ಕರೊನಾ ನಿಗ್ರಹ ಲಸಿಕೆ ಶೇ.99 ಯಶಸ್ವಿ; ಚೀನಿ ಕಂಪನಿ ವಿಶ್ವಾಸ, ಬೀಜಿಂಗ್​ ಹೊರವಲಯದಲ್ಲಿ​ ಬೃಹತ್ ಕಾರ್ಖಾನೆ

vaccine
Published on

ನವದೆಹಲಿ: ಜಗತ್ತಿನಲ್ಲೀಗ ಅತ್ಯಂತ ತುರ್ತು ಹಾಗೂ ಇನ್ನಿಲ್ಲದ ವೇಗದಿಂದ ನಡೆಯುತ್ತಿರುವ ಕಾರ್ಯವೆಂದರೆ ಕರೊನಾಗೆ ಲಸಿಕೆ ತಯಾರಿ. ಸದ್ಯ ವಿಶ್ವದ 120ಕ್ಕೂ ಅಧಿಕ ಹಾಗೂ ಪ್ರಮುಖ ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ.

ಕರೊನಾ ನಿಗ್ರಹಕ್ಕೆ ಸಿದ್ಧವಾಗುತ್ತಿರುವ ಲಸಿಕೆಗಳಲ್ಲಿ 10 ಕಂಪನಿಗಳು ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿವೆ. ಈ ಪೈಕಿ ಚೀನಾದ ಐದು ಕಂಪನಿಗಳು ಸೇರಿದ್ದು, ಸಿನೊವಾಕ್​ ಬಯೋಟೆಕ್​ ಕಂಪನಿ ಮುಂಚೂಣಿಗೆ ಬಂದಿದೆ.

ಕೋತಿಗಳ ಮೇಲೆ ಲಸಿಕೆ ಪ್ರಯೋಗ ಈಗಾಗಲೇ ಯಶಸ್ವಿಯಾಗಿದೆ. ಮಾನವರ ಮೇಲೆ ಪ್ರಯೋಗ ಎರಡನೇ ಹಂತದಲ್ಲಿದೆ. 1,000 ಜನರಿಗೆ ಲಸಿಕೆ ನೀಡಲಾಗಿದೆ. ಈ ಲಸಿಕೆಗೆ 'ಕರೊನಾವಾಕ್'​ ಎಂದು ಹೆಸರಿಟ್ಟಿದೆ. ಈವರೆಗಿನ ಫಲಿತಾಂಶಗಳನ್ನು ಗಮನಿಸುವುದಾದರೆ, ಅತ್ಯುತ್ತಮವಾಗಿದೆ. ಈ ಲಸಿಕೆ ಶೇ.99 ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸದ್ಯ ಚೀನಾದಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು, ಮೂರನೇ ಹಂತದ ಪರೀಕ್ಷೆಗಾಗಿ ಯುರೋಪ್​ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕಂಪನಿ ಸಂಶೋಧಕ ಲಾವೂ ಬೈಷಾನ್​ ಹೇಳಿದ್ದಾರೆ.

ಲಸಿಕೆ ಉತ್ಪಾದನೆಗಾಗಿ ಬೀಜಿಂಗ್​ ಹೊರವಲಯದಲ್ಲಿ ಭಾರಿ ಕಾರ್ಖಾನೆ ಸ್ಥಾಪಿಸಲಾಗುತ್ತಿದೆ. ಇಲ್ಲಿ ವರ್ಷಕ್ಕೆ 100 ಕೋಟಿಗೂ ಅಧಿಕ ಡೋಸ್​ ಲಸಿಕೆ ತಯಾರಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಮೊಬೈಲ್ ದೈತ್ಯ ಕಂಪನಿ ವಿವೋ ಕ್ಯಾಪಿಟಲ್​ ಹಾಗೂ ಅಡ್ವಾಂಟೆಕ್​ ಕ್ಯಾಪಿಟಲ್​ ಕಂಪನಿಗಳು ಭಾರಿ ಬಂಡವಾಳ ಹೂಡಿಕೆ ಮಾಡಿವೆ. ಆರಂಭದಲ್ಲಿ 113 ಕೋಟಿ ರೂ.ಗಳನ್ನು ತೊಡಗಿಸಿವೆ. ಚೀನಾದ ಇನ್ನೊಂದು ಕಂಪನಿ ಕೂಡ ಲಸಿಕೆ ತಯಾರಿಕೆಗಾಗಿ ಭಾರಿ ಕಾರ್ಖಾನೆ ಸ್ಥಾಪನೆಗೆ ಸಿದ್ಧತೆ ನಡೆಸಿದೆ.

ಇನ್ನೊಂದೆಡೆ, ಮಾನವರ ಮೇಲೆ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ ಎಂದು ಘೋಷಿಸಿರುವ ಅಮೆರಿಕದ ಮಾಡೆರ್ನಾ ಕಂಪನಿ ಎರಡನೇ ಹಂತದ ಪ್ರಯೋಗ ಮುಂದುವರಿಸಿದೆ. ಇದಕ್ಕಾಗಿ 600 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಂಪನಿ ಅಂತಿಮ ಹಂತದ ಪರೀಕ್ಷೆಯನ್ನು ಜುಲೈನಲ್ಲಿ ನಡೆಸಲು ಉದ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net