

ನವದೆಹಲಿ: ಲಡಾಖ್ ಪ್ರದೇಶದ ವಾಸ್ತವ ಗಡಿರೇಖೆಯ ಭಾರತದ ಭಾಗದೊಳಗೆ ತುಮಬಾ ಒಳಗಿನವರೆಗೂ ಅತಿಕ್ರಮಿಸಲು ಚೀನಿ ಯೋಧರು ಸಂಚು ರೂಪಿಸಿದ್ದರು. ಆದರೆ, ಭಾರತೀಯ ಸೇನಾಪಡೆ ಸಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಿದ್ದರಿಂದ ಚೀನಿಯರ ಪ್ರಯತ್ನ ವಿಫಲವಾಯಿತು ಎಂದು ಹೇಳಲಾಗಿದೆ.
ಲಡಾಖ್ ಗಲ್ವಾನ್ ಕಣಿವೆಯ ಮೂರು ಕಡೆ ಮತ್ತು ಪ್ಯಾಂಗಾಂಗ್ ಸರೋವರದ ಒಂದು ಕಡೆ ಸೇರಿ ನಾಲ್ಕು ಕಡೆಗಳಲ್ಲಿ ಭಾರತೀಯ ಯೋಧರ ಜತೆ ಹೊಡೆದಾಟ ನಡೆಸಿದ ಬಳಿಕ ಚೀನಿಯರು ಭಾರತದ ಭಾಗದ ತೀರಾ ಒಳಗಿನವರೆಗೂ ಅತಿಕ್ರಮಿಸಲು ಉದ್ದೇಶಿಸಿದ್ದರು. ಈ ಉದ್ದೇಶದಿಂದಲೇ ಅವರು ತುಂಬಾ ತ್ವರಿತವಾಗಿ ಅವರು 5 ಸಾವಿರಕ್ಕೂ ಹೆಚ್ಚು ಯೋಧರು, ಯುದ್ಧೋಪಕರಣಗಳನ್ನು ಸಾಗಿಸಿದರು ಎಂದು ಭದ್ರತಾ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
ದೌಲತಾ ಬೇಗ್ ಓಲ್ಡೀಯಿಂದ ಹಿಡಿದು ಪ್ಯಾಂಗಾಂಗ್ ತ್ಸೊ ಸರೋವರದವರೆಗೆ ಚೀನಿಯರು ಎಲ್ಲೆಲ್ಲಿ, ಹೇಗೆಲ್ಲ ಅತಿಕ್ರಮಣ ಮಾಡಿದ್ದರು ಎಂಬ ಮಾಹಿತಿಯನ್ನೂ ವರದಿ ಒಳಗೊಂಡಿದೆ.