ಗೊಂದಲದಲ್ಲೇ ಜೈಗಣೇಶ: ಪೊಲೀಸ್ ನೋಟಿಸ್, ಅಳತೆ ಕಿರಿಕಿರಿ, ವಿಸರ್ಜನೆಗೆ ವಿಘ್ನ..

Ganesha
ಬೆಂಗಳೂರಿನ ಹೆಬ್ಬಾಳ ಕೆರೆಗೆ ಶುಕ್ರವಾರ ರಾತ್ರಿ ಬೀಗ ಹಾಕಿದ್ದರಿಂದ ವಿಸರ್ಜನೆಗೆ ತಂದ ಗಣೇಶ ಪ್ರತಿಮೆಗಳನ್ನು ಹೊರಗಡೆಯೇ ಇಟ್ಟು ಹೋಗಿರುವ ಭಕ್ತರು. ಶನಿವಾರ ಬೆಳಗ್ಗೆ ಇವನ್ನು ವಿಸರ್ಜಿಸಲಾಯಿತು.
Published on

ಬೆಂಗಳೂರು: ಸರ್ಕಾರದ ಅಸ್ಪಷ್ಟ ನಡೆ, ವಿವಿಧೆಡೆ ಪೊಲೀಸರ ಪಿರಿಪಿರಿ ನಡುವೆ ಸಾರ್ವಜನಿಕ ಗಣೇಶೋತ್ಸವದಲ್ಲಿ ಒಂದಷ್ಟು ಗೊಂದಲ ಸೃಷ್ಟಿಯಾಗಿದ್ದು, ಪರಿವಾರ ಸಂಘಟನೆ ತೀವ್ರ ಬೇಸರ ಹೊರಹಾಕಿದೆ. ಹಾಗೆಯೇ ಕೆಲ ಕಡೆ ಗಣೇಶೋತ್ಸವ ಸಮಿತಿಗಳು ಕೋವಿಡ್ ನಿಯಮಗಳನ್ನು ಬದಿಗಿಟ್ಟು ಹಬ್ಬ ಆಚರಿಸಿವೆ.

ಕರೊನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ ಸರ್ಕಾರ ನಿಯಮಾವಳಿ ಹೇರಿದ್ದರಿಂದ ಶೇ.60ಕ್ಕಿಂತ ಹೆಚ್ಚು ಸಾರ್ವಜನಿಕ ಆಚರಣೆ ನಡೆಯದಾಯಿತು. ಅಲ್ಲಲ್ಲಿ ನಡೆದರೂ ಪೊಲೀಸರ ಕಿರಿಕಿರಿಯಿಂದ ಸಂಘಟಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ ಸರ್ಕಾರದ ನಿಯಮಗಳಿಂದ ಆಡಳಿತ ಪಕ್ಷ ಬಿಜೆಪಿಗೆ ಇರಿಸುಮುರಿಸು ಉಂಟಾಗಿದೆ.

ಛಾಪಾ ಕಾಗದದಲ್ಲಿ ಷರತ್ತಿಗೆ ಒಪ್ಪಿಗೆ ಪಡೆಯುವುದು, ಗಣಪತಿ ಪ್ರತಿಮೆ ಎತ್ತರಕ್ಕೆ ಮಿತಿ, ಮೆರವಣಿಗೆ, ಧಾರ್ವಿುಕ ಹಾಗೂ ಸಾಂಸ್ಕೃತಿಕ ಆಚರಣೆಗೆ ನಿರ್ಬಂಧ ಹಾಕಲಾಗಿತ್ತು. ಅಷ್ಟೇ ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಪೆಂಡಾಲ್ ಹಾಕುವಂತಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗೂ ಹೀಗೂ ಒತ್ತಡ ತಂದ ಬಳಿಕ ಸಣ್ಣಮಟ್ಟದಲ್ಲಿ ನಿಯಮ ಸಡಿಲಿಸಿದರೂ ಗಣೇಶೋತ್ಸವ ಸಮಿತಿಗಳಿಗೆ ಸಮಾಧಾನ ತಂದಿರಲಿಲ್ಲ. ಅನೇಕ ಕಡೆ ಸಂಪ್ರದಾಯ ಮುರಿಯಬಾದರೆಂದು ಸಾಂಕೇತಿಕವಾಗಿ ಪ್ರತಿಷ್ಠಾಪಿಸಿ, ಸಂಜೆಯೇ ವಿಸರ್ಜನೆ ಮಾಡಲಾಗಿದೆ. ಈ ವೇಳೆ ಸರ್ಕಾರದ ನಿಯಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಈ ನಡುವೆ, ಕೆಲ ಕಡೆಗಳಲ್ಲಿ ಪೊಲೀಸರು ವಿಸರ್ಜನೆಗೆ ಅಡ್ಡಿ ಮಾಡಿರುವುದು, ಪ್ರತಿಮೆ ಎತ್ತರದ ವಿಷಯವಾಗಿ ಸಂಘಟಕರಿಗೆ ಬೆದರಿಕೆ ಹಾಕಿರುವುದು, ನೋಟಿಸ್ ಕೊಟ್ಟು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿರುವ ಬೆಳವಣಿಗೆ ನಡೆದಿದೆ. ಪಾವಗಡದ ಒಂದು ಪ್ರಕರಣದಲ್ಲಿ ಪೊಲೀಸರು ಸಂಘಟಕರಿಗೆ ನೋಟಿಸ್ ನೀಡಿದ್ದಾರೆ. ಅದರಲ್ಲಿ, ಪ್ರತಿಷ್ಠಾಪನೆ ಮಾಡಿರುವ ಗಣೇಶ ಪ್ರತಿಮೆಯನ್ನು ಪರಿಶೀಲಿಸಿದ್ದು, ನೀವುಗಳು ಅಳತೆ ಮೀರಿ ಪ್ರತಿಷ್ಠಾಪಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಠಾಣೆಗೆ ಹಾಜರಾಗಿ ಒಂದು ದಿನದ ಒಳಗೆ ಲಿಖಿತವಾಗಿ ಸಮಜಾಯಿಷಿ ನೀಡುವುದು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರಡಿ ಹಾಗೂ ಇತರ ಕಾನೂನು ಉಪಬಂಧಗಳ ಮೇರೆಗೆ ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸ್​ನಲ್ಲಿ ಎಚ್ಚರಿಸಲಾಗಿತ್ತು. ಹಾಗೆಯೇ ಸಂಘಟಕರನ್ನು ಠಾಣೆಗೆ ಕರೆಸಿ ಎಚ್ಚರಿಕೆಯನ್ನೂ ನೀಡಲಾಗಿದೆ.

ಬ್ಯಾಂಡ್​ಸೆಟ್ ಬಾರಿಸಲು ಅಡ್ಡಿ: ಸಕಲೇಶಪುರದ ಎಸ್.ಪಿ. ರಸ್ತೆಯಲ್ಲಿ ಹಿಂದುಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ಗಣೇಶ ಪ್ರತಿಮೆಯನ್ನು ಶುಕ್ರವಾರ ಸಂಜೆ ವಿರ್ಸಜಿಸುವ ವೇಳೆ ಪೊಲೀಸರು ಮತ್ತು ಸಂಘಟಕರ ನಡುವೆ ಜಟಾಪಟಿ ನಡೆಯಿತು. ಬ್ಯಾಂಡ್ ಸೆಟ್ ಬಾರಿಸುವುದನ್ನು ಸ್ಥಗಿತಗೊಳಿಸುವಂತೆ ಪಿಎಸ್​ಐ ಸೂಚಿಸಿದಾಗ ಮತ್ತು ಬ್ಯಾಂಡ್ ಸೆಟ್ ಬಾರಿಸುವ ಕೋಲು ಕಿತ್ತಿಟ್ಟುಕೊಂಡಾಗ ತ್ವೇಷಮಯ ಸ್ಥಿತಿನಿರ್ವಣವಾಗಿತ್ತು.

ಕಿಡಿಗೇಡಿಗಳಿಂದ ಗಣೇಶ ಪ್ರತಿಮೆ ಧ್ವಂಸ: ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯಲ್ಲಿ ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ ಗಣೇಶನ ಪ್ರತಿಮೆಯನ್ನು ಶುಕ್ರವಾರ ರಾತ್ರಿ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಸ್ಥಳಕ್ಕೆ ಭೇಟಿ ಕೊಟ್ಟು ಧಾರ್ವಿುಕ ಭಾವನೆಗೆ ಧಕ್ಕೆ ಉಂಟು ಮಾಡಿದವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಂಘಟಕರ ವಿರುದ್ಧ ಪ್ರಕರಣ ದಾಖಲು: ಅನುಮತಿ ಪಡೆಯದೆ ಗಣೇಶ ಪ್ರತಿಷ್ಠಾಪನೆ ಮಾಡಿರುವ ಬಾಲ ಬೆನಕ ಯುವಕರ ಗೆಳಯರ ಬಳಗದ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸರು ದೂರು ದಾಖಲು ಮಾಡಿದ್ದಾರೆ. ನಗರದ ಕೋಟೆ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಪ್ರತಿಮೆಯ ತಲೆ ಮುರಿದುಹೋದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರೇ ಮುಂದೆ ನಿಂತು ಪರ್ಯಾಯವಾಗಿ ಅದೇ ಸ್ಥಳದಲ್ಲಿ ಮತ್ತೊಂದು ಗಣೇಶ ವಿಗ್ರಹ ಪ್ರತಿಷ್ಟಾಪನೆ ಮಾಡಿದ್ದಾರೆ. ಆದರೆ, ಮೊದಲು ಅನುಮತಿ ಪಡೆಯದೆ ಗಣಪತಿ ಪ್ರತಿಷ್ಠಾಪನೆ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ.

ತಪ್ಪಿದ ಭಾರಿ ದುರಂತ

ದೋರನಹಳ್ಳಿ: ಗಣೇಶ ಚತುರ್ಥಿ ದಿನ ಉಪ್ಪಾರ ಓಣಿಯಲ್ಲಿ ಮನೆ ಕುಸಿದು ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದವರಲ್ಲಿ ಆತಂಕ ಸೃಷ್ಟಿಸಿತ್ತು. ಗಣೇಶ ಬಂದ ಕಾಯಿ ಕಡುಬು ತಿಂದ ಎಂದು ಓಣಿಯಲ್ಲಿ ಮಕ್ಕಳು ಕೂಗುತ್ತಿದ್ದಂತೆ, ಕೂಲಿ ಮಾಡುತ್ತ ಜೀವನ ಸಾಗಿಸುತ್ತಿರುವ ಯಂಕಪ್ಪ ಕಶೆಟ್ಟಿ ಮನೆಯಲ್ಲಿದ್ದ ಐವರು ಮಕ್ಕಳು ನೋಡಲು ಹೊರಗಡೆ ಹೋದ ಎರಡೇ ನಿಮಿಷದಲ್ಲಿ ಮೇಲ್ಛಾವಣಿ ಕುಸಿದಿದೆ. ಈ ವೇಳೆ ಹೆಂಡತಿಯನ್ನು ಗಂಡ ಆಚೆ ನೂಕಿದ್ದು, ಇಬ್ಬರ ಕಾಲುಗಳಿಗೆ ಗಂಭೀರ ಗಾಯವಾಗಿವೆ.

ಇಲಿಯಪ್ಪನಿಗೆ ಪೂಜೆ

ಚಿತ್ರದುರ್ಗ: ಕೈಮಗ್ಗದ ರೇಷ್ಮೆ ನೇಯ್ಗೆಗೆ ಕೊಂಡ್ಲಹಳ್ಳಿ ನಾಡಿನಾದ್ಯಂತ ಹೆಸರುವಾಸಿ. ಇಲ್ಲಿನ ನೇಕಾರರು ಗಣೇಶ ಹಬ್ಬದಂದು ಮೂಷಿಕ ಪೂಜೆ ಸಲ್ಲಿಸುತ್ತಾರೆ. ಹಲವು ದಶಕಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ರೇಷ್ಮೆ ನೂಲು ಕಡಿಯುವ ಮತ್ತು ಕೀಳುವುದು ಮಾಡಬಾರದು ಎಂಬ ಕಾರಣಕ್ಕೆ ಈ ಪೂಜೆ ಮಾಡಲಾಗುತ್ತದೆ.

ಬಂಗಾರದ ಗಣಪತಿ!: ಉಡುಪಿಯ ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಭಕ್ತರು ಮತ್ತು ಸಮಿತಿ ವತಿಯಿಂದ 10 ಲಕ್ಷ ರೂ. ಮೌಲ್ಯದ ಬಂಗಾರದ ಮೂರ್ತಿಯನ್ನು ಸಮರ್ಪಿಸ ಲಾಯಿತು. ಶುಕ್ರವಾರ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಜತೆಗೆ ಬಂಗಾರದ ಗಣಪತಿ ಪ್ರತಿಷ್ಠಾಪನೆ ಪೂಜೆ ಜರುಗಿತು. 200 ಗ್ರಾಂ ಚಿನ್ನ ಸಹಿತ ಗಣೇಶ ದೇವರ ವಿಗ್ರಹವನ್ನು ಹೆರ್ಗ ನಾಗರಾಜ ಶರ್ಮ ನಿರ್ವಿುಸಿದ್ದಾರೆ.

ವಿಎಚ್​ಪಿ ಎಚ್ಚರಿಕೆ

ಗಣೇಶೋತ್ಸವಕ್ಕೆ ಪೊಲೀಸರ ಕಿರಿಕಿರಿಯನ್ನು ವಿಶ್ವ ಹಿಂದೂ ಪರಿಷತ್ ಗಂಭೀರವಾಗಿ ಪರಿಗಣಿಸಿದ್ದು, ಪರಿವಾರದ ಇತರ ಸಂಘಟನೆಯೂ ಗೃಹ ಸಚಿವರ ಗಮನಕ್ಕೆ ತಂದಿದೆ. ಪ್ರತಿಮೆ ಅಳತೆ ಜಾಸ್ತಿಯಿದೆ ಎಂದು ಪೊಲೀಸರು ನೋಟಿಸ್ ನೀಡಿರುವುದನ್ನು ವಿರೋಧಿಸುತ್ತಿದೆ. ಗಣಪತಿ ಅಳತೆ ಅವರವರ ಭಕ್ತಿಗೆ ಸಂಬಂಧಿಸಿದ ವಿಚಾರ. ಇದರಲ್ಲಿ ಸರ್ಕಾರ ಮೂಗು ತೂರಿಸಬಾರದು ಎಂದು ವಿಹಿಂಪ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೇಳಿದ್ದಾರೆ. ಇಂತಹ ವಿಷಯದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆಂದಿದ್ದ ಸಿಎಂ, ಅಂತರ ಕಾಯ್ದುಕೊಂಡಿದ್ದು ಪರಿವಾರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net