ದಕ್ಷಿಣ ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳು ಈ ವರ್ಷದ ದ್ವಿತೀಯಾರ್ಧದಲ್ಲಿ ತೆರಗೆ ಬರಲಿವೆ. ಹೀಗಾಗಿ ಮುಂದಿನ ಆರು ತಿಂಗಳಲ್ಲಿ ಸ್ಟಾರ್ ನಟರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ‘ಟಾಕ್ಸಿಕ್’ ಆಗಸ್ಟ್ ತಿಂಗಳನ್ನು ಲಾಕ್ ಮಾಡಿಕೊಂಡಿದೆ. ಸೆಪ್ಟೆಂಬರ್‌ನಲ್ಲೂ ‘ಟಾಕ್ಸಿಕ್’ ಸದ್ದು ಮುಂದುವರಿವ ನಿರೀಕ್ಷೆಯಿದ್ದು, ಉಳಿದ ಚಿತ್ರತಂಡಗಳು ದಸರಾ, ದೀಪಾವಳಿಯಲ್ಲಿ ರಿಲೀಸ್ ಮಾಡಲು ಮುಂದಾಗುತ್ತಿದ್ದಾರೆ. ಅದರಂತೆ, ಈ ಬಾರಿಯ ದಸರಾಕ್ಕೆ ರಜಿನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಬಿಡುಗಡೆಯಾಗುತ್ತಿದೆ. ಗುರುವಾರ ಸಂಜೆ ವಿಶೇಷ ಪ್ರೊಮೋ ಮೂಲಕ ‘ಜೈಲರ್ 2’ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, ಅಕ್ಟೋಬರ್ 15ಕ್ಕೆ ವಿಶ್ವಾದ್ಯಂತ ತೆರೆ ಮೇಲೆ ಬರಲಿದೆ. ಪ್ರೋಮೋದಲ್ಲಿ ಮೊದಲ ಭಾಗದಲ್ಲಿ ಸತ್ತು ಹೋಗಿರುವ ವರ್ಮನ್ ಪಾತ್ರಧಾರಿ ಖಳನಾಯಕ ವಿನಾಯಕನ್ ಕಾಣಿಸಿಕೊಂಡು, ‘ನನ್ನ ಕೊಂದೇ ಬಿಟ್ಟೆ ಅಂತ ನೆಮ್ಮದಿಯಾಗಿ ಇರಕ್ಕಾಗಲ್ಲ ಜೈಲರ್. ನನ್ನ ಹಿಂದೆ ಒಂದು ದೊಡ್ಡ ಪ್ರಪಂಚನೇ ಇದೆ. ಇದೊಂದು ದೊಡ್ಡ ನೆಟ್‌ವರ್ಕ್’ ಎಂದು ಗುಡುಗಿದ್ದು, ‘ಯಾರ‌್ಯಾರು ಯಾವಾಗ ಬರುತ್ತಾರೆ ಎಂದು ನಿನಗೆ ಗೊತ್ತೇ ಆಗಲ್ಲ’ ಎಂಬ ಡೈಲಾಗ್ ‘ಜೈಲರ್ 2’ನಲ್ಲಿ ಮತ್ತಷ್ಟು ಕಲಾಬಳಗ ಇರಲಿದೆ ಎಂಬ ಸುಳಿವು ಬಿಟ್ಟುಕೊಟ್ಟಿದೆ. ಬಳಿಕ ಹಲವು ಹೊಸ ಮುಖಗಳು ಹಾದುಹೋಗಿದ್ದು, ಪ್ರಮುಖ ನಟ-ನಟಿಯರನ್ನು ಪ್ರೊಮೋದಲ್ಲಿ ತೋರಿಸಿಲ್ಲ. ಟೀಸರ್‌ಗೆ ‘ಒಂದು ಹೆಸರು ಇಡೀ ಆಟ ಆಡಿಸುತ್ತದೆ’ ಎಂಬ ಅಡಿಬರಹ ಬರೆಯಲಾಗಿದ್ದು, ಅನಿರುದ್ಧ ಸಂಗೀತದಲ್ಲಿ ಮೂಡಿಬಂದಿದೆ. 2023ರಲ್ಲಿ ತೆರೆಕಂಡಿದ್ದ ‘ಜೈಲರ್’ ಚಿತ್ರದ ಸೀಕ್ವೆಲ್ ಇದಾಗಿದ್ದು, ರಜಿನಿಕಾಂತ್ ಜತೆಗೆ ರಮ್ಯ ಕೃಷ್ಣನ್, ಶಿವರಾಜಕುಮಾರ್, ಮೋಹನ್ ಲಾಲ್, ಮಿರ್ಣಾ ಮೆನನ್, ಯೋಗಿ ಬಾಬು, ಹೃತಿಕ್ ರೋಷನ್, ಮೇಘನಾ ರಾಜ್ ಕಲಾಬಳಗದಲ್ಲಿದ್ದಾರೆ.