

ಚೀನಾ: ಚೀನಾದಲ್ಲಿ ಶಾಲಾ ಪಠ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ. ಪಠ್ಯಕ್ರಮವು ಲೈಂಗಿಕ ಕಿರುಕುಳದ ಬಗ್ಗೆ ಸಂಬಂಧಿಸಿದೆ. ಹುಡುಗಿಯರು ಪ್ರಚೋದನಕಾರಿ ಬಟ್ಟೆಗಳನ್ನು ಧರಿಸಬಾರದು ಮತ್ತು ಚೆಲ್ಲಾಟವಾಡುತ್ತಾ ಮಾತನಾಡಬಾರದು, ಇವುಗಳಿಂದ ಹೆಣ್ಣುಮಕ್ಕಳು ದೂರವಿದ್ದರೆ ಲೈಂಗಿಕ ಕಿರುಕುಳ ಎದುರಿಸಬೇಕಾಗಿಲ್ಲ ಎಂದು ಪಠ್ಯಕ್ರಮದಲ್ಲಿ ಹೇಳಲಾಗಿದೆ.
ಈ ಪ್ರಕರಣವು ಗುವಾಂಗ್‌ಡಾಂಗ್‌ನ ಝೌಕಿಂಗ್‌ನಲ್ಲಿರುವ ಮಿಡಲ್ ಶಾಲೆಗೆ ಸಂಬಂಧಿಸಿದೆ. ಶಾಲೆಯು ಕಳೆದ ವರ್ಷ ಪಠ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಶಿಕ್ಷಣವನ್ನು ಪರಿಚಯಿಸಿತು. ಜತೆಗೆ ಲೈಂಗಿಕ ಕಿರುಕುಳ ಮತ್ತು ಇತರ ವಿಷಯಗಳನ್ನು ಪಠ್ಯಗಳಲ್ಲಿ ಸೇರಿಸಲಾಗಿದೆ.
ಹೆಣ್ಣುಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿರಬೇಕು, ಅವರ ಬಟ್ಟೆಗಳು ಪಾರದರ್ಶಕ ಮತ್ತು ಆಕರ್ಷಕವಾಗಿರಬಾರದು. ಮಾತಿಗೆ ತಕ್ಕಂತೆ ಕೆಲಸ ಮಾಡಿದರೆ ಲೈಂಗಿಕ ಶೋಷಣೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಈ ವಿವಾದಾತ್ಮಕ ಪಠ್ಯಕ್ರಮದ ಕೆಲವು ಚಿತ್ರಗಳು ಈ ತಿಂಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಸಂಚಲನ ಹುಟ್ಟುಹಾಕಿದೆ. ಇಂತಹ ಪಠ್ಯಕ್ರಮವು ಪಿತೃ ಪ್ರಧಾನ ಸಮಾಜದೊಳಗಿನ ಲಿಂಗ ಅಸಮಾನತೆಯನ್ನು ಬಹಿರಂಗಪಡಿಸುತ್ತದೆ ಎಂದು ಅನೇಕರು ಹೇಳಿದ್ದಾರೆ.
ಸ್ಥಳೀಯ ಶಿಕ್ಷಣಾಧಿಕಾರಿಗಳು ಪಠ್ಯದಲ್ಲಿರುವ ವಿಷಯವು ನಾಗರಿಕರಲ್ಲಿ ತಪ್ಪು ತಿಳುವಳಿಕೆಯನ್ನು ಉಂಟುಮಾಡುತ್ತದೆ ಎಂದು ಒಪ್ಪಿಕೊಂಡಿದ್ದಾರೆ. ಕೌಂಟಿ ಬ್ಯೂರೋ ಆಫ್ ಎಜುಕೇಶನ್ ಇದನ್ನು ಖಂಡಿಸಿದೆ. ಹಾಗೆಯೇ ಇದನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಾಲೆಗೆ ಸೂಚಿಸಿದೆ. ಕೆಲವರು ಪಠ್ಯವನ್ನು ಆಕ್ಷೇಪಾರ್ಹ ಎಂದೂ ಕರೆದಿದ್ದಾರೆ. ಶಾಲೆಯು ತನ್ನ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿದರೆ ಉತ್ತಮ ಎಂದು ಸಾಮಾಜಿಕ ಬಳಕೆದಾರರು ಹೇಳಿದ್ದಾರೆ.