ಕರ್ತವ್ಯ ನಿರತ ಪೇದೆಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಿಐಡಿ ತನಿಖೆಗೆ ಡಿಜಿಪಿ ಆದೇಶ

cid police
Published on

ಬೆಂಗಳೂರು: ಸಂಜಯ ನಗರದಲ್ಲಿ ಕರ್ತವ್ಯನಿರತ ಪೇದೆಗಳ ಮೇಲೆ ಹಲ್ಲೆ ಹಾಗೂ ಆರೋಪಿ ಕಾಲಿಗೆ ಪೊಲೀಸರು ಗುಂಡಿಕ್ಕಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

ಭೂಪಸಂದ್ರದ ನಿವಾಸಿ ತಾಜುದ್ದೀನ್ ಮೇಲೆ ಸಂಜಯನಗರ ಪೊಲೀಸರು ಹಲ್ಲೆ ನಡೆಸಿದ್ದಾರೆ. ಶೂ ಧರಿಸಿದ್ದ ಕಾಲಿನಿಂದ ಪೇದೆ ಸಾರ್ವಜನಿಕರ ಮಧ್ಯೆಯೇ ಯುವಕನನ್ನು ಥಳಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರ ಜತೆ ತಾಜುದ್ದೀನ್ ಮತ್ತು ಕುತ್ಬುದ್ದೀನ್ ವಾಗ್ವಾದ ನಡೆಸಿದ್ದರು. ಅದನ್ನು ಮರೆಮಾಚಿರುವ ಪೊಲೀಸರು ಪ್ರಕರಣ ತಿರುಚಿ ಯವಕರನ್ನು ತಪ್ಪಿತಸ್ಥರನ್ನಾಗಿ ಮಾಡಿದ್ದಾರೆ. ಮಹಜರು ನೆಪದಲ್ಲಿ ಕರೆದೊಯ್ದು ತಾಜುದ್ದೀನ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ತಾಜುದ್ದೀನ್ ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಈ ಕುರಿತು ಕೂಲಂಕಷ ತನಿಖೆಯಾಗಬೇಕು ಎಂದು ಒತ್ತಾಯಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಮನವಿ ಮಾಡಿದ್ದರು. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಡಿಜಿಪಿ ಆದೇಶಿಸಿದ್ದಾರೆ.

ಏನಿದು ಪ್ರಕರಣ?: ಲಾಕ್​ಡೌನ್ ಹಿನ್ನೆಲೆಯಲ್ಲಿ ಮಾ.25ರಂದು ಸಂಜಯನಗರದ ಚೆಕ್​ಪೋಸ್ಟ್​ನಲ್ಲಿ ಪೇದೆ ಬಸವರಾಜ ಮತ್ತು ಮಂಜುನಾಥ್ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಈ ವೇಳೆ ತಾಜುದ್ದೀನ್ ಮತ್ತು ಕುತ್ಬುದ್ದೀನ್ ಬೈಕ್ ವ್ಹೀಲಿಂಗ್ ಮಾಡಿಕೊಂಡು ಬಂದಿದ್ದರು. ಅವರನ್ನು ತಡೆದು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಂಜಯನಗರ ಠಾಣೆ ಪೇದೆ ಬಸವರಾಜು ಅದೇ ಠಾಣೆಯಲ್ಲಿ ದೂರು ಕೊಟ್ಟಿದ್ದರು.

ದೂರಿನ ಅನ್ವಯ ಪ್ರಕರಣ ದಾಖಲಿಸಿ ತಾಜುದ್ದೀನ್ ಮತ್ತು ಕುತ್ಬುದ್ದೀನ್​ನನ್ನು ಪೊಲೀಸರು ಬಂಧಿಸಿದ್ದರು. ಮಾ.26ರ ಬೆಳಗ್ಗೆ 6.30ರಲ್ಲಿ ಮಹಜರು ಮಾಡಲು ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಕರ್ತವ್ಯನಿರತ ಪೊಲೀಸರ ಮೇಲೆ ತಾಜುದ್ದೀನ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಎಸ್​ಐ ಬಾಲಾಜಿ ಆರೋಪಿ ಕಾಲಿಗೆ ಗುಂಡಿಕ್ಕಿದ್ದರು ಎಂದು ಹೇಳಲಾಗಿತ್ತು. ಆದರೆ, ತಾಜುದ್ದೀನ್ ಮೇಲೆ ಪೊಲೀಸ್ ಪೇದೆಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net