

ನವದೆಹಲಿ: ಸಾವಿರಾರು ಕೋಟಿ ರೂ. ಸಂಪತ್ತಿನ ಒಡೆಯನಾಗಿದ್ದ. ಪೊಲೀಸರಿಂದ ಬಂಧನಕ್ಕೆ ಒಳಗಾಗುತ್ತಿದ್ದಂತೆ ಆತನ ಸಂಪತ್ತು ಏಳು ಸಾವಿರ ಕೋಟಿ ರೂ. ಕರಗಿ ಹೋಯಿತು.
ಹೌದು... ಇದು ಚೀನಾದ ಎಂಟನೇ ಅತಿ ದೊಡ್ಡ ರಿಯಲ್ ಎಸ್ಟೇಟ್ ಕಂಪನಿ ಸೀಝೆನ್ ಮಾಲೀಕ ವಾಂಗ್ ಜೆನ್ಹುವಾ ಕಥೆ. ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಏಕೆಂದರೆ, ಈತನಿಗೆ ಚೀನಾದ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ಜುಲೈನಲ್ಲಿ ವಾಂಗ್ ವಿರುದ್ಧ ಮಕ್ಕಳ ಮೇಲೆ ದೌರ್ಜನ್ಯ ಆರೋಪ ಹೊರಿಸಲಾಗಿತ್ತು. ಇದಾಗುತ್ತಿದ್ದಂತೆ ಎಂಟನೇ ಸ್ಥಾನದಲ್ಲಿದ್ದ ಕಂಪನಿ 13ನೇ ಸ್ಥಾನಕ್ಕಿಳಿಯಿತು. ಷೇರುದಾರರು ತನ್ನ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ತನ್ನ ಮಗನನ್ನು ಕಂಪನಿಯ ಮುಖ್ಯಸ್ಥನಾಗಿಸಿದ.
ಸತತ ಎರಡು ದಿನಗಳವರೆಗೆ ವಿಚಾರಣೆ ನಡೆಸಿದ ಕೋರ್ಟ್ ವಾಂಗ್ ತಪ್ಪಿತಸ್ಥ ಎಂದು ಘೋಷಿಸಿ ಐದು ವರ್ಷಗಳ ಶಿಕ್ಷೆ ವಿಧಿಸಿದೆ. ಮಕ್ಕಳ ದೌರ್ಜನ್ಯದಲ್ಲಿ ವಿಧಿಸಲಾಗುವ ಗರಿಷ್ಠ ಶಿಕ್ಷೆ ಇದಾಗಿದೆ.
ಕೋರ್ಟ್ ತೀರ್ಪಿನ ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಂಪನಿಯ ಷೇರು ಮೌಲ್ಯ ಪಾತಾಳಕ್ಕೆ ಕುಸಿದಿದೆ. ಈತನ ಸಂಪತ್ತಿನ ಮೌಲ್ಯ 6.6 ಬಿಲಿಯನ್ ಡಾಲರ್ಗಳಿಂದ ಕುಸಿದು 5.7 ಬಿಲಿಯನ್ ಡಾಲರ್ಗೆ ಇಳಿದಿದೆ. ಇನ್ನಷ್ಟು ಕೆಳಕ್ಕೆ ಕುಸಿಯುವ ಭೀತಿ ಎದುರಾಗಿದೆ.