ಶಿವಮೊಗ್ಗ ಜಿಲ್ಲಾದ್ಯಂತ ಸಂಭ್ರಮ, ಸಡಗರದ ಕ್ರಿಸ್‌ಮಸ್

Christmas celebration
Published on

ಶಿವಮೊಗ್ಗ: ಇಡೀ ವಿಶ್ವಕ್ಕೆ ಶಾಂತಿ, ಸಹಬಾಳ್ವೆಯ ಸಂದೇಶ ಸಾರಿದ ಯೇಸುಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಜಿಲ್ಲಾದ್ಯಂತ ಕ್ರೈಸ್ತರು ಮಾತ್ರವಲ್ಲವಲ್ಲದೆ ಹಿಂದು, ಮುಸ್ಲಿಮರೂ ಜತೆಗೂಡಿ ಸಂಭ್ರಮ, ಸಡಗರದಿಂದ ಆಚರಿಸಿದರು.

ಶಿವಮೊಗ್ಗ ನಗರ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಮಂಗಳವಾರ ರಾತ್ರಿಯಿಂದಲೇ ಕ್ರೈಸ್ತರು ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಬಲಿಪೂಜೆ ನೆರವೇರಿಸಿದರು. ಚರ್ಚ್‌ಗಳಲ್ಲಿ ನಿರ್ಮಿಸಿದ್ದ ಗೋದಲಿ ಹಾಗೂ ಪುಟ್ಟ ಗೊಂಬೆಗಳ ಪ್ರದರ್ಶನ ಆಕರ್ಷಣೀಯವಾಗಿತ್ತು. ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು.

ಯೇಸುಕ್ರಿಸ್ತನ ಜನ್ಮ ವೃತ್ತಾಂತವನ್ನು ಗೋದಲಿಯಲ್ಲಿ ಪುಟ್ಟ ಗೊಂಬೆಗಳ ಪ್ರದರ್ಶನದ ಮೂಲಕ ಅನಾವರಣ ಮಾಡಲಾಗಿತ್ತು. ಶಿವಮೊಗ್ಗದ ಬಿ.ಎಚ್.ರಸ್ತೆಯ ಸೇಕ್ರೆಡ್ ಹಾರ್ಟ್, ಶರಾವತಿ ನಗರದ ಇನ್‌ಾಂಟ್ ಜೀಸಸ್, ಗೋಪಾಳದ ಗುಡ್‌ಶೆಫರ್ಡ್, ರಾಗಿಗುಡ್ಡದ ಸಂತ ಅಂಥೋನಿ, ಶಿವಪ್ಪನಾಯಕ ವೃತ್ತದ ಸಿಎಸ್‌ಐ ಸಂತ ಥಾಮಸ್ ಚರ್ಚ್‌ಗಳು ಧರ್ಮದ ಅನುಯಾಯಿಗಳಿಂದ ತುಂಬಿ ತುಳುಕುತ್ತಿದ್ದವು. ತಡರಾತ್ರಿಯಿಂದಲೇ ಪ್ರಾರ್ಥನೆ, ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದು, ಹಬ್ಬದ ವಾತಾವರಣ ಮನೆಮಾಡಿತ್ತು.

ಮಂಗಳವಾರ ರಾತ್ರಿಯಿಂದಲೇ ಕ್ರಿಸ್‌ಮಸ್ ಗೀತೆಗಳನ್ನು ಹಾಡಲಾಯಿತು. ನಂತರ ಪೂಜೆ ಆರಂಭಗೊಂಡು ತಡರಾತ್ರಿ ಧಾರ್ಮಿಕ ಪ್ರಕ್ರಿಯೆಗಳು ಪೂರ್ಣಗೊಂಡವು. ಬಹುತೇಕ ಎಲ್ಲ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಗೀತೆಗಳ ಗಾಯನ, ಬೈಬಲ್ ಪಠಣ, ಮಹಿಳೆಯರು, ಮಕ್ಕಳಿಂದ ವಿಶೇಷ ಗೀತ ಗಾಯನ ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net