ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ ಕಿರುಕುಳ ಆರೋಪ; ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಸೆರೆ

5-67d0764717897
Published on

ಬೆಂಗಳೂರು: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿವೈಎಸ್​ಪಿ ಕನಕಲಕ್ಷ್ಮೀ ಅವರನ್ನು ಲೋಕಾಯುಕ್ತ ಎಸ್​ಐಟಿ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಭೋವಿ ನಿಗಮದಲ್ಲಿ ನಡೆದ ಅಕ್ರಮ ಪ್ರಕರಣದ ವಿಚಾರಣೆ ನೆಪದಲ್ಲಿ ವಕೀಲೆ ಹಾಗೂ ಉದ್ಯಮಿ ಜೀವಾಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಎರಡ್ಮೂರು ಬಾರಿ ಎಸ್​ಐಟಿ ವಿಚಾರಣೆಗೆ ಹಾಜರಾಗಿದ್ದ ಕನಕಲಕ್ಷ್ಮೀ ತಮ್ಮ ಹೇಳಿಕೆಯಲ್ಲಿ ಕೆಲವೊಂದು ಲೋಪ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಹೀಗಾಗಿ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸುಮಾರು ಒಂದೂವರೆ ಗಂಟೆ ವಿಚಾರಣೆ ನಡೆಸಿದ ಅಧಿಕಾರಿಗಳು ಅವರನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದರು. ಬಳಿಕ ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕನಕಲಕ್ಷ್ಮೀ ವಿಚಾರಣೆ ಮಾಡಿದಾಗ, ವಕೀಲೆ ಜೀವಾ ಅವರ ವಿಚಾರಣೆ ಸಂದರ್ಭದಲ್ಲಿ ಆಕೆಯಿಂದ 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ. ವಿಚಾರಣೆ ನಡೆಸುವಾಗ ಜೀವಾ ಅವರ ದೇಹ ಪರಿಶೀಲಿಸಿರುವುದು ಮತ್ತು ಹಲ್ಲೆ ನಡೆಸಿರುವುದು ನಿಜ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಜೀವಾ ಡೆತ್​ನೋಟ್​ನಲ್ಲಿ ಕನಕಲಕ್ಷಿ್ಮೕ ವಿರುದ್ಧ ಉಲ್ಲೇಖಿಸಿರುವ ದೌರ್ಜನ್ಯದ ಅಂಶಗಳು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಎಸ್​ಐಟಿ ಮೂಲಗಳು ತಿಳಿಸಿವೆ.

ಭೋವಿ ನಿಗಮದಲ್ಲಿ ಸುಮಾರು 35 ಕೋಟಿ ರೂ. ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್ ಪ್ರೖೆಸಸ್​ಗೆ 7.16 ಕೋಟಿ ರೂ. ಮತ್ತು ಅವರ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್​ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನುಳಿದ ಹಣ ಮಾಜಿ ಎಂಡಿಗಳ ಆಪ್ತರ ಪಾಲುದಾರಿಕೆಯ ಸಂಸ್ಥೆಗಳಿಗೆ ವರ್ಗವಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿದ್ದರಿಂದ 2024ರಲ್ಲಿ ಸರ್ಕಾರ ಸಿಐಡಿ, ಎಸ್​ಐಟಿ ರಚಿಸಿತ್ತು. ಡಿವೈಎಸ್ಪಿ ಕನಕಲಕ್ಷಿ್ಮೕಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿತ್ತು. ಈ ಹಿನ್ನೆಲೆಯಲ್ಲಿ ಕನಕಲಕ್ಷಿ್ಮೕ, ವಕೀಲೆ ಜೀವಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ವಿಚಾರಣೆಗೆ ಬಂದಿದ್ದ ಜೀವಾಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಕನಕಲಕ್ಷ್ಮೀ ವಿವಸ್ತ್ರಗೊಳಿಸಿ ಗಂಟೆಗಟ್ಟಲೇ ಕೂರಿಸಿ ದೌರ್ಜನ್ಯ ಎಸಗಿದ್ದರು. ಅಲ್ಲದೆ 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಿಂದ ನೊಂದಿದ್ದ ಜೀವಾ, ಕನಕಲಕ್ಷ್ಮೀ ವಿರುದ್ಧ 13 ಪುಟಗಳ ಡೆತ್​ನೋಟ್ ಬರೆದಿಟ್ಟು ನ.22 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂಬಂಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸಿಸಿಬಿಗೂ ವರ್ಗಾವಣೆ ಮಾಡಲಾಗಿತ್ತು. ಒಂದೆರಡು ಬಾರಿ ಸಿಸಿಬಿ ವಿಚಾರಣೆಗೆ ಕನಕಲಕ್ಷ್ಮೀ ಹಾಜರಾಗಿದ್ದರು. ಈ ಮಧ್ಯೆ ಹೈಕೋರ್ಟ್, ಜೀವಾ ಆತ್ಮಹತ್ಯೆ ಪ್ರಕರಣ ಸಂಬಂಧ ಡಿಸಿಪಿ ಅಕ್ಷಯ್ ಮಚೀಂದ್ರ, ನಿಶಾ ಜೇಮ್್ಸ ನೇತೃತ್ವದಲ್ಲಿ ಎಸ್​ಐಟಿ ರಚಿಸಿತ್ತು. ಈ ತಂಡ ಕನಕ ಲಕ್ಷ್ಮೀಯನ್ನು ಬಂಧಿಸಿದೆ.

ಹೈಕೋರ್ಟ್​ಗೆ ಸರ್ಕಾರ ಮಾಹಿತಿ

ಡಿವೈಎಸ್​ಪಿ ಕನಕಲಕ್ಷ್ಮಿ ಅವರನ್ನು ಎಸ್​ಐಟಿ ಬಂಧಿಸಿದೆ ಎಂದು ಸರ್ಕಾರವು ಹೈಕೋರ್ಟ್​ಗೆ ವರದಿ ಒಪ್ಪಿಸಿದೆ. ಇದರೊಂದಿಗೆ ಮೂರೂವರೆ ತಿಂಗಳ ಬಳಿಕ ಕನಕಲಕ್ಷ್ಮೀ ಅವರ ಬಂಧನವಾಗಿದೆ. ಜೀವಾ ಆತ್ಮಹತ್ಯೆಗೆ ಕಾರಣವಾಗಿರುವ ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net