

ನವದೆಹಲಿ: ಭಾರತದ ಜತೆ ಘರ್ಷಣೆಗಿಳಿದಿರುವ ಚೀನಾ ಇದೀಗ ಭಾರಿ ತೆರಬೇಕಾದ ಪರಿಸ್ಥಿತಿ ತಲೆದೋರಿದೆ.
ಭಾರತದಲ್ಲಿ ತನ್ನ ವಸ್ತುಗಳನ್ನು ಮಾರಾಟ ಮಾಡುವ ಮೂಲಕವೇ ಲಕ್ಷಲಕ್ಷ ಕೋಟಿ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ ಚೀನಾ ಇದೀಗ ಭಾರತದಲ್ಲಿ ಬಹಿಷ್ಕಾರ ಎದುರಿಸಬೇಕಾದ ಪರಿಸ್ಥಿತಿ ತಲೆದೋರಿದೆ.
ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮಾತು ಚಾಲ್ತಿಯಲ್ಲಿ ಇರುವಾಗಲೇ, ಈ ನಿಟ್ಟಿನಲ್ಲಿ ಹಲವಾರು ಹೋರಾಟಗಳು ನಡೆಯುತ್ತಿರುವ ನಡುವೆಯೇ ಇದೀಗ ಚೀನಾದ ಅತಿಥಿಗಳಿಗೆ ರಾಷ್ಟ್ರ ರಾಜಧಾನಿಯಲ್ಲಿನ ಹೋಟೆಲ್‌ಗಳು ಮತ್ತು ಅತಿಥಿಗೃಹಗಳಲ್ಲಿ ವಸತಿ ನೀಡಲು ಅವಕಾಶ ನೀಡುವುದಿಲ್ಲ ಎಂದು ದೆಹಲಿಯ ಹೋಟೆಲ್ ಮತ್ತು ಅತಿಥಿ ಗೃಹ ಮಾಲೀಕರ ಸಂಘ ಘೋಷಿಸಿದೆ.
ಚೀನಾವನ್ನು ಬಹಿಷ್ಕರಿಸುವಂತೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರನ್ನು ಒತ್ತಾಯಿಸುತ್ತಿರುವ ಬೆನ್ನಲ್ಲೇ ಇಂಥದ್ದೊಂದು ಮಹತ್ವದ ನಿರ್ಧಾರವನ್ನು ಸಂಘ ತೆಗೆದುಕೊಂಡಿದೆ.
ದೆಹಲಿಯಲ್ಲಿ ಸುಮಾರು 3,000 ಬಜೆಟ್ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳಿವೆ. ಭಾರತಕ್ಕೆ ಯಾವುದೇ ಕೆಲಸಕ್ಕೆ ಬರುವುದಿದ್ದರೂ ಸಾಮಾನ್ಯವಾಗಿ ದೆಹಲಿಯಲ್ಲಿಯೇ ಕೆಲಸವಿರುತ್ತದೆ. ಅಂಥ ಸಂದರ್ಭಗಳಲ್ಲಿ ಬಜೆಟ್ ಹೋಟೆಲ್‌ಗಳಲ್ಲಿಯೇ ಉಳಿದುಕೊಳ್ಳುವುದು ಸಾಮಾನ್ಯ. ಇದೀಗ ಈ ಹೋಟೆಲ್‌ಗಳು ಚೀನಿಯರಿಗೆ ನೋ ಎಂಟ್ರಿ ಬೋರ್ಡ್ ಹಾಕಿವೆ.
ಚೀನಾ ಭಾರತದೊಂದಿಗೆ ವ್ಯವಹರಿಸುವ ರೀತಿ ಮತ್ತು ಸೈನಿಕರನ್ನು ಹತ್ಯಾಕಾಂಡ ಮಾಡಿದ ರೀತಿಯನ್ನು ಉಲ್ಲೇಖಿಸಿ, ಗುಂಪಿನ ಪ್ರಧಾನ ಕಾರ್ಯದರ್ಶಿ ದೆಹಲಿಯ ಎಲ್ಲಾ ಹೋಟೆಲ್‌ಗಳು ನಿರ್ದೇಶನವನ್ನು ಪಾಲಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಸಿಎಟಿ ಪ್ರಾರಂಭಿಸಿದ ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆಗೆ ದೇಶದ ವಿವಿಧ ಭಾಗಗಳ ಜನರು ಸೇರುತ್ತಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ. (ಏಜೆನ್ಸೀಸ್)