ ಡಿಟೆಕ್ಟಿವ್ ಏಜೆನ್ಸಿಗಳಿಗೆ ಬೇಕಾದ ಸಿಡಿಆರ್ ನಂಬರ್‌ಗಳನ್ನು ಸಂಗ್ರಹಿಸಿ ಮತ್ತೆ ಮುನಿರತ್ನ ಮೂಲಕ ಪಡೆಯುತ್ತಿದ್ದ. ಈ ದಂಧೆ ಹಲವು ದಿನಗಳಿಂದ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net