

ಕೋಲಾರ: ಪಾರ್ಶ್ವವಾಯು (ಸ್ಟ್ರೊಕ್) ಗಂಭೀರ ಕಾಯಿಲೆಯಾಗಿದ್ದು, ಇದು ಹರಡದಂತೆ ಕ್ರಮಕೈಗೊಳ್ಳಲು ದೊಡ್ಡಮಟ್ಟದ ಸಂಶೋಧನ ಅಧ್ಯಯನಕ್ಕೆ ಮುಳಬಾಗಿಲನ್ನು ಆಯ್ಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನಿಮ್ಹಾನ್ಸ್ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ನಿಮ್ಹಾನ್ಸ್ ಸ್ಟ್ರೋಕ್ ಪ್ರಾಜೆಕ್ಟ್ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಹದಲ್ಲಿ ಆಗುವ ಬದಲಾವಣೆಗಳಿಂದ ಎಂತಹ ಕಾಯಿಲೆಗಳು ಹರಡುತ್ತವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದರು.
ಪಾರ್ಶ್ವವಾಯುವಿಗೆ ಕಾರಣವಾಗುವ ಅಪಾಯಕಾರಿ ಅಂಶಗಳು, ಆರಂಭ, ಚಿಕಿತ್ಸೆ ಹಾಗೂ ಫಲಿತಾಂಶಗಳನ್ನು ಪರೀಕ್ಷಿಸುವ ಗುರಿ ಹೊಂದಿದೆ. ಸೂರ್ಯನ ಪ್ರಥಮ ಕಿರಣ ಬೀಳುವ ಮುಳಬಾಗಿಲಿಗೆ ಸ್ಟ್ರೋಕ್ ಯೋಜನೆ ಆಶಾಕಿರಣವಾಗಿ ಬಂದಿದ್ದು, ಇದಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದರು.
ಬದಲಾದ ಜೀವನಶೈಲಿಯೇ ಆರೋಗ್ಯದ ಮೇಲೆ ಪರಿಣಾಮ ಬೀರಲು ಮುಖ್ಯ ಕಾರಣವಾಗಿದೆ. ಜನರ ಮೂಢನಂಬಿಕೆ ತೊಡೆದು ಹಾಕಿ ಅವರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಸಿಬ್ಬಂದಿ, ಆಶಾಕಾರ್ಯಕರ್ತರು ಬಹಳ ಪ್ರಮುಖ ಪಾತ್ರ ವಹಿಸಬೇಕಾಗಿದೆ. ನಿಮ್ಹಾನ್ಸ್ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಅವರೊಂದಿಗೆ ಸಹಕರಿಸಿ ಬೇಕಾದ ಮಾಹಿತಿ ನೀಡಬೇಕು ಎಂದರು.
ದುಶ್ಚಟಗಳು ಸ್ಟ್ರೊಕ್ಗೆ ಕಾರಣ:
ನರವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಪ್ರತಿಮಾ ಮೂರ್ತಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಪಾರ್ಶ್ವವಾಯು ಮತ್ತು ಅದರ ಪರಿಣಾಮ ಕಾಡುತ್ತಿರುವ ಸಮಸ್ಯೆಯಾಗಿದೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಧಿಕ ತೂಕ ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯಂತಹ ದುಶ್ಚಟಗಳು ಸ್ಟ್ರೊಕ್ಗೆ ಕಾರಣವಾಗಿದೆ ಎಂದು ತಿಳಿಸಿದರು.
ರಾಜ್ಯದ ಬೇರೆ- ಬೇರೆ ಕಡೆಯಿಂದ ಬೆಂಗಳೂರು ನಿಮ್ಹಾನ್ಸ್ಗೆ ಬರುವುದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಹಾಗಾಗಿ ರೋಗಿಗಳಿರುವ ಜಾಗದಲ್ಲೇ ಚಿಕಿತ್ಸೆ ದೊರೆಯುವಂತೆ ಮಾಡಲು ಮೆದುಳು ಆರೋಗ್ಯಕ್ಕೆ ಒತ್ತು ನೀಡಲಾಗುತ್ತಿದೆ. ಕಾಯಿಲೆಗೆ ಔಷಧ ನೀಡುವುದು ಒಂದೆಡೆಯಾದರೆ ಅದನ್ನು ಬೀರದಂತೆ ತಡೆಗಟ್ಟುವುದೇ ನಿಮ್ಹಾನ್ಸ್ನ ಉದ್ದೇಶವಾಗಿದೆ ಎಂದರು.
ಪಾರ್ಶ್ವವಾಯು ತಡೆಗಟ್ಟುವ ಮಾರ್ಗಗಳನ್ನು ಪರಿಣಾಮಕಾರಿ ಚಿಕಿತ್ಸೆ ವಿಧಾನಗಳನ್ನು ಕಂಡುಕೊಳ್ಳುವುದು ತುಂಬಾ ಅವಶ್ಯ. ಹೀಗಾಗಿ ಜಿಲ್ಲೆಯ ಮುಳಬಾಗಲು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ಆರಂಭಿಸಲಾಗುವುದು ಎಂದರು.
ನಿಮ್ಹಾನ್ಸ್ ಕುಲಸಚಿವ ಡಾ.ಬಿ.ಎಸ್. ಶಂಕರನಾರಾಯಣ, ವೈದ್ಯರಾದ ಡಾ.ಬಿ.ಎಸ್.ಪ್ರದಿಪ್, ಡಾ.ಎಂ.ಎಸ್.ಗೌತಮ್, ಡಾ.ಬಿ.ಎ.ಅರವಿಂದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಎಂ.ಜಗದೀಶ್, ಡಿಎಸ್ ಡಾ.ವಿಜಯ್ಕುಮಾರ್, ಯೋಗೇಶ್ ಶೌಚೆ ಇದ್ದರು.