ಅ.24ರಿಂದ ಶಿವಮೊಗ್ಗದ ನಗರದ ವಿವಿಧೆಡೆ ಚಿಂತನ ಕಾರ್ತಿಕ

chintana kartika
Published on

ಶಿವಮೊಗ್ಗ: ಶಿವಮೊಗ್ಗ ಬಸವಕೇಂದ್ರದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವಕೇಂದ್ರದ 19ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮ ನಗರದ ವಿವಿಧೆಡೆ ಅ.24ರಿಂದ ನವೆಂಬರ್ 23ರವರೆಗೆ ನಡೆಯಲಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಹೇಳಿದರು.

ಪ್ರತಿ ವರ್ಷವೂ ಒಂದೊಂದು ವಸ್ತು, ವಿಷಯ ಇಟ್ಟುಕೊಂಡು ಚಿಂತನೆ ನಡೆಸಲಾಗುತ್ತಿದೆ. ಈ ವರ್ಷ ಅಲ್ಲಮಪ್ರಭುಗಳ ವಚನಗಳಲ್ಲಿರುವ ನುಡಿಗಟ್ಟುಗಳ ಬಗ್ಗೆ ಉಪನ್ಯಾಸಗಳು ನಡೆಯಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ನುಡಿಗಟ್ಟುಗಳು ವಚನಗಳ ಸಾಲುಗಳಾಗಿ ಒಂದು ಬಂಧಕ್ಕೆ ಒಳಪಡುತ್ತವೆ. ಹಾಗೆಯೇ ಸ್ವತಂತ್ರವಾಗಿಯೂ ಈ ನುಡಿಗಟ್ಟುಗಳು ಅರ್ಥಪೂರ್ಣವಾಗಿವೆ. 24ರ ಸಂಜೆ 6.30ಕ್ಕೆ ಬಸವಕೇಂದ್ರದಲ್ಲಿ ಚಿಂತನ ಕಾರ್ತಿಕವನ್ನು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸುವರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಸಾಸ್ವೇಹಳ್ಳಿ ಸತೀಶ್ ಅವರಿಗೆ ಈ ಸಂದರ್ಭದಲ್ಲಿ ಅಭಿನಂದಿಸಲಾಗುವುದು ಎಂದರು.

ವಿದ್ಯುತ್ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶಶಿಧರ್, ಕಾರ್ಯಾಧ್ಯಕ್ಷ ಎಂ.ಆರ್.ಜಯದೇವಪ್ಪ ಅತಿಥಿಗಳಾಗಿರುವರು. ಡಾ. ಆರಡಿ ಮಲ್ಲಯ್ಯ, ರೇವಣಸಿದ್ದಯ್ಯ ಹಿರೇಮಠ, ಡಾ. ಎಚ್.ಎಸ್.ನಾಗಭೂಷಣ, ಡಾ.ಚಿದಾನಂದ್, ತುರವನೂರು ಮಲ್ಲಿಕಾರ್ಜುನ್, ಎಚ್.ಎನ್.ಮಹಾರುದ್ರ, ಎಂ.ಎನ್.ಸುಂದರರಾಜ್, ಡಾ. ಕೆ.ಜಿ.ವೆಂಕಟೇಶ್, ಡಾ.ಕಲೀಂ ಉಲ್ಲಾ, ಡಾ. ಜಿ.ವಿ.ಹರಿಪ್ರಸಾದ್, ಡಾ. ಎಂ.ಬಸವರಾಜು, ಕಿರಣ್ ಕುಮಾರ್, ನ್ಯಾಮತಿ ಚನ್ನಬಸಪ್ಪ, ನಾಗಶ್ರೀ ತ್ಯಾಗರಾಜ್, ಡಾ.ಭಾರತಿ ದೇವಿ, ವಿಜಯ ಶ್ರೀಧರ್, ಡಾ. ಮೋಹನ ಚಂದ್ರಗುತ್ತಿ, ಬಸವನಗೌಡ ಮಾಳಗಿ, ಡಾ. ಜಿ.ಕೆ.ಪ್ರೇಮಾ ಮತ್ತಿತರರು ವಿವಿಧ ನುಡಿಗಟ್ಟುಗಳ ಕುರಿತು ಉಪನ್ಯಾಸ ನೀಡುವರು ಎಂದು ಹೇಳಿದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ ತಳಗಿಹಾಳ್, ಖಜಾಂಚಿ ಚಂದ್ರಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಚ್.ಎನ್.ಮಹಾರುದ್ರ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಆರ್.ಎಸ್. ಹಾಲಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net